ADVERTISEMENT

ಮಕ್ಕಳ ಕಲ್ಯಾಣ ಸಮಿತಿ ವಿರುದ್ಧ ಕಿಡಿ

ಲೈಂಗಿಕ ದೌರ್ಜನ್ಯ ಸಂತ್ರಸ್ತ ವಿದ್ಯಾರ್ಥಿನಿಯರ ಪರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2022, 5:48 IST
Last Updated 21 ಸೆಪ್ಟೆಂಬರ್ 2022, 5:48 IST
ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿ ಎದುರು ಸಮಾನ ಮನಸ್ಕರ ವೇದಿಕೆ ವತಿಯಿಂದ ಮಂಗಳವಾರ ಧರಣಿ ನಡೆಸಲಾಯಿತು. ಮೈಸೂರಿನ ಒಡನಾಡಿ ಸೇವಾ ಸಂಸ್ಥೆಯ ಪರಶುರಾಮ್‌, ಸ್ಟ್ಯಾನ್ಲಿ ಇದ್ದಾರೆ.
ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿ ಎದುರು ಸಮಾನ ಮನಸ್ಕರ ವೇದಿಕೆ ವತಿಯಿಂದ ಮಂಗಳವಾರ ಧರಣಿ ನಡೆಸಲಾಯಿತು. ಮೈಸೂರಿನ ಒಡನಾಡಿ ಸೇವಾ ಸಂಸ್ಥೆಯ ಪರಶುರಾಮ್‌, ಸ್ಟ್ಯಾನ್ಲಿ ಇದ್ದಾರೆ.   

ಚಿತ್ರದುರ್ಗ: ಲೈಂಗಿಕ ದೌರ್ಜನ್ಯದಿಂದ ಸಂತ್ರಸ್ತರಾಗಿರುವ ವಿದ್ಯಾರ್ಥಿನಿಯರನ್ನು ಬಾಲಕಿಯರ ಬಾಲಮಂದಿರದಿಂದ ಸ್ಥಳಾಂತರಿಸಿ ಶಿಕ್ಷಣಕ್ಕೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿ ಸಮಾನ ಮನಸ್ಕರ ವೇದಿಕೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಧರಣಿ ನಡೆಸಲಾಯಿತು.

‘ಮಕ್ಕಳೊಡನೆ ನಾವು’ ಎಂಬ ಘೋಷಣೆಯೊಂದಿಗೆ ಧರಣಿ ನಡೆಸಿದ ಪ್ರತಿಭಟನಕಾರರು, ಮಕ್ಕಳ ಕಲ್ಯಾಣ ಸಮಿತಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯವರನ್ನು ಕೋರಿದರು.

ಲೈಂಗಿಕ ಕಿರುಕುಳ ಪ್ರಕರಣದ ಸಂತ್ರಸ್ತರಾಗಿರುವ ಇಬ್ಬರು ವಿದ್ಯಾರ್ಥಿನಿಯರು ಮಕ್ಕಳ ಕಲ್ಯಾಣ ಸಮಿತಿ ಸುಪರ್ದಿಯಲ್ಲಿದ್ದಾರೆ. ಬಾಲಕಿಯರ ಸರ್ಕಾರಿ ಬಾಲಮಂದಿರದಲ್ಲಿ ಇವರಿಗೆ ಪ್ರತ್ಯೇಕ ಆಶ್ರಯ ಕಲ್ಪಿಸಿ ಅಕ್ರಮ ಬಂಧನದಲ್ಲಿ ಇಡಲಾಗಿದೆ ಎಂದು ಆರೋಪಿಸಿದರು.

ADVERTISEMENT

ಬಾಲಕಿಯೊಬ್ಬರು ವೈದ್ಯಕೀಯ ಪರೀಕ್ಷೆಗೆ ಒಳಪಡಲು ಸಿದ್ಧರಿದ್ದರೂ ವಿನಾಕಾರಣ ನಿರಾಕರಿಸಲಾಗಿದೆ. ಎಸ್ಸೆಸ್ಸೆಲ್ಸಿ ಓದುತ್ತಿರುವ ಆ ಬಾಲಕಿಯರ ಶಿಕ್ಷಣ ಮೊಟಕುಗೊಳ್ಳುವ ಆತಂಕ ಇದೆ. ಪ್ರಕರಣವನ್ನು ಸಮಗ್ರ ತನಿಖೆಗೆ ಒಳಪಡಿಸಬೇಕು ಎಂದು ಜಿಲ್ಲಾಧಿಕಾರಿಗೆ ನೀಡಿದ ಮನವಿಯಲ್ಲಿ ಆಗ್ರಹಿಸಿದ್ದಾರೆ.

‘ಮಕ್ಕಳನ್ನು ಭೇಟಿ ಮಾಡಿ ಮಾತುಕತೆ ನಡೆಸಲು ಪಾಲಕರು, ವಕೀಲರಿಗೆ ನ್ಯಾಯಾಲಯ ಅನುಮತಿ ನೀಡಿದೆ. ಆದರೆ, ಸಮಿತಿ ಅವಕಾಶ ಕಲ್ಪಿಸುತ್ತಿಲ್ಲ. ಮಕ್ಕಳ ಆತಂಕ ದೂರಮಾಡುವ ಪ್ರಯತ್ನ ನಡೆದಿಲ್ಲ. ಹಾಸ್ಟೆಲ್‌ನಲ್ಲಿದ್ದ ಇತರ ಮಕ್ಕಳನ್ನು ಊರಿಗೆ ಕಳುಹಿಸಲಾಗಿದೆ. ಮಕ್ಕಳ ಶಿಕ್ಷಣ ಮೊಟಕುಗೊಳಿಸುವ ಅಧಿಕಾರ ನೀಡಿದ್ದು ಯಾರು’ ಎಂದು ಒಡನಾಡಿ ಸೇವಾ ಸಂಸ್ಥೆಯ ಪರಶುರಾಮ್‌ ಪ್ರಶ್ನಿಸಿದರು.

‘ಮಕ್ಕಳೊಂದಿಗೆ ನಿರಂತರ ಆಪ್ತ ಸಮಾಲೋಚನೆ ನಡೆಸಬೇಕು ಎಂದು ಬಾಲನ್ಯಾಯ ಕಾಯ್ದೆ ಹೇಳುತ್ತದೆ. ಆದರೆ, ಆ ಮಕ್ಕಳ ನೋವು ಆಲಿಸುವ ಪ್ರಯತ್ನವನ್ನು ಕಲ್ಯಾಣ ಸಮಿತಿ ಮಾಡಿಲ್ಲ. ಮಕ್ಕಳ ಕಲ್ಯಾಣ ಸಮಿತಿ ನ್ಯಾಯದ ಪರಿಧಿಯಲ್ಲಿ ಕೆಲಸ ಮಾಡದೇ ಇದ್ದರೆ ಚಿತ್ರದುರ್ಗ ಜಿಲ್ಲೆಯ ಹಳ್ಳಿಗಳಲ್ಲಿ ಪಾದಯಾತ್ರೆ ನಡೆಸಲಾಗುವುದು. ಈ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ’ ಎಂದು ಅವರು ಎಚ್ಚರಿಸಿದರು.

ಬಿಎಸ್‌ಪಿ ಮುಖಂಡ ಎನ್‌.ಪ್ರಕಾಶ್‌, ದಲಿತ ಹೋರಾಟಗಾರ ರವಿ, ಎಂ.ಆರ್‌.ಹರೀಶ್‌, ಕೆ.ಮಹಾಲಿಂಗಪ್ಪ, ದುರುಗೇಶ್‌ ಇದ್ದರು.

ಸಂತ್ರಸ್ತರಿಗೆ ಮಾನಸಿಕ ಕಿರುಕುಳ: ಆರೋಪ

ಸಂತ್ರಸ್ತ ವಿದ್ಯಾರ್ಥಿನಿಯರ ಹಿತಾಸಕ್ತಿ ಕಾಯಬೇಕಾಗಿದ್ದ ಮಕ್ಕಳ ಕಲ್ಯಾಣ ಸಮಿತಿ, ಪೋಕ್ಸೊ ಮತ್ತು ಬಾಲನ್ಯಾಯ ಕಾಯ್ದೆಯ ಆಶಯಗಳನ್ನು ಗಾಳಿಗೆ ತೂರಿದೆ. ರಕ್ಷಣೆಯ ಹೆಸರಿನಲ್ಲಿ ಸಂತ್ರಸ್ತೆಯರನ್ನು ಇಟ್ಟುಕೊಂಡು ಆರೋಪಿ ಪರವಾಗಿ ನಿಂತಿದೆ. ಸಂತ್ರಸ್ತರಿಗೆ ಮಾನಸಿಕ ಕಿರುಕುಳ ನೀಡಲಾಗುತ್ತಿದೆ’ ಎಂದು ಒಡನಾಡಿ ಸೇವಾ ಸಂಸ್ಥೆಯ ಸ್ಟ್ಯಾನ್ಲಿ ಆರೋಪಿಸಿದರು.

‘ಸಂತ್ರಸ್ತ ಬಾಲಕಿಯರೊಂದಿಗೆ ಆಪ್ತ ಸಮಾಲೋಚಕಿಯೊಬ್ಬರು ಇರಲು ಪೋಕ್ಸೊ ಕಾಯ್ದೆಯಲ್ಲಿ ಅವಕಾಶವಿದೆ. ಕಾಯ್ದೆಯ ನಿಯಮವನ್ನು ಕಡೆಗಣಿಸಿರುವುದು ಸಂವಿಧಾನಕ್ಕೆ ಮಾಡಿರುವ ಅಪಚಾರ. ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರ ನಡೆಯನ್ನು ನ್ಯಾಯಾಲಯ ಗಮನಿಸಬೇಕು. ಮಕ್ಕಳನ್ನು ಪೋಷಕರೊಂದಿಗೆ ಕಳುಹಿಸಿಕೊಡಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.