ADVERTISEMENT

ಈದ್‌ ಉಲ್‌ ಫಿತ್ರ್‌ ಸರಳ ಆಚರಣೆ

ಮೌನಕ್ಕೆ ಶರಣಾದ ಈದ್ಗಾ ಮೈದಾನ, ಮೊಬೈಲ್‌ನಲ್ಲಿ ಶುಭಾಶಯ ವಿನಿಮಯ

​ಪ್ರಜಾವಾಣಿ ವಾರ್ತೆ
Published 25 ಮೇ 2020, 19:07 IST
Last Updated 25 ಮೇ 2020, 19:07 IST
ಚಿತ್ರದುರ್ಗದಲ್ಲಿ ರಂಜಾನ್‌ ಅಂಗವಾಗಿ ಸೋಮವಾರ ಮನೆಯಲ್ಲೇ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಮರು.
ಚಿತ್ರದುರ್ಗದಲ್ಲಿ ರಂಜಾನ್‌ ಅಂಗವಾಗಿ ಸೋಮವಾರ ಮನೆಯಲ್ಲೇ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಮರು.   

ಚಿತ್ರದುರ್ಗ: ಇಸ್ಲಾಂ ಧರ್ಮೀಯರ ಪವಿತ್ರ ಹಬ್ಬವಾದ ‘ಈದ್‌ ಉಲ್‌ ಫಿತ್ರ್‌’ ಕೋಟೆನಾಡಿನಲ್ಲಿ ಸೋಮವಾರ ಸರಳವಾಗಿ ನೆರವೇರಿತು. ಕೊರೊನಾ ಸೋಂಕಿನ ಭೀತಿಯ ನಡುವೆಯೂ ಹಬ್ಬವನ್ನು ಸಾಂಪ್ರದಾಯಿಕವಾಗಿ ಆಚರಿಸಲಾಯಿತು.

ಮನೆಯಲ್ಲೇ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಮರು ದೂರವಾಣಿ ಕರೆ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಹಬ್ಬದ ಅಂಗವಾಗಿ ಮೆರುಗು ಪಡೆಯುತ್ತಿದ್ದ ಮಸೀದಿ, ಈದ್ಗಾ ಮೈದಾನ ಮೌನಕ್ಕೆ ಶರಣಾಗಿದ್ದವು.

ಹಸಿವಿನ ಮಹತ್ವ ಸಾರುವ ರಂಜಾನ್‌ ಮಾಸ, ಸನ್ನಡತೆಯ ಮಾರ್ಗವನ್ನು ತೋರುತ್ತದೆ. ಈ ಮಾಸದ ಕೊನೆಯಲ್ಲಿ ‘ಈದ್‌ ಉಲ್‌ ಫಿತ್ರ್‌’ ಹಬ್ಬವನ್ನು ಆಚರಿಸಲಾಗುತ್ತದೆ. ಭಾನುವಾರ ಸಂಜೆ ಚಂದ್ರ ದರ್ಶನ ಪಡೆದ ಮುಸ್ಲಿಮರು ಹಬ್ಬಕ್ಕೆ ಸಜ್ಜಾಗಿದ್ದರು. ಹಬ್ಬದ ಆಚರಣೆಗೆ ಸರ್ಕಾರ ರೂಪಿಸಿದ್ದ ನಿಯಮಾವಳಿಗಳನ್ನು ಪಾಲಿಸಿದರು. ‘ಕೋವಿಡ್‌–19’ ನಿವಾರಣೆಗೆ ದೇವರಲ್ಲಿ ಮೊರೆ ಇಟ್ಟರು.

ADVERTISEMENT

ಈ ಹಬ್ಬದಲ್ಲಿ ಶ್ವೇತವಸ್ತ್ರ ಧರಿಸಿ ಸಾವಿರಾರು ಜನರು ಏಕಕಾಲಕ್ಕೆ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸುವುದು ವಾಡಿಕೆ. ಧರ್ಮ ಗುರುಗಳ ಉಪದೇಶ ಆಲಿಸಿ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಿದ್ದರು. ಪ್ರಾರ್ಥನೆಗೆ ಬರುವಾಗ ಹಾಕಿಕೊಳ್ಳುತ್ತಿದ್ದ ಸುಗಂಧ ದ್ರವ್ಯ ಎಲ್ಲೆಡೆ ಪಸರಿಸುತ್ತಿತ್ತು. ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಸಾಮೂಹಿಕ ಪ್ರಾರ್ಥನೆಗೆ ಸರ್ಕಾರ ನಿರ್ಬಂಧ ವಿಧಿಸಿದ್ದರಿಂದ ಧಾರ್ಮಿಕ ವಿಧಾನಗಳನ್ನು ಮನೆಯಲ್ಲೇ ಪೂರೈಸುವುದು ಅನಿವಾರ್ಯವಾಗಿತ್ತು.

‘ವಿಶ್ವವೇ ಸಂಕಷ್ಟದಲ್ಲಿರುವಾಗ ಸಂಭ್ರಮಪಡಬಾರದು’ ಎಂದು ಧಾರ್ಮಿಕ ಗುರುಗಳು ಸೂಚನೆ ನೀಡಿದ್ದರು. ಮಸೀದಿಗೆ ಹೊರಗಿನವರಿಗೆ ಪ್ರವೇಶ ಇರಲಿಲ್ಲ. ಧರ್ಮಗುರು, ಮೌಲ್ವಿ, ಪೇಶ್‌ಇಮಾಮ್‌, ಮೌಝಿನ್‌ ಹಾಗೂ ಸಿಬ್ಬಂದಿ ಮಾತ್ರ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಪ್ರತಿ ಮನೆಯಲ್ಲೂ ಶ್ರದ್ಧಾ–ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಲಾಯಿತು.

‘ರಂಜಾನ್‌ ಹಬ್ಬದ ಸಂಭ್ರಮ ಇರಲಿಲ್ಲ. ಆದರೆ, ಸಂಪ್ರದಾಯಗಳು ಎಂದಿನಂತೆ ನೆರವೇರಿದವು. ಮಸೀದಿಯಲ್ಲಿ ಐದಕ್ಕಿಂತ ಹೆಚ್ಚು ಜನರು ಪ್ರಾರ್ಥನೆ ಮಾಡಲಿಲ್ಲ. ಮಸೀದಿಯಲ್ಲಿ ಪ್ರಾರ್ಥನೆ ಮುಗಿದ ಬಳಿಕ ಮನೆ–ಮನೆಯಲ್ಲಿ ಹಬ್ಬ ನಡೆಯಿತು’ ಎಂದು ಜಾಮೀಯಾ ಮಸೀದಿ ಅಧ್ಯಕ್ಷ ಇಕ್ಬಾಲ್‌ ಹುಸೇನ್‌ ತಿಳಿಸಿದರು.

ನಸುಕಿನ 5.30ಕ್ಕೆ ಮಸೀದಿಯಲ್ಲಿ ಫಜರ್‌ ನಡೆಯಿತು. ಒಂದು ಗಂಟೆಯ ಬಳಿಕ ಈದ್‌– ಉಲ್‌– ಫಿತ್ರ್‌ ವಿಶೇಷ ಪ್ರಾರ್ಥನೆ ನೆರವೇರಿತು. ಸಾಮೂಹಿಕ ಪ್ರಾರ್ಥನೆಗೆ ನಿರ್ಬಂಧ ಇರುವುದರಿಂದ ಧರ್ಮಗಳು ಸೇರಿ ಐವರು ಮಾತ್ರ ಈ ಪ್ರಾರ್ಥನೆ ಮಾಡಿದರು. ಪ್ರಾರ್ಥನೆ ಮುಗಿದ ಮಾಹಿತಿಯನ್ನು ಮಸೀದಿ ಸಮಿತಿ ಎಲ್ಲೆಡೆ ಪಸರಿಸಿತು. ನಂತರ ಹಬ್ಬ ಕಳೆಗಟ್ಟಿತು. ಬೆಳಿಗ್ಗೆ 7.30ರಿಂದ ಮಧ್ಯಾಹ್ನ 12ರವರೆಗೆ ಪ್ರತಿ ಮನೆಯಲ್ಲಿ ಪ್ರಾರ್ಥನೆ ನಡೆಯಿತು. ಮಧ್ಯಾಹ್ನ ಹಬ್ಬದ ಊಟ ಸವಿದರು.

‘ಕೋವಿಡ್‌–19 ಕರಾಳತೆಯನ್ನು ಸೃಷ್ಟಿಸಿರುವುದರಿಂದ ಹೊಸ ಬಟ್ಟೆ ಧರಿಸಬೇಡಿ. ಹಬ್ಬವನ್ನು ಸಡಗರದ ಬದಲಿಗೆ ಸಾಂಪ್ರದಾಯಿಕವಾಗಿ ಆಚರಿಸಿ. ಜಗತ್ತಿನಲ್ಲಿ ಲಕ್ಷಾಂತರ ಜನರು ಕೋವಿಡ್‌ಗೆ ಬಲಿಯಾಗಿರುವ ಇಂತಹ ಸಂದರ್ಭದಲ್ಲಿ ಹಬ್ಬವನ್ನು ಸಂಭ್ರಮದಿಂದ ಆಚರಿಸುವುದು ತಪ್ಪಾಗುತ್ತದೆ’ ಎಂದು ಜಾಮೀಯಾ ಮಸೀದಿಯ ಗುರುಗಳು ಹಬ್ಬಕ್ಕೂ ಮೊದಲೇ ಭಕ್ತರಿಗೆ ಸಂದೇಶ ನೀಡಿದ್ದರು. ಹಬ್ಬದ ದಿನ ಪ್ರತಿಯೊಬ್ಬರು ಈ ಸಂದೇಶವನ್ನು ಪಾಲಿಸಿದರು.

ಹಬ್ಬದ ಅಂಗವಾಗಿ ಪೊಲೀಸರು ಬಿಗಿ ಬಂದೋಬಸ್ತ್‌ ಕೈಗೊಂಡಿದ್ದರು. ಪ್ರಮುಖ ಮಸೀದಿ ಹಾಗೂ ಮೈದಾನದ ಬಳಿ ಭದ್ರತೆಗೆ ಪೊಲೀಸರನ್ನು ನಿಯೋಜಿಸಲಾಗಿತ್ತು. ನಗರದಲ್ಲಿ ಜನ ಹಾಗೂ ವಾಹನ ಸಂಚಾರವೂ ಕಡಿಮೆ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.