ADVERTISEMENT

ಶಾಸನ ಸಂಶೋಧನೆಗೆ ಸಾಹಿತ್ಯ ಪ್ರೇರಣೆ

ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ

​ಪ್ರಜಾವಾಣಿ ವಾರ್ತೆ
Published 16 ಜನವರಿ 2020, 13:36 IST
Last Updated 16 ಜನವರಿ 2020, 13:36 IST
ಚಿತ್ರದುರ್ಗದ ರೋಟರಿ ಬಾಲ ಭವನದಲ್ಲಿ ನಡೆದ ಸಮಾರಂಭದಲ್ಲಿ ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ ಅವರನ್ನು ಸನ್ಮಾನಿಸಲಾಯಿತು. 
ಚಿತ್ರದುರ್ಗದ ರೋಟರಿ ಬಾಲ ಭವನದಲ್ಲಿ ನಡೆದ ಸಮಾರಂಭದಲ್ಲಿ ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ ಅವರನ್ನು ಸನ್ಮಾನಿಸಲಾಯಿತು.    

ಚಿತ್ರದುರ್ಗ: ತರಾಸು ಕಾದಂಬರಿ, ಡಾ.ಎಂ.ಎಂ.ಕಲಬುರ್ಗಿ ಹಾಗೂ ಡಾ.ಎಂ.ಚಿದಾನಂದಮೂರ್ತಿ ಅವರ ಬರಹ ಓದಿದ ಬಳಿಕ ಸಂಶೋಧನೆಯತ್ತ ಒಲವು ಮೂಡಿತು. 650 ಅಪ್ರಕಟಿತ ಶಾಸನ ಪತ್ತೆಹಚ್ಚಲು ಸಾಧ್ಯವಾಯಿತು ಎಂದು ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ ತಿಳಿಸಿದರು.

ಇಲ್ಲಿನ ರೋಟರಿ ಬಾಲ ಭವನದಲ್ಲಿ ಟಿ.ವಿಜಯಕುಮಾರಿ ಸ್ಮರಣಾರ್ಥ ವೀರಶೈವ ಲಿಂಗಾಯತ ಹೇಮರಡ್ಡಿ ಮಲ್ಲಮ್ಮ ಸಮಾಜ ಸಂಕ್ರಾಂತಿ ಅಂಗವಾಗಿ ಏರ್ಪಡಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ವಕೀಲರಾಗಿದ್ದ ಹುಲ್ಲೂರು ಶ್ರೀನಿವಾಸ ಜೋಯಿಸರು ಸಂಶೋಧನೆಯಲ್ಲಿ ತೊಡಗಿಕೊಂಡಿದ್ದರು. ಅಶೋಕ ಶಾಸನದಿಂದ ಲಿಪಿ ಓದು ಆರಂಭಿಸುವುದು ಸೂಕ್ತ. ಶೇಕ್ಸ್‌ಪಿಯರ್‌ ನಾಟಕದಿಂದ ಪ್ರಭಾವಿತನಾಗಿದ್ದರಿಂದ ಸಾಹಿತ್ಯ ರಚನೆಯಲ್ಲಿಯೂ ತೊಡಗಿಕೊಂಡೆ’ ಎಂದು ಹೇಳಿದರು.

ADVERTISEMENT

‘ಸಂತೋಷಕ್ಕಾಗಿ ಸಾಹಿತ್ಯ, ಸಂಶೋಧನೆಯಲ್ಲಿ ತೊಡಗಿದ್ದೇನೆಯೆ ಹೊರತು ಪ್ರಶಸ್ತಿ ಸಿಗುತ್ತದೆಂಬ ಆಸೆಯಿಂದಲ್ಲ. ರಾಜ್ಯೋತ್ಸವ ಪ್ರಶಸ್ತಿಯನ್ನು ನಾನು ನಿರೀಕ್ಷಿಸಿರಲಿಲ್ಲ. ಸಂಶೋಧನೆ ಕ್ಷೇತ್ರದಲ್ಲಿನ ಸೇವೆಯನ್ನು ಗುರುತಿಸಿ ರಾಜ್ಯ ಸರ್ಕಾರ ಪ್ರಶಸ್ತಿ ನೀಡಿದೆ. ಇದು ನನ್ನ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

‘ಸಂಶೋಧನೆಗೆ ಕಾಡು–ಮೇಡು ಅಲೆದಿದ್ದೇನೆ. ಸ್ನೇಹಿತರು, ಸಂಬಂಧಿಕರು ಹಾಗೂ ಶಿಷ್ಯ ವೃಂದ ಈ ಕಾರ್ಯಕ್ಕೆ ಹೆಗಲಾಗಿ ನಿಂತಿತು. ಹೀಗಾಗಿ, ಸಂಶೋಧನೆ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಾಯಿತು. ಡಾ.ಎಂ.ಎಂ.ಕಲಬುರ್ಗಿ ಹಾಗೂ ಡಾ.ಎಂ.ಚಿದಾನಂದಮೂರ್ತಿ ಅವರ ಪ್ರೋತ್ಸಾಹ ಕೂಡ ಇದಕ್ಕೆ ನೆರವಾಯಿತು’ ಎಂದು ಸ್ಮರಿಸಿಕೊಂಡರು.

ಹುರುಳಿ ಬಸವರಾಜ್ ಮಾತನಾಡಿ, ‘ಭಾರತದ ಪರಂಪರೆಯಲ್ಲಿ ಹಬ್ಬಗಳಿಗೆ ವಿಶೇಷ ಸ್ಥಾನವಿದೆ. ವಿಜ್ಞಾನ-ನಂಬಿಕೆ ಜೊತೆಯಲ್ಲಿ ಬದುಕು ಕಟ್ಟಿಕೊಳ್ಳಬೇಕಿದೆ. ಸಂಸ್ಕಾರದ ಪಾಠ ಕಲಿಸುವುದರ ಜೊತೆಗೆ ಉತ್ತಮ ಬಾಂಧವ್ಯ ಬೆಸೆಯುವುದು ಸಂಕ್ರಾಂತಿ’ ಎಂದರು.

ಶಿಕ್ಷಕಿಯರಾದ ಜೂಲಿಯಟ್ ಎಸ್.ಡಿಸೋಜ, .ಆಶಾ ಹಾಗೂ ಕಲಾವಿದ ಕೆ.ನಾಗರಾಜ್‌ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ವೀರಶೈವ ಲಿಂಗಾಯತ ಹೇಮರಡ್ಡಿ ಮಲ್ಲಮ್ಮ ಸಮಾಜದ ಅಧ್ಯಕ್ಷ ಜಿ.ಚಿದಾನಂದಪ್ಪ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ವಿಶ್ವನಾಥ್, ಕಾರ್ಯದರ್ಶಿ ರವೀಂದ್ರ, ಜಂಟಿ ಕಾರ್ಯದರ್ಶಿ ಸತೀಶ್, ವಿಜಯಕುಮಾರ್, ಕೆ.ಇ.ಬಿ. ಷಣ್ಮುಖಪ್ಪ, ವಿಜ್ಞಾನ ಶಿಕ್ಷಕ ಎಚ್.ಎಸ್.ಟಿ.ಸ್ವಾಮಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಆರ್.ಮಲ್ಲಿಕಾರ್ಜುನಯ್ಯ, ಕೆ.ಪಿ.ಎಂ.ಗಣೇಶಯ್ಯ, ನಾಗರಾಜ್ ಸಂಗಂ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.