ADVERTISEMENT

ಹದ ಮಳೆ, ಬೆಳೆಗಳಿಗೆ ಜೀವಕಳೆ: 550 ಹೆಕ್ಟೇರ್‌ ಮುಂಗಾರು ಬಿತ್ತನೆ ಗುರಿ

ಎಸ್.ಸುರೇಶ್ ನೀರಗುಂದ
Published 9 ಮೇ 2020, 20:15 IST
Last Updated 9 ಮೇ 2020, 20:15 IST
ಹೊಸದುರ್ಗ ತಾಲ್ಲೂಕಿನ ಜಮೀನೊಂದರಲ್ಲಿ ನಳನಳಿಸುತ್ತಿರುವ ಎಳ್ಳು ಬೆಳೆ ವೀಕ್ಷಿಸುತ್ತಿರುವ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸಿ.ಎಸ್‌.ಈಶ.
ಹೊಸದುರ್ಗ ತಾಲ್ಲೂಕಿನ ಜಮೀನೊಂದರಲ್ಲಿ ನಳನಳಿಸುತ್ತಿರುವ ಎಳ್ಳು ಬೆಳೆ ವೀಕ್ಷಿಸುತ್ತಿರುವ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸಿ.ಎಸ್‌.ಈಶ.   

ಹೊಸದುರ್ಗ: ತಾಲ್ಲೂಕಿನ ಹಲವೆಡೆ ಹದ ಮಳೆಯಾಗಿದ್ದು, ಬಿತ್ತನೆಯಾಗಿರುವ ಪೂರ್ವ ಮುಂಗಾರು ಬೆಳೆಗಳಿಗೆ ಜೀವಕಳೆ ಬಂದಿದೆ.

ಏಪ್ರಿಲ್‌ ಮೊದಲ ವಾರದಲ್ಲಿ ತಾಲ್ಲೂಕಿನ ಕೆಲವೆಡೆ ಸುರಿದ ರೇವತಿ ಮಳೆಗೆ ಕಸಬಾ, ಶ್ರೀರಾಂಪುರ, ಮಾಡದಕೆರೆ ಹೋಬಳಿ ವ್ಯಾಪ್ತಿಯ ಕೆಲವು ರೈತರು ಜಮೀನು ಹಸನು ಮಾಡಿ ಪೂರ್ವ ಮುಂಗಾರು ಹಂಗಾಮು ಎಳ್ಳು, ಹೆಸರುಕಾಳು ಬಿತ್ತನೆ ಮಾಡಿದ್ದರು. ಆದರೆ ಬಿತ್ತನೆ ನಂತರದಲ್ಲಿ ಅಶ್ವಿನಿ ಮಳೆ ಕೈಕೊಟ್ಟಿದ್ದರಿಂದ ಎಳೆಯ ಪೈರು ಬಾಡಿದ್ದವು. ಇದರಿಂದಾಗಿ ಅನ್ನದಾತರು ಆತಂಕಕ್ಕೆ ಒಳಗಾಗಿದ್ದರು.

ಆದರೆ ಭರಣಿ ಮಳೆ ರೈತರಲ್ಲಿ ಹಲವು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಕಳೆದ 10 ದಿನಗಳಿಂದ ಆಗಾಗ ಬಿರುಗಾಳಿ, ಗುಡುಗು, ಸಿಡಿಲು ಸಹಿತ ಕೆಲವೆಡೆ ಬಿರುಸಿನಿಂದ ಸುರಿಯುತ್ತಿದೆ. ಇದರಿಂದ ಕೆಲವು ಚೆಕ್‌ಡ್ಯಾಂ ನೀರು ಹರಿದು ಬಂದಿದೆ. ತಾಲ್ಲೂಕಿನ ಹಿರೇಹಳ್ಳದಲ್ಲಿ ನೀರು ಹರಿದಿದೆ. ಜಮೀನು ಹದವಾಗಿದ್ದು, ಬಿತ್ತನೆಯಾಗಿದ್ದ ಬೆಳೆಗಳು ನಳನಳಿಸುತ್ತಿವೆ. ಇದರಿಂದ ಅನ್ನದಾತರ ಮೊಗದಲ್ಲಿ ಮಂದಹಾಸ ಮೂಡಿದೆ. 20 ದಿನದ ಹಿಂದೆ ಬಿತ್ತನೆಯಾಗಿದ್ದ ಎಳ್ಳು, ಹೆಸರುಕಾಳು ಬೆಳೆಯನ್ನು ಕೆಲವು ರೈತರು ಎಡೆಕುಂಟೆ ಹೊಡೆಯುತ್ತಿದ್ದಾರೆ.

ADVERTISEMENT

ಆಗಾಗ ಮಳೆ ಬರುತ್ತಿರುವುದರಿಂದ ಉತ್ತಮ ಇಳುವರಿ ಬೆಳೆ ಹಾಗೂ ಆದಾಯದ ನಿರೀಕ್ಷೆಯಲ್ಲಿ ಬೆಳೆಗಳ ಉಪಚಾರ ಮಾಡುತ್ತಿದ್ದಾರೆ. ತಾಲ್ಲೂಕಿನಲ್ಲೆಡೆ ಮುಂಗಾರು ಕೃಷಿ ಚಟುವಟಿಕೆ ಬಿರುಸುಗೊಂಡಿದೆ. ಕೃಷಿ ಸಾಧನ ಸಲಕರಣೆ, ಬಿತ್ತನೆಯ ಬೀಜ, ಗೊಬ್ಬರ ಖರೀದಿ ಭರಾಟೆ ಜೋರಾಗಿದೆ. ಕಳೆದ ಒಂದು ವಾರದಿಂದ ಹಲವು ರೈತರು ಹೆಸರು, ಎಳ್ಳು, ಶೇಂಗಾ ಬಿತ್ತನೆ ಕಾರ್ಯ ಚುರುಕಾಗಿ ನೆಡೆಯುತ್ತಿದೆ. ತಾಲ್ಲೂಕಿನಲ್ಲಿ ಈ ಬಾರಿ 54,550 ಹೆಕ್ಟೇರ್‌ ಮುಂಗಾರು ಬಿತ್ತನೆಯ ಗುರಿಯಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸಿ.ಎಸ್‌. ಈಶ ತಿಳಿಸಿದ್ದಾರೆ.

ಒಂದು ವಾರದಿಂದ ಬಿತ್ತನೆ ಕಾರ್ಯ ಬಿರುಸುಗೊಂಡಿದ್ದು, ಎಳ್ಳು ಹಾಗೂ ಹೆಸರುಕಾಳು ಸೇರಿ ಈಗಾಗಲೇ 550 ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಈ ಬಾರಿ ಪೂರ್ವ ಮುಂಗಾರು ಮಳೆ ತಾಲ್ಲೂಕಿನಲ್ಲಿ ಸಕಾಲಕ್ಕೆ ಪ್ರವೇಶ ಮಾಡಿರುವುದರಿಂದ ಎಳ್ಳು, ಹೆಸರು ಬಿತ್ತನೆಯ ಪ್ರದೇಶ ಈ ಬಾರಿ ನಿರೀಕ್ಷೆಗಿಂತ ಹೆಚ್ಚಾಗಲಿದೆ. ಕಳೆದ ವರ್ಷ ಕೃಷಿ ಇಲಾಖೆಯಿಂದ ರೈತರು ಕೇವಲ 24 ಕ್ವಿಂಟಲ್‌ ಹೆಸರುಕಾಳು ಬಿತ್ತನೆ ಬೀಜ ಖರೀದಿಸಿದ್ದರು. ಆದರೆ ಈ ಬಾರಿ 113.8 ಕ್ವಿಂಟಲ್‌ ಖರೀದಿಸಿದ್ದಾರೆ. ಬೆಳೆಯ ಉಪಚಾರದ ಬಗ್ಗೆ ಜಮೀನಿಗೆ ಭೇಟಿ ನೀಡಿ ರೈತರಿಗೆ ಸಲಹೆ ನೀಡಲಾಗುತ್ತಿದೆ ಎಂದು ಕೃಷಿ ಅಧಿಕಾರಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.