ADVERTISEMENT

ಚಿತ್ರದುರ್ಗ: 18ಕ್ಕೆ ಸಿಎಂ ಮನೆ ಎದುರು ಧರಣಿ

ಕರ್ನಾಟಕ ರಾಜ್ಯ ರೈತ ಸಂಘದ ಸಭೆಯಲ್ಲಿ ನಿರ್ಣಯ

​ಪ್ರಜಾವಾಣಿ ವಾರ್ತೆ
Published 5 ಮೇ 2022, 14:00 IST
Last Updated 5 ಮೇ 2022, 14:00 IST
ಈಚಘಟ್ಟ ಸಿದ್ಧವೀರಪ್ಪ
ಈಚಘಟ್ಟ ಸಿದ್ಧವೀರಪ್ಪ   

ಚಿತ್ರದುರ್ಗ: ಸ್ಥಗಿತಗೊಂಡಿರುವ ರಾಗಿ, ಜೋಳ, ಭತ್ತ ಖರೀದಿ ಕೇಂದ್ರಗಳನ್ನು ಪುನರಾರಂಭಿಸಬೇಕು ಎಂದು ಒತ್ತಾಯಿಸಿ ಹಾವೇರಿ ಜಿಲ್ಲೆಯ ಶಿಗ್ಗಾವಿಯಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿವಾಸದ ಎದುರು ಧರಣಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಈಚಘಟ್ಟ ಸಿದ್ಧವೀರಪ್ಪ ತಿಳಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಮಟ್ಟದ ಸಭೆಯ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

‘ಕೈಗಾರಿಕೋತ್ಪನ್ನಗಳ ಬೆಲೆಯನ್ನು ಉದ್ಯಮಿಗಳೇ ನಿರ್ಧರಿಸುತ್ತಾರೆ. ಕೃಷಿ ಉತ್ಪನ್ನಗಳ ಬೆಲೆ ನಿಗದಿ ಮಾಡುವ ಅಧಿಕಾರ ರೈತರಿಗಿಲ್ಲ. ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ನೀಡುವ ಹಾಗೂ ರೈತರ ಆತ್ಮಹತ್ಯೆ ತಪ್ಪಿಸುವ ಉದ್ದೇಶದಿಂದ ಸ್ವಾಮಿನಾಥನ್ ಆಯೋಗ ಸರ್ಕಾರಕ್ಕೆ ವರದಿ ನೀಡಿದೆ. ವರದಿ ಸಲ್ಲಿಸಿ 16 ವರ್ಷ ಕಳೆದರೂ ಅನುಷ್ಠಾನಕ್ಕೆ ತರಲು ಸರ್ಕಾರ ಇಚ್ಛಾಶಕ್ತಿ ತೋರುತ್ತಿಲ್ಲ’ ಎಂದು ಆರೋಪಿಸಿದರು.

ADVERTISEMENT

‘ಖರೀದಿ ಕೇಂದ್ರಗಳಲ್ಲಿ ನೆಪಮಾತ್ರಕ್ಕೆ ಕೃಷಿ ಉತ್ಪನ್ನ ಖರೀದಿಸಲಾಗುತ್ತಿದೆ. ಕೇಂದ್ರ ಸರ್ಕಾರ ಘೋಷಣೆ ಮಾಡಿದ ರೀತಿಯಲ್ಲಿ ಬೆಂಬಲ ಬೆಲೆ ಸಿಗುತ್ತಿಲ್ಲ. ಹೋರಾಟವನ್ನು ತೀವ್ರಗೊಳಿಸುವ ಉದ್ದೇಶದಿಂದ ಮುಖ್ಯಮಂತ್ರಿ ಸ್ವಕ್ಷೇತ್ರದಲ್ಲಿ ಧರಣಿ ಆರಂಭಿಸಲಾಗುತ್ತಿದೆ. ಹಂತ–ಹಂತವಾಗಿ ಹೋರಾಟವನ್ನು ವಿಸ್ತರಿಸಲಾಗುತ್ತದೆ’ ಎಂದು ಹೇಳಿದರು.

‘ಎಎಪಿ ಬಗ್ಗೆ ಶೀಘ್ರ ತೀರ್ಮಾನ’
ಮುಂಬರುವ ವಿಧಾನಸಭಾ ಚುನಾವಣೆಗೆ ರೈತ ಸಂಘ ರಾಜಕೀಯ ನಿಲುವು ತಳೆಯಬೇಕಿದೆ. ಆಮ್‌ ಆದ್ಮಿ ಪಕ್ಷ (ಎಎಪಿ) ಬೆಂಬಲಿಸುವ ವಿಚಾರವಾಗಿ ಕಾರ್ಯಕರ್ತರ ಅಭಿಪ್ರಾಯ ಪಡೆದು ಶೀಘ್ರ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಿದ್ಧವೀರಪ್ಪ ಮಾಹಿತಿ ನೀಡಿದರು.

‘ಎಎಪಿ ಹಾಗೂ ರೈತ ಸಂಘದ ವಿಚಾರಧಾರೆಗಳಿಗೆ ಸಾಮ್ಯತೆ ಇದೆ. ದೆಹಲಿಯಲ್ಲಿ ಉತ್ತಮ ಆಡಳಿತ ನೀಡುತ್ತಿರುವ ಎಎಪಿ, ಪಂಜಾಬ್‌ಗೂ ಅಧಿಕಾರ ವಿಸ್ತರಿಸಿದೆ. ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಘಟಕಗಳ ಸಭೆ ಕರೆದು ಸಮಾಲೋಚನೆ ನಡೆಸಿ ಮುಂದಿನ ನಡೆ ತಿಳಿಸಲಾಗುತ್ತದೆ’ ಎಂದರು.

ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಚೂನಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿ ಅಬ್ಬಾಣಿ ಶಿವಪ್ಪ, ಮುಖಂಡರಾದ ರಾಘವೇಂದ್ರ ನಾಯಕ್‌, ಪ್ರಕಾಶ್‌ ನಾಯಕ್‌, ಭರಮಣ್ಣ, ಡಿ.ಎಸ್‌.ಹಳ್ಳಿ ಮಲ್ಲಿಕಾರ್ಜುನ್‌ ಇದ್ದರು.

***

ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ವಿಪರೀತ ಶುಲ್ಕ ವಸೂಲಿ ಮಾಡಲಾಗುತ್ತಿದೆ. ರೈತರು, ಬಡ ಕೂಲಿ ಕಾರ್ಮಿಕರ ಮಕ್ಕಳು ಶಿಕ್ಷಣ ಪಡೆಯುವುದು ಕಷ್ಟವಾಗುತ್ತಿದೆ. ಇದರ ವಿರುದ್ಧ ಹೋರಾಟ ನಡೆಸಲಾಗುವುದು.
-ಈಚಗಟ್ಟ ಸಿದ್ಧವೀರಪ್ಪ,ಕಾರ್ಯಾಧ್ಯಕ್ಷ, ರಾಜ್ಯ ರೈತ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.