ADVERTISEMENT

ಚಿತ್ರದುರ್ಗ | ರಾಜೇಶ್ ಕೃಷ್ಣನ್ ಗಾಯನ: ಆನಂದದ ಸಿಂಚನ

'ಡೆಸ್ಟಿನಿ' ಸಾಂಸ್ಕೃತಿಕ ಹಬ್ಬ; ಮೆಲೋಡಿ ಕಿಂಗ್ ಹಾಡಿಗೆ ಕುಣಿದು ಕುಪ್ಪಳಿಸಿದ ಯುವಜನರು

​ಪ್ರಜಾವಾಣಿ ವಾರ್ತೆ
Published 12 ಜನವರಿ 2026, 6:47 IST
Last Updated 12 ಜನವರಿ 2026, 6:47 IST
ದೇವರಾಜು ಅರಸು ಶಿಕ್ಷಣ ಸಂಸ್ಥೆ ಆವರಣದಲ್ಲಿ ಭಾನುವಾರ ನಡೆದ ‘ಡೆಸ್ಟಿನಿ’ ಸಾಂಸ್ಕೃತಿಕ ಹಬ್ಬದಲ್ಲಿ ಖ್ಯಾತ ಹಿನ್ನೆಲೆ ಗಾಯಕ ರಾಜೇಶ್‌ ಕೃಷ್ಣನ್‌ ಅವರು ಗಾಯನ ಪ್ರಸ್ತುತಪಡಿಸಿದರು
ದೇವರಾಜು ಅರಸು ಶಿಕ್ಷಣ ಸಂಸ್ಥೆ ಆವರಣದಲ್ಲಿ ಭಾನುವಾರ ನಡೆದ ‘ಡೆಸ್ಟಿನಿ’ ಸಾಂಸ್ಕೃತಿಕ ಹಬ್ಬದಲ್ಲಿ ಖ್ಯಾತ ಹಿನ್ನೆಲೆ ಗಾಯಕ ರಾಜೇಶ್‌ ಕೃಷ್ಣನ್‌ ಅವರು ಗಾಯನ ಪ್ರಸ್ತುತಪಡಿಸಿದರು   

ಚಿತ್ರದುರ್ಗ: ಗಾನ ಕೋಗಿಲೆ, ಮೆಲೋಡಿ ಕಿಂಗ್‌ ಎಂದೇ ಪ್ರಸಿದ್ಧಿ ಪಡೆದಿರುವ ಖ್ಯಾತ ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್ ಅವರ ಹಾಡುಗಳು ಭಾನುವಾರ ಯುವಜನರ ನಡುವೆ ಆನಂದದ ಸಿಂಚನ ಮೂಡಿಸುವಲ್ಲಿ ಯಶಸ್ವಿಯಾದವು.

ದೇವರಾಜ ಅರಸು ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆಯುತ್ತಿರುವ 'ಡೆಸ್ಟಿನಿ' ಸಾಂಸ್ಕೃತಿಕ ಹಬ್ಬದ 2ನೇ ದಿನದ ಕಾರ್ಯಕ್ರಮದಲ್ಲಿ ರಾಜೇಶ್ ಕೃಷ್ಣನ್ ನಾದ ಸುಧೆ ಹರಿಸಿದರು.  ವೇದಿಕೆ ಪ್ರವೇಶಿಸುತ್ತಿದ್ದಂತೆ ರಾಜೇಶ್ ಕೃಷ್ಣ ಅವರು 'ಒರಟ ಐ ಲವ್ ಯು' ಚಿತ್ರದ 'ಯಾರು... ಕಣ್ಣಲ್ಲಿ ಕಣ್ಣನ್ನಿಟ್ಟು ಮನಸಲ್ಲಿ ಮನಸನ್ನಿಟ್ಟು' ಗೀತೆ ಹಾಡಿದರು. ಮಕ್ಕಳ ನೃತ್ಯ ಗೀತೆಗೆ ಸಾಥ್ ನೀಡಿತು. ರಾಜೇಶ್ ಅವರ ಉತ್ಸಾಹದ ಗಾಯನಕ್ಕೆ ಯುವತಿಯರು, ಮಹಿಳೆಯರು ನೃತ್ಯ ಮಾಡಿದರು.

ಹಾಡಿನ ನಡುವೆ ಮಾತನಾಡಿದ ರಾಜೇಶ್ ಕೃಷ್ಣನ್ 'ದೇವರಾಜ ಅರಸು ಶಿಕ್ಷಣ ಸಂಸ್ಥೆಯ ಮಕ್ಕಳ ನೃತ್ಯದ ಜೊತೆ ಹಾಡುತ್ತಿರುವುದು ನನಗೆ ಖುಷಿ ನೀಡಿತು' ಎಂದು ಹೇಳಿದರು. ನಂತರ ಅವರು 'ಹುಚ್ಚ' ಚಿತ್ರದ 'ಉಸಿರೇ ಉಸಿರೇ' ಗೀತೆ ಹಾಡಿದರು. ಈ ವೇಳೆ ರಾಜೇಶ್ ಅವರೊಂದಿಗೆ ಜನರೂ ಹಾಡಿದರು, ಹಾಡುವಾಗ ಮೊಬೈಲ್ ಟಾರ್ಚ್ ಲೈಟ್ ಬೆಳಗಿಸಿದರು.

ADVERTISEMENT

'ಅಮೆರಿಕಾ ಅಮೆರಿಕಾ' ಚಿತ್ರದ 'ನೂರು ಜನ್ಮಕು ನೂರಾರು ಜನ್ಮಕೂ' ಗೀತೆ ಪ್ರೇಕ್ಷಕರಲ್ಲಿ ರೋಮಾಂಚಕ ಮೂಡಿಸಿತು. ಮೌನದ ಜೊತೆ ಅನುಸಂಧಾನ ಮಾಡುವಂತೆ ರಾಜೇಶ್‌ ಕೃಷ್ಣನ್‌ ಅವರು ಈ ಗೀತೆಯನ್ನು ಮನದುಂಬಿ ಹಾಡಿದರು. 

ನಂತರ ಪ್ರೇಕ್ಷಕರ ಒತ್ತಾಯದ ಮೇರೆಗೆ 2 ಹಿಂದಿ ಗೀತೆಗಳನ್ನು ಹಾಡಿದರು.  'ಹಮ್ ಆಪ್ ಕೆ ಹೇ ಕೌನ್' ಹಿಂದಿ ಚಿತ್ರದ 'ಪೆಹಲಾ ಪೆಹಲಾ ಪ್ಯಾರ್ ಹೈ' ಗೀತೆ ಜನರಲ್ಲಿ ಹೊಸ ಭಾವ ಮೂಡಿಸಿತು. 'ಸಾಧನ್ ಸರ್ಗಮ್' ಚಿತ್ರದ 'ಪೆಹಲಾ ನಶಾ ಪೆಹಲಾ' ಗೀತೆಯೂ ಯುವಜನರಲ್ಲಿ ಸಂಭ್ರಮ ಸೃಷ್ಟಿಸಿತು. ಶಿಕ್ಷಣ ಸಂಸ್ಥೆಯಲ್ಲಿ ಹೊರರಾಜ್ಯಗಳ ವಿದ್ಯಾರ್ಥಿಗಳೂ ಇರುವ ಕಾರಣ ಹಿಂದಿ ಚಿತ್ರ ಗೀತೆಗಳು ಆನಂದ ಸೃಷ್ಟಿಸಿದವು.

ದೇವರಾಜ ಅರಸು ಶಿಕ್ಷಣ ಸಂಸ್ಥೆ ಸ್ಥಾಪಕ, ಶಾಸಕ ಎಂ.ಚಂದ್ರಪ್ಪ ಅವರ ಕೋರಿಕೆ ಮೇರೆಗೆ ತಿರುಪತಿ ತಿರುಮಲ ದೇವರ ನೆನಪಿನಲ್ಲಿ 'ಪವಡಿಸು ಪರಮಾತ್ಮ' ಗೀತೆ ಇಡೀ ಆವರಣದಲ್ಲಿ ಭಕ್ತಿ ಭಾವ ಮೂಡಿಸಿತು. ಈ ಗೀತೆ ಆಸ್ವಾದಿಸುವಾಗ ಶಾಸಕ ಚಂದ್ರಪ್ಪ ಅವರ ಕಣ್ಣಲ್ಲಿ ನೀರು ಜಿನುಗಿತು. ಈ ಗೀತೆ ಹಾಡುವ ಮೊದಲು ರಾಜೇಶ್ ಅವರು 'ನಾನು ಮೊದಲು ಶೂ ತೆಗೆಯುತ್ತೇನೆ' ಎಂದು ಹೇಳುತ್ತಾ ಹಾಡು ಆರಂಭಿಸಿದರು.

‘ಗಲಾಟೆ ಅಳಿಯಂದ್ರು‘ ಚಿತ್ರದ ‘ಸಾಗರಿಯೇ’ ಗೀತೆ ಯುವಜನರಲ್ಲಿ ಕಚಗುಳಿ ಇಡುವಲ್ಲಿ ಯಶಸ್ವಿಯಾಯಿತು. ‘ಸ್ನೇಹಲೋಕ’ ಚಿತ್ರದ ‘ಒಂದೇ ಉಸಿರಲ್ಲಿ ನಾನು ನೀನು’ ಗೀತೆಯನ್ನು ರಾಜೇಶ್‌ ಕೃಷ್ಣನ್‌ ಒಂದೇ ಉಸಿರಲ್ಲಿ ಹಾಡಿ ಮುಗಿಸಿದರು. ಈ ವೇಳೆ ಪ್ರೇಕ್ಷಕರ ಉಸಿರುಗುಟ್ಟುವಂತೆ ಮಾಡಿತ್ತು. ಗಾಯಕನ ಜೊತೆಗೆ ತಾವೂ ಹಾಡಿ ಸಂಭ್ರಮಿಸಿದರು.

ಗಾಯಕ ಕುಮಾರ್ ಗಂಗೋತ್ರಿ ಅವರು ಮಣ್ಣಿನದೋಣಿ ಚಿತ್ರದ 'ಮೇಘ ಬಂತು ಮೇಘ' ಗೀತೆ ಹಾಡು ಮೂಲಕ ಸಾಥ್‌ ನೀಡಿದರು. ಇದಕ್ಕೂ ಮೊದಲು ದೇವರಾಜ ಅರಸು ಶಾಲೆಗಳ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು. ‘ಹಿರಣ್ಯ ಕಶ್ಯಪು’ ಚಿತ್ರದ ನರಸಿಂಹ ಅವತಾರದ ಗೀತೆಗೆ ನೃತ್ಯ ಮಾಡುವ ಮೂಲಕ ಚಪ್ಪಾಳೆ ಗಿಟ್ಟಿಸಿಕೊಂಡರು. ನವದುರ್ಗೆಯರ ನೃತ್ಯ ರೋಮಾಂಚನ ಮೂಡಿಸಿತು.

ವಿಶೇಷವಾಗಿ ’ಹನುಮಾನ್‌ ಚಾಲೀಸಾ‘ಕ್ಕೆ ನೃತ್ಯ ಸಂಯೋಜನೆ ಮಾಡಿದ್ದು ಎಲ್ಲರ ಮನಸೂರೆಗೊಂಡಿತು. ಈ ವೇಳೆ ನೃತ್ಯದ ಜೊತೆಗೆ ಹಗ್ಗದ ನೃತ್ಯ, ಮಲ್ಲಕಂಬ ಪ್ರದರ್ಶನ ಮಾಡಿದ್ದು ಎಲ್ಲರ ಗಮನ ಸೆಳೆಯಿತು.

ಎಸ್ ಪಿಬಿ ನನ್ನ ಹೃದಯದಲ್ಲಿದ್ದಾರೆ...

ಗಾಯನದ ನಡುವೆ ರಾಜೇಶ್ ಕೃಷ್ಣನ್ ಅವರು ತಮ್ಮ‌ ಗುರು ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ನಮನ ಸಲ್ಲಿಸಿದರು. ಎಲ್ಲರೂ ನಿಂತು ಗೌರವ ಸಲ್ಲಿಸುವಂತೆ ಮನವಿ ಮಾಡಿದರು. ಇದು ಭಾವುಕ ಸನ್ನಿವೇಶ ಸೃಷ್ಟಿಸಿತು. ಎಸ್ ಪಿಬಿ ಹಾಡಿರುವ 'ಸಿಬಿಐ ಶಂಕರ್' ಚಿತ್ರದ 'ಗೀತಾಂಜಲಿ... ಹಾಲುಗೆನ್ನೆಗೆ ವಾರೆಗಣ್ಣಿಗೆ' ಗೀತೆಯನ್ನು ಮನದುಂಬಿ ಹಾಡಿದರು. 'ನಾನು ಎಲ್ಲೇ ಹೋದರೂ ಎಸ್‌ಪಿಬಿ ಅವರ ನೆನಪಲ್ಲೇ ಹಾಡುತ್ತೇನೆ. ಅವರು ನೀಡಿರುವ ಭಿಕ್ಷೆಯಿಂದಲೇ ಹಾಡುತ್ತಿದ್ದೇನೆ. ಅವರು ನನ್ನ ಹೃದಯದಲ್ಲಿ ಜೀವಂತವಾಗಿದ್ದಾರೆ. ಅವರ ಇಚ್ಛೆಯಂತೆ ಕರ್ನಾಟಕದಲ್ಲೇ ಹುಟ್ಟಿಬರಲಿದ್ದಾರೆ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.