ADVERTISEMENT

ಕೋಟೆ ನಗರಿಯಲ್ಲಿ ಸರಣಿ ಪ್ರತಿಭಟನೆ

ಬೀದಿಗೆ ಇಳಿದ ರೈತರು, ಕಾರ್ಮಿಕರು, ಮುಸ್ಲಿಮರು, ದಲಿತರು

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2018, 13:17 IST
Last Updated 30 ಅಕ್ಟೋಬರ್ 2018, 13:17 IST
ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ರೈತರು ಚಿತ್ರದುರ್ಗದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು
ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ರೈತರು ಚಿತ್ರದುರ್ಗದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು   

ಚಿತ್ರದುರ್ಗ: ಎಲ್ಲ ರೀತಿಯ ಸಾಲ ಮನ್ನಾ ಮಾಡುವಂತೆ ರೈತರು, ₹ 5 ಸಾವಿರ ಪಿಂಚಣಿಗೆ ಒತ್ತಾಯಿಸಿ ಕಾರ್ಮಿಕರು, ಅಜೀಂ ಎಂಬ ಬಾಲಕನ ಕೊಲೆ ಖಂಡಿಸಿ ಮುಸ್ಲಿಮರು ಹಾಗೂ ರಾಜಕಾಲುವೆ ಒತ್ತುವರಿ ತೆರವಿಗೆ ಆಗ್ರಹಿಸಿ ಸ್ಥಳೀಯ ನಿವಾಸಿಗಳು ಮಂಗಳವಾರ ಸರಣಿ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಾಲ್ಕು ವರ್ಷಗಳಿಂದ ಜಿಲ್ಲೆಯಲ್ಲಿ ಸಮರ್ಪಕ ಮಳೆ ಬೀಳುತ್ತಿಲ್ಲ. ಬರಪೀಡಿತ ಪ್ರದೇಶದಲ್ಲಿ ವಾಸಿಸುವ ರೈತರು ಜೀವನ ನಿರ್ವಹಣೆಗಾಗಿ ಕಷ್ಟಪಡುತ್ತಿದ್ದಾರೆ. ಸಾಲ ಮರುಪಾವತಿಸುವಂತೆ ಬ್ಯಾಂಕ್‌ಗಳು ನೋಟಿಸ್‌ ಜಾರಿ ಮಾಡುವುದನ್ನು ನಿಲ್ಲಿಸಬೇಕು. ಖಾಸಗಿ ಫೈನಾನ್ಸ್‌, ಚಿನ್ನ, ಯಂತ್ರಗಳ ಮೇಲಿನ ಸಾಲವನ್ನೂ ಮನ್ನಾ ಮಾಡಬೇಕು ಎಂದು ರಾಜ್ಯ ರೈತ ಸಂಘದ ಕಾರ್ಯಕರ್ತರು ಒತ್ತಾಯಿಸಿದರು.

ADVERTISEMENT

ಬರ ಪರಿಸ್ಥಿತಿಯಿಂದ ಗ್ರಾಮಗಳು ತತ್ತರಿಸಿವೆ. ಮಕ್ಕಳೊಂದಿಗೆ ರೈತರು ಗುಳೆ ಹೊರಟಿದ್ದಾರೆ. ಗುಳೆ ತಪ್ಪಿಸಲು ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ನೀಡಬೇಕು. ಎರಡು ವರ್ಷಗಳಿಂದ ಬಾಕಿ ಇರುವ ರೈತರ ಬೆಳೆ ವಿಮೆಯನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಸಂಘದ ಮುಖಂಡರಾದ ಈ.ಸಿ.ಬೋರಯ್ಯ, ಎಚ್‌.ಬಸವಲಿಂಗಪ್ಪ, ಎಚ್‌.ಶಿವಮೂರ್ತಿ, ಲೋಲಾಕ್ಷಮ್ಮ ಇದ್ದರು.

ಸಾಲ ಸೌಲಭ್ಯಕ್ಕೆ ಆಗ್ರಹ: ಆಲ್‌ ಇಂಡಿಯಾ ಟ್ರೇಡ್‌ ಯೂನಿಯನ್‌ ಕಾಂಗ್ರೆಸ್‌ (ಎಐಟಿಯುಸಿ) ನೇತೃತ್ವದಲ್ಲಿ ಜಮಾಯಿಸಿದ ಕಟ್ಟಡ ಕಾರ್ಮಿಕರು ಸಾಲ ಸೌಲಭ್ಯ ನೀಡುವಂತೆ ಒತ್ತಾಯಿಸಿದರು.

ಅಸಂಘಟಿತ ಕಾರ್ಮಿಕರ ಏಳಿಗೆಗಾಗಿ ರಾಜ್ಯ ಕಟ್ಟಡ ಕಾರ್ಮಿಕರ ಮಂಡಳಿ ಅಸ್ತಿತ್ವಕ್ಕೆ ಬಂದಿದೆ. ನೋಂದಾಯಿತ ಕಾರ್ಮಿಕರ ಮದುವೆ, ಹೆರಿಗೆಗೆ ಧನ ಸಹಾಯ ನೀಡಲು ಅವಕಾಶವಿದೆ. ಅಡುಗೆ ಅನಿಲ ಸಂಪರ್ಕ, ಶಿಕ್ಷಣ, ಮನೆ ನಿರ್ಮಾಣಕ್ಕೂ ಸಾಲ ಸೌಲಭ್ಯ ಕಲ್ಪಿಸಬಹುದು. ಆದರೆ, ಮಂಡಳಿ ಈ ಸೌಲಭ್ಯಗಳನ್ನು ಕಾರ್ಮಿಕರಿಗೆ ವಿತರಿಸುತ್ತಿಲ್ಲ ಎಂದು ಆರೋಪಿಸಿದರು.

ಎಐಟಿಯುಸಿ ಗೌರವಾಧ್ಯಕ್ಷ ಸಿ.ವೈ.ಶಿವರುದ್ರಪ್ಪ, ಸಂಘಟನಾ ಕಾರ್ಯದರ್ಶಿ ಕೆ.ಈ.ಸತ್ಯಕೀರ್ತಿ ಇದ್ದರು.

ಕಠಿಣ ಶಿಕ್ಷೆಗೆ ಮನವಿ:ದೆಹಲಿಯ ಮಹಮ್ಮದ್ ಅಜಿಂ ಎಂಬ 8 ವರ್ಷದ ಬಾಲಕನನ್ನು ಅಮಾನವೀಯವಾಗಿ ಕೊಲೆ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಚಿತ್ರದುರ್ಗ ವೆಲ್‌ಫೇರ್‌ ಅಸೋಸಿಯೇಷನ್‌ ಕಾರ್ಯಕರ್ತರು ‍ಮನವಿ ಮಾಡಿದರು.

ಶಾಲಾ ಆವರಣದಲ್ಲಿ ಆಟವಾಡುತ್ತಿದ್ದ ಬಾಲಕನ ಮೇಲೆ ಗುಂಪೊಂದು ಏಕಾಏಕಿ ದಾಳಿ ನಡೆಸಿದೆ. ಹಲ್ಲೆ ನಡೆಸಿ ಕೊಲೆ ಮಾಡಿದ್ದು ಅಮಾನವೀಯವಾಗಿದೆ. ದೇಶದಲ್ಲಿ ಇಂತಹ ಗುಂಪು ದಾಳಿಗಳು ಹೆಚ್ಚಾಗುತ್ತಿವೆ. ಸುಪ್ರೀಂ ಕೋರ್ಟ್‌ ಕೂಡಲೇ ಮಧ್ಯಪ್ರವೇಶ ಮಾಡಬೇಕು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಕೋರಿದರು.

ಒತ್ತುವರಿ ತೆರವಿಗೆ ಒತ್ತಾಯ: ಮಠದ ಕುರುಬರಹಟ್ಟಿ ಕೆರೆಗೆ ಸಂಪರ್ಕ ಕಲ್ಪಿಸಿದ ರಾಜಕಾಲುವೆ ಒತ್ತುವರಿ ತೆರವುಗೊಳಿಸುವಂತೆ ಒತ್ತಾಯಿಸಿ ಜೈ ಹಿಂದ್‌ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಚೋಳಗುಡ್ಡ, ರೈಲ್ವೆ ನಿಲ್ದಾಣದ ಬಡಾವಣೆ ಮೂಲಕ ಹಾದು ಮಠದ ಕುರುಬರಹಟ್ಟಿ ಸೇರುವ ರಾಜಕಾಲುವೆ ಗಾತ್ರ ಚಿಕ್ಕದಾಗಿದೆ. ಅಲ್ಲಲ್ಲಿ ಕಾಲುವೆ ಮುಚ್ಚಿ ಬಡಾವಣೆ ನಿರ್ಮಾಣ ಮಾಡಲಾಗಿದೆ. ಇದರಿಂದ ಮಳೆಗಾಲದಲ್ಲಿ ಅನೇಕ ಬಡಾವಣೆಗಳಿಗೆ ನೀರು ನುಗ್ಗುತ್ತಿದೆ. ಜಿಲ್ಲಾಡಳಿತ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ವೇದಿಕೆಯ ಮುಖಂಡ ಸೈಯದ್‌ ಅಕ್ತರ್‌ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.