ADVERTISEMENT

ಚಿತ್ರದುರ್ಗದಲ್ಲಿ ಉತ್ತಮ ಮಳೆ; ಸಂಚಾರ ಅಸ್ತವ್ಯಸ್ತ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2021, 14:50 IST
Last Updated 10 ಅಕ್ಟೋಬರ್ 2021, 14:50 IST
ಚಿತ್ರದುರ್ಗದ ಬಾಲಕರ ಪದವಿ ಪೂರ್ವ ಕಾಲೇಜು ಕಟ್ಟಡ ಭಾನುವಾರ ಮಳೆ ನಿಂತ ಬಳಿಕ ಕಂಡುಬಂದಿದ್ದು ಹೀಗೆ.
ಚಿತ್ರದುರ್ಗದ ಬಾಲಕರ ಪದವಿ ಪೂರ್ವ ಕಾಲೇಜು ಕಟ್ಟಡ ಭಾನುವಾರ ಮಳೆ ನಿಂತ ಬಳಿಕ ಕಂಡುಬಂದಿದ್ದು ಹೀಗೆ.   

ಚಿತ್ರದುರ್ಗ: ನಗರದಲ್ಲಿ ಭಾನುವಾರ ಉತ್ತಮ ಮಳೆ ಸುರಿಯಿತು. ಮಧ್ಯಾಹ್ನ ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿದ ಮಳೆ, ರಾತ್ರಿಯವರೆಗೆ ಸೋನೆಯ ರೂಪ ಪಡೆಯಿತು.

ಅ.6ರಂದು ಧಾರಾಕಾರವಾಗಿ ಸುರಿದಿದ್ದ ಮಳೆ ಮೂರು ದಿನ ಬಿಡುವು ನೀಡಿತ್ತು. ಹೊಸದುರ್ಗ, ಹಿರಿಯೂರು, ಹೊಳಲ್ಕೆರೆ, ಚಳ್ಳಕೆರೆ ತಾಲ್ಲೂಕಿನಲ್ಲಿ ಚದುರಿದಂತೆ ಮಳೆಯಾಗಿತ್ತು. ಭಾನುವಾರ ಮತ್ತೆ ದಟ್ಟ ಮೋಡಗಳು ಕಾಣಿಸಿಕೊಂಡು ಮಳೆ ಧರೆಗೆ ಇಳಿಯಿತು. ಮಳೆ ಬರುವ ಸಾಧ್ಯತೆಯ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು.

ಭಾನುವಾರ ಮಧ್ಯಾಹ್ನ 1.45ಕ್ಕೆ ಆರಂಭವಾದ ಮಳೆ 2.30ರವರೆಗೆ ಉತ್ತಮವಾಗಿ ಸುರಿಯಿತು. ಬಿರುಗಾಳಿ, ಗುಡುಗು ಸಹಿತ ಸುರಿದ ಮಳೆಗೆ ಅಪಾರ ಪ್ರಮಾಣದ ನೀರು ಹರಿಯಿತು. ಚರಂಡಿಗಳು ಕ್ಷಣಾರ್ಧದಲ್ಲಿ ತುಂಬಿ ರಸ್ತೆಯ ಮೇಲೆ ಹರಿದವು. ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ನಿರ್ಮಿಸಿದ ಮೇಲ್ಸೇತುವೆ ಬಳಿ ಸಮಸ್ಯೆ ಸೃಷ್ಟಿಯಾಗಿತ್ತು.

ADVERTISEMENT

ತುರುವನೂರು ಗೇಟ್‌ ಸಮೀಪ ಸುಮಾರು ಐದು ಅಡಿಯಷ್ಟು ನೀರು ಹರಿಯುತ್ತಿತ್ತು. ಇದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು. ಕಾರು, ದ್ವಿಚಕ್ರ ವಾಹನ ಸೇರಿ ಲಘು ವಾಹನ ಸಂಚಾರ ಸ್ಥಗಿತಗೊಂಡಿತ್ತು. ನೀರು ಹರಿದು ರಸ್ತೆ ಮೊದಲ ಸ್ಥಿತಿಗೆ ಮರಳಲು ಸುಮಾರು ಅರ್ಧ ಗಂಟೆಗೂ ಹೆಚ್ಚು ಸಮಯ ಹಿಡಿಯಿತು.

ಪ್ರತಿ ಮಳೆ ಸುರಿದಾಗಲೂ ರಾಷ್ಟ್ರೀಯ ಹೆದ್ದಾರಿಯ ಮೇಲ್ಸೇತುವೆಯ ಬಳಿ ನೀರು ನಿಲ್ಲುತ್ತಿದೆ. ಕಳೆದ ವಾರ ಚರಂಡಿಯಲ್ಲಿ ಸರಾಗವಾಗಿ ಹರಿದಿದ್ದ ನೀರು ಭಾನುವಾರ ಮತ್ತೆ ರಸ್ತೆಗೆ ಚಾಚಿಕೊಂಡಿತು. ಹೆದ್ದಾರಿಯ ಎರಡೂ ಬದಿಯ ಚರಂಡಿಗಳಲ್ಲಿ ಕಸ–ಕಡ್ಡಿ ಕಟ್ಟಿಕೊಂಡಾಗ ಈ ಸ್ಥಿತಿ ನಿರ್ಮಾಣವಾಗುತ್ತದೆ. ನೀರಿನ ಹರಿವು ಕಡಿಮೆಯಾಗುವ ವರೆಗೂ ವಾಹನ ಸವಾರರು ಕಾಯುತ್ತಿದ್ದರು. ಕೆಲವರು ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.