ADVERTISEMENT

ಹಲ್ಲೆಕೋರರ ಬಂಧನಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 29 ಮೇ 2020, 14:38 IST
Last Updated 29 ಮೇ 2020, 14:38 IST
ಚಿತ್ರದುರ್ಗದ ಒನಕೆ ಓಬವ್ವ ವೃತ್ತದಲ್ಲಿ ಆಶಾ ಕಾರ್ಯಕರ್ತೆಯರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಚಿತ್ರದುರ್ಗದ ಒನಕೆ ಓಬವ್ವ ವೃತ್ತದಲ್ಲಿ ಆಶಾ ಕಾರ್ಯಕರ್ತೆಯರು ಶುಕ್ರವಾರ ಪ್ರತಿಭಟನೆ ನಡೆಸಿದರು.   

ಚಿತ್ರದುರ್ಗ: ಕೊರೊನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ತೊಡಗಿಸಿಕೊಂಡ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸುವಂತೆ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಒತ್ತಾಯಿಸಿದೆ.

‘ಆಶಾ ಸಂರಕ್ಷಣಾ ದಿನ’ದ ಅಂಗವಾಗಿ ಒನಕೆ ಓಬವ್ವ ವೃತ್ತದಲ್ಲಿ ಜಮಾಯಿಸಿದ ಸಂಘದ ಸದಸ್ಯರು ಪ್ಲೆಕಾರ್ಡ್‌ ಹಿಡಿದು ಗಮನ ಸೆಳೆದರು. ಮಾರ್ಚ್‌ ತಿಂಗಳ ಸೇವೆಗೆ ವಿಶೇಷ ಪ್ಯಾಕೇಜ್‌ ರೂಪಿಸಿ ಪ್ರತಿಯೊಬ್ಬ ಕಾರ್ಯಕರ್ತೆಗೆ ₹ 10 ಸಾವಿರ ಗೌರವ ಧನ ನೀಡುವಂತೆ ಆಗ್ರಹಿಸಿದರು.

ಕೊರೊನಾ ಸೋಂಕು ಹರಡುವುದನ್ನು ತಡೆಯಲು ಸರ್ಕಾರ ಲಾಕ್‌ಡೌನ್‌ ಘೋಷಣೆ ಮಾಡಿತು. ಜೀವಭಯದಿಂದ ಎಲ್ಲರೂ ಮನೆಯಲ್ಲೇ ಉಳಿದರು. ಆದರೆ, ಆಶಾ ಕಾರ್ಯಕರ್ತೆಯರು ಜೀವದ ಹಂಗು ತೊರೆದು ಕೆಲಸ ಮಾಡಿದರು. ಎರಡು ತಿಂಗಳು ಅವಿರತವಾಗಿ ಶ್ರಮಿಸಿ ಸೋಂಕು ನಿವಾರಣೆಗೆ ಶ್ರಮಿಸಿದರು. ಆದರೆ, ಸರ್ಕಾರ ಹಾಗೂ ಸಮಾಜ ಆಶಾ ಕಾರ್ಯಕರ್ತೆಯರನ್ನು ನಡೆಸಿಕೊಂಡ ರೀತಿ ಅಮಾನವೀಯವಾಗಿದೆ ಎಂದು ಆರೋಪಿಸಿದರು.

ADVERTISEMENT

ಆಶಾ ಕಾರ್ಯಕರ್ತೆಯರು ಜೀವ ಭಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಹಲ್ಲೆಗೆ ಒಳಗಾಗಿರುವವರಿಗೆ ಗೌರವ ಧನ ಇಲ್ಲದೇ ಜೀವನ ನಿರ್ವಹಣೆಗೆ ತೊಂದರೆ ಅನುಭವಿಸುತ್ತಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಇರುವ ಗೊಂದಲ ಕೂಡ ಆಶಾ ಕಾರ್ಯಕರ್ತೆಯರನ್ನು ಬಲಿಪಶು ಮಾಡಿದೆ. ಕೋವಿಡ್‌–19ಗೆ ಬಲಿಯಾಗುವ ಕಾರ್ಯಕರ್ತೆಯರ ಕುಟುಂಬಕ್ಕೆ ₹ 50 ಲಕ್ಷ ವಿಮಾ ಸೌಲಭ್ಯ ಒದಗಿಸಬೇಕು ಎಂದು ಮನವಿ ಮಾಡಿದರು.

ಆಶಾ ಕಾರ್ಯಕರ್ತೆಯರಾದ ಗಿರಿಜಮ್ಮ, ಲಕ್ಷ್ಮಿ, ನೇತ್ರ, ಪಾತೀಮ, ಜಮೀಳ ಬೇಗಂ, ಸಂಘದ ಮುಖಂಡರಾದ ಸುಜಾತ, ಕುಮುದ ಮತ್ತು ಮೇಘನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.