
ಮೊಳಕಾಲ್ಮುರು: ಬೂದುಗುಂಬಳ ಕಾಯಿಯ ದರ ತೀವ್ರವಾಗಿ ಕುಸಿತವಾಗಿರುವ ಪರಿಣಾಮ ಬೆಳೆಗಾರರಿಗೆ ಸಂಕಷ್ಟ ಎದುರಾಗಿದ್ದು, ಬೆಳೆಗಾಗಿ ಮಾಡಿದ ಖರ್ಚೂ ವಾಪಸ್ ಬರದ ದುಃಸ್ಥಿತಿಗೆ ಸಿಲುಕಿದ್ದಾರೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಮೊಳಕಾಲ್ಮುರು ಮತ್ತು ಚಳ್ಳಕೆರೆ ತಾಲ್ಲೂಕುಗಳ ವಿವಿಧೆಡೆ ಬೂದುಗುಂಬಳ ಬೆಳೆಯಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಕೂಲಿ ಕಾರ್ಮಿಕರ ಸಮಸ್ಯೆ ಇರುವ ಕಾರಣ ಹಾಗೂ ನಿರ್ವಹಣೆ ಸುಲಭ ಎಂದು ಹೆಚ್ಚಿನ ಸಂಖ್ಯೆಯಲ್ಲಿ ಕುಂಬಳ ನಾಟಿ ಮಾಡಲಾಗುತ್ತಿದೆ. ಕಡಿಮೆ ನೀರು ಬಳಸಿ ಬೆಳೆಯಬಹುದು ಎಂದೂ ಅನೇಕರು ಕುಂಬಳ ನಾಟಿ ಮಾಡುತ್ತಿದ್ದಾರೆ.
‘ಎರಡು ತಿಂಗಳ ಹಿಂದೆ ಕೆ.ಜಿ. ಕುಂಬಳಕ್ಕೆ ₹ 15ರ ಆಸುಪಾಸಿನಲ್ಲಿ ದರ ಇತ್ತು. ಪ್ರಸ್ತುತ ₹ 3ಕ್ಕೆ ಕುಸಿತವಾಗಿದ್ದು, ಅದೂ ಬೇಡಿಕೆ ಇಲ್ಲದೇ ರೈತರು ಮಧ್ಯವರ್ತಿಗಳ ಬಳಿ ಅಂಗಲಾಚಿ ಮಾರಾಟ ಮಾಡಬೇಕಿದೆ. ರಾಜ್ಯದಲ್ಲಿ ಎಲ್ಲಿಯೂ ಕುಂಬಳಕ್ಕೆ ನಿರ್ದಿಷ್ಟ ಮಾರುಕಟ್ಟೆ ಇಲ್ಲದ ಪರಿಣಾಮ ಉತ್ತರಭಾರತದ ಮಧ್ಯವರ್ತಿಗಳ ಮೂಲಕ ಮಾರಾಟ ಮಾಡಬೇಕಿದೆ’ ಎಂದು ಬೆಳೆಗಾರ ಕೆ.ಟಿ. ನವೀನ್ ಮಾಹಿತಿ ನೀಡಿದರು.
‘ಇಲ್ಲಿಂದ ಕುಂಬಳವನ್ನು ಮುಖ್ಯವಾಗಿ ಆಗ್ರಾ ಮಾರುಕಟ್ಟೆಗೆ ಕಳಿಸಲಾಗುತ್ತಿದೆ. ಉಳಿದಂತೆ ರಾಜಸ್ತಾನ, ದೆಹಲಿ, ಬೆಂಗಳೂರು, ಕೇರಳ ಮಾರುಕಟ್ಟೆಗಳಿಗೆ ಸ್ವಲ್ಪ ಪ್ರಮಾಣದಲ್ಲೂ ಹೋಗುತ್ತದೆ. ಉತ್ತರ ಭಾರತದಲ್ಲಿ ಈ ಕುಂಬಳದಿಂದ ಸಿಹಿ ತಿನಿಸು ಪೇಟಾ ತಯಾರು ಮಾಡಲಾಗುತ್ತದೆ. ಉಳಿದಂತೆ ಶುಭ ಸಮಾರಂಭಗಳಲ್ಲಿ ಅಡುಗೆಗೆ ಬಳಕೆ ಮಾಡಲಾಗುತ್ತದೆ. ಧನುರ್ಮಾಸ ಇರುವ ಕಾರಣ ಶುಭ ಸಮಾರಂಭಗಳು ಕಡಿಮೆಯಾಗಿವೆ ಮತ್ತು ಉತ್ತರ ಭಾರತದಲ್ಲಿ ಸದ್ಯಕ್ಕೆ ಅಗತ್ಯದಷ್ಟು ಕುಂಬಳ ಬೆಳೆ ಲಭ್ಯವಿರುವುದರಿಂದ ಬೇಡಿಕೆ ಕಡಿಮೆಯಾಗಿದೆ’ ಎಂದು ಮಾಹಿತಿ ನೀಡಿದರು.
‘ಈ ವರ್ಷ ಚಳಿ ಹೆಚ್ಚಾಗಿರುವುದರಿಂದ ರೋಗ ಬಾಧೆ ಉಂಟಾಗಿ ಕಾಯಿಯ ಬೆಳವಣಿಗೆ ಅಷ್ಟಾಗಿ ಆಗಿಲ್ಲ. ದೊಡ್ಡ ಕಾಯಿಗಳು ಮಾತ್ರ ಉತ್ತರ ಭಾರತಕ್ಕೆ ರಫ್ತಾಗುತ್ತವೆ. ಸಣ್ಣ ಕಾಯಿಗಳನ್ನು ಸ್ಥಳೀಯ ಮಾರುಕಟ್ಟೆಗೆ ಕಳಿಸಲಾಗುತ್ತದೆ. ಪ್ರತಿ ಎಕರೆಗೆ 40–50 ಟನ್ ಇಳುವರಿ ಬರಬೇಕಿದ್ದು, ಈ ಸಲ ಬರೀ 15– 20 ಟನ್ ಬಂದಿದೆ. ಇಲ್ಲಿಂದ ಆಗ್ರಾ ಭಾಗಕ್ಕೆ ರಪ್ತು ಮಾಡಲು ಪ್ರತಿ ಕೆ.ಜಿ.ಗೆ ₹ 5ರಿಂದ ₹ 6 ಖರ್ಚು ಬರುತ್ತದೆ. ಇದೇ ದರಕ್ಕೆ ಅಲ್ಲಿ ಕಾಯಿ ಸಿಗುತ್ತಿರುವುದರಿಂದ ವ್ಯಾಪಾರಿಗಳು ಬರುತ್ತಿಲ್ಲ. ಅಲ್ಲಿ ಬೆಳೆ ಖಾಲಿಯಾಗುವವರೆಗೆ ನಮಗೆ ದರ ಸಿಗುವುದು ಅನುಮಾನ ಎಂಬ ಮಾಹಿತಿ ಸಿಕ್ಕಿದೆ’ ಎಂದು ರಾಲವಕುಂಟೆಯ ರೈತ ಅಶೋಕ ರೆಡ್ಡಿ ಹೇಳಿದರು.
ಈ ಕುಂಬಳ ಬೆಳೆಯಲು ಪ್ರತಿ ಎಕರೆಗೆ ₹ 50,000– ₹ 60,000 ಖರ್ಚು ಬರುತ್ತದೆ. ಕಾಯಿ ಕೊಳ್ಳುವವರೇ ಇಲ್ಲದ ಪರಿಣಾಮ ಕೇಳಿದ ದರಕ್ಕೆ ಕೊಡಬೇಕಿದೆ. ಕೆಲವರು ಬೆಳೆ ನಾಶಪಡಿಸಿದ್ದು, ಹಾಕಿದ ಬಂಡವಾಳ ಪೂರ್ಣ ನಷ್ಟವಾಗಿದೆ’ ಎಂದರು.
‘ಕಳೆದ ವರ್ಷಗಳಿಗೆ ಹೋಲಿಸಿದಲ್ಲಿ ಈ ಸಲ ಹೆಚ್ಚು ಕುಂಬಳ ನಾಟಿ ಮಾಡಲಾಗಿದೆ. ಒಂದೇ ಸಲ ಬೆಳೆಯೂ ಕಟಾವಿಗೆ ಬಂದಿದೆ. ಶುಭಕಾರ್ಯಗಳು ಆರಂಭವಾದಲ್ಲಿ ದರ ಏರಿಕೆಯಾಗುವ ನಿರೀಕ್ಷೆಯಿದೆ. ಬೆಳೆ ಹೆಚ್ಚಿರುವುದು ದರ ಕುಸಿತಕ್ಕೆ ಮುಖ್ಯ ಕಾರಣ’ ಎಂದು ಬೆಂಗಳೂರಿನ ವ್ಯಾಪಾರಿ ಪೆರಿಸ್ವಾಮಿ ಹೇಳಿದರು.
ತೋಟಗಾರಿಕಾ ಇಲಾಖೆ ಅಧಿಕಾರಿಗಳು ಮಾರುಕಟ್ಟೆ ಏಳಿರಿತದ ಅಧ್ಯಯನ ಮಾಡಿ ರೈತರಿಗೆ ಮಾಹಿತಿ ನೀಡಬೇಕು. ಎಲ್ಲವನ್ನೂ ಮಧ್ಯವರ್ತಿಗಳ ಬಳಿ ಪಡೆದು ತೋಟಗಾರಿಕೆ ಬೆಳೆ ಬೆಳೆಯಬೇಕಿದೆ. ಮುಂದಿನ ದಿನಗಳಲ್ಲಿ ಅಧಿಕಾರಿಗಳು ಈ ಬಗ್ಗೆ ಕಾರ್ಯೋನ್ಮುಖ ಆಗಬೇಕು’ ಎಂದು ರೈತರು ಮನವಿ ಮಾಡಿದ್ದಾರೆ.
ಈ ವರ್ಷ ಹವಾಮಾನ ವೈಪರೀತ್ಯದಿಂದ ಬಹುತೇಕ ಎಲ್ಲ ಬೆಳೆಗಳಿಂದಲೂ ರೈತರಿಗೆ ನಷ್ಟವಾಗಿದೆ. ತೋಟಗಾರಿಕೆ ಇಲಾಖೆಯು ಕಾರ್ಯಾಗಾರ ನಡೆಸಿ ಮಾರ್ಗದರ್ಶನ ನೀಡಿದಲ್ಲಿ ತುಸು ನಷ್ಟ ತಪ್ಪಿಸಲು ಸಾಧ್ಯವಿದೆಎಚ್. ಮಹಾಲಿಂಗಪ್ಪ ರೈತ ಕೋನಸಾಗರ
ಎಲ್ಲ ಕಡೆ ಹೆಚ್ಚು ಬೂದುಗುಂಬಳ ನಾಟಿ ಮಾಡಿದ್ದು ಕಾಯಿ ಆವಕ ಹೆಚ್ಚಿದೆ. ಇದು ದರ ಕುಸಿತಕ್ಕೆ ಮುಖ್ಯ ಕಾರಣವಾಗಿದೆಸವಿತಾ ಜಂಟಿ ನಿರ್ದೇಶಕರು ತೋಟಗಾರಿಕೆ ಇಲಾಖೆ ಚಿತ್ರದುರ್ಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.