ADVERTISEMENT

ಚಿತ್ರದುರ್ಗ: ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 26 ಮೇ 2025, 15:07 IST
Last Updated 26 ಮೇ 2025, 15:07 IST
ಚಿತ್ರದುರ್ಗದ ಶಾಲಾ ಶಿಕ್ಷಣ ಇಲಾಖೆ ಆವರಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಸದಸ್ಯರು ಸೋಮವಾರ ಪ್ರತಿಭಟನೆ ನಡೆಸಿದರು
ಚಿತ್ರದುರ್ಗದ ಶಾಲಾ ಶಿಕ್ಷಣ ಇಲಾಖೆ ಆವರಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಸದಸ್ಯರು ಸೋಮವಾರ ಪ್ರತಿಭಟನೆ ನಡೆಸಿದರು   

ಚಿತ್ರದುರ್ಗ: ಪ್ರವೇಶಾತಿ ವಿಚಾರದಲ್ಲಿ ಸರ್ಕಾರದ ನಿಯಮಾವಳಿಗಳನ್ನು ಪಾಲಿಸದ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಕ್ರಮಕ್ಕೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಇಲ್ಲಿನ ಶಾಲಾ ಶಿಕ್ಷಣ ಇಲಾಖೆ ಆವರಣದಲ್ಲಿ ಜಮಾಯಿಸಿದ ರೈತರು, ಜಿಲ್ಲೆಯ ಖಾಸಗಿ ಶಿಕ್ಷಣ ಸಂಸ್ಥೆಗಳು ಮನಬಂದಂತೆ ಶುಲ್ಕ ವಸೂಲಿ ಮಾಡುತ್ತಿದ್ದಾರೆ. ಈ ಮೂಲಕ ಪಾಲಕರನ್ನು ಆರ್ಥಿಕ ಶೋಷಣೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪೂರ್ವ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಎಲ್ಲಾ ಸರ್ಕಾರಿ ಶಾಲಾ ಕಾಲೇಜುಗಳನ್ನು ಖಾಸಗಿಯವರಂತೆ ಉನ್ನತೀಕರಿಸಬೇಕು. ಶಾಲೆಗಳನ್ನು ಮುಚ್ಚುವ ಸ್ಥಿತಿಗೆ ತಂದಿರುವ ಖಾಸಗಿ ಶಾಲೆಗಳ ವಾಹನಗಳನ್ನು ಹಳ್ಳಿಗಳಿಗೆ ಬರುವುದನ್ನು ತಡೆಯಬೇಕು ಎಂದು ಆಗ್ರಹಿಸಿದರು.

ADVERTISEMENT

ಗ್ರಾಮೀಣ ಭಾಗದ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ದ್ವಿಗುಣಗೊಳ್ಳಲು ಕ್ರಮ ಕೈಗೊಳ್ಳಬೇಕು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಫಲಿತಾಂಶ ಕುಸಿತವಾಗಿರುವ ಶಾಲಾ ಕಾಲೇಜುಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ವಾರಕ್ಕೆ ಎರಡು ಅವಧಿ ನೀತಿಪಾಠ ಬೋಧನೆ ಕಡ್ಡಾಯಗೊಳಿಸಬೇಕು ಎಂದು ಮನವಿ ಮಾಡಿದರು.

ದುಬಾರಿ ಶುಲ್ಕ ಪಡೆದಿರುವ ಎಲ್ಲಾ ಶಾಲೆಗಳು ಗೌರವಯುತವಾಗಿ ಪಾಲಕರ ಕ್ಷಮೆ ಕೇಳಿ ಅನಧಿಕೃತ ಶುಲ್ಕವನ್ನು ವಾಪಸ್‌ ನೀಡಬೇಕು ಎಂದು ಆಗ್ರಹಿಸಿದರು.

ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಆರ್‌.ಮಂಜುನಾಥ್‌ ಅವರಿಗೆ ಮನವಿ ಸಲ್ಲಿಸಿದರು. ರಾಜ್ಯ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ, ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ, ಎ.ಅಜ್ಜಪ್ಪ, ಎಚ್‌.ಪ್ರಸನ್ನ, ಮಂಜುನಾಥ್‌, ರತ್ನಮ್ಮ, ನಿಂಗಮ್ಮ, ಜಯಮ್ಮ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.