ADVERTISEMENT

ಅಲೆಮಾರಿಗಳಿಗೆ ಶೇ 1 ರಷ್ಟು ಮೀಸಲಾತಿ ನೀಡಿ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2025, 7:54 IST
Last Updated 26 ಆಗಸ್ಟ್ 2025, 7:54 IST
ಚಿತ್ರದುರ್ಗದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದ ಸ್ಲಂ ಜನಾಂದೋಲನ ಜಿಲ್ಲಾ ಘಟಕ
ಚಿತ್ರದುರ್ಗದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದ ಸ್ಲಂ ಜನಾಂದೋಲನ ಜಿಲ್ಲಾ ಘಟಕ   

ಚಿತ್ರದುರ್ಗ: ಅಲೆಮಾರಿ ಜನಾಂಗಕ್ಕೆ ಪ್ರತ್ಯೇಕ ಶೇ 1 ರಷ್ಟು ಮೀಸಲಾತಿ ನೀಡುವಂತೆ ಆಗ್ರಹಿಸಿ ಸ್ಲಂ ಜನಾಂದೋಲನ ಜಿಲ್ಲಾ ಘಟಕದಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಒಳಮೀಸಲು ವಿಚಾರವಾಗಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್‌ ಅವರ ಏಕಸದಸ್ಯ ಆಯೋಗದ ದತ್ತಾಂಶ ಆಧಾರಿತ ಶಿಫಾರಸ್ಸಿನಂತೆ ಅಸ್ಪೃಶ್ಯ ಸಂಬಂಧಿತ ಅಲೆಮಾರಿ ಸಮುದಾಯಕ್ಕೆ ಶೇ 1 ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು.

ಒಳ ಮೀಸಲಾತಿಗಾಗಿ 35 ವರ್ಷಗಳಿಂದ ಪರಿಶಿಷ್ಟ ಜಾತಿಗಳು ನಡೆಸಿದ ಹೋರಾಟದ ಫಲವಾಗಿ ಸುಪ್ರೀಂ ಕೋರ್ಟ್‌ 2024ರ ಆ. 1ರಂದು ನೀಡಿದ ಆದೇಶದ ಮೇರೆಗೆ ರಾಜ್ಯ ಸರ್ಕಾರ ದತ್ತಾಂಶ ಸಮೀಕ್ಷೆಗೆ ಆಯೋಗ ರಚಿಸಿತ್ತು. ಈ ಹಿನ್ನೆಲೆಯಲ್ಲಿ ಆಯೋಗ ಪರಿಶಿಷ್ಟ ಜಾತಿಗಳ ಪ್ರವರ್ಗ–ಎ ಯಲ್ಲಿ ಸೂಕ್ಷ್ಮ ಮತ್ತು ಅಲೆಮಾರಿ ಜಾತಿಗಳನ್ನು ಸೇರಿಸಿ ಶೇ 1 ರಷ್ಟು ಮೀಸಲಾತಿಗಾಗಿ ಶಿಫಾರಸ್ಸು ಮಾಡಿದೆ. ಆದರೆ, ಅಸ್ಪೃಶ್ಯ ಸಂಬಂಧಿತ ಅಲೆಮಾರಿ ಜಾತಿಗಳನ್ನು ಇತರೆ ಸ್ಪರ್ಶ ಜಾತಿಗಳ ಜೊತೆ ಸೇರಿಸಿ ಶೇ 5ರ ಗುಂಪಿಗೆ ಸೇರಿಸಿರುವುದು, ಅಲೆಮಾರಿ ಸಮುದಾಯಗಳಿಗೆ ಮರಣ ಶಾಸನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಮುಖಂಡರಾದ ಮಂಜಣ್ಣ, ಸುಧಾ ಮಹೇಶ್, ಭಾಗ್ಯಮ್ಮ, ಅಲೆಮಾರಿ ಸಮುದಾಯದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.