ADVERTISEMENT

ಭರಪೂರ ಮಳೆ; ಮೈದುಂಬಿದ ರಾಣಿಕೆರೆ

ಚಳ್ಳಕೆರೆ 113 ವರ್ಷ ದಾಟಿದ ರಾಣಿಕೆರೆಯಲ್ಲಿ ನೀರು ಹೆಚ್ಚಳ; ರೈತರಲ್ಲಿ ಸಂತಸ

ಶಿವಗಂಗಾ ಚಿತ್ತಯ್ಯ
Published 20 ಅಕ್ಟೋಬರ್ 2020, 2:42 IST
Last Updated 20 ಅಕ್ಟೋಬರ್ 2020, 2:42 IST
ಚಳ್ಳಕೆರೆ ತಾಲ್ಲೂಕಿನ ಮೀರಾಸಾಬಿಹಳ್ಳಿ ಗ್ರಾಮದ ಬಳಿ ಇರುವ ರಾಣಿ ಕೆರೆಯಲ್ಲಿ 20 ಅಡಿ ನೀರು ಸಂಗ್ರಹವಾಗಿದೆ
ಚಳ್ಳಕೆರೆ ತಾಲ್ಲೂಕಿನ ಮೀರಾಸಾಬಿಹಳ್ಳಿ ಗ್ರಾಮದ ಬಳಿ ಇರುವ ರಾಣಿ ಕೆರೆಯಲ್ಲಿ 20 ಅಡಿ ನೀರು ಸಂಗ್ರಹವಾಗಿದೆ   

ಚಳ್ಳಕೆರೆ: ಮುಂಗಾರು ಹಂಗಾಮಿನಲ್ಲಿ ಈ ಬಾರಿ ಸುರಿದ ಭಾರಿ ಮಳೆಯಿಂದ ತಾಲ್ಲೂಕಿನ ಮೀರಾಸಾಬಿಹಳ್ಳಿ ಗ್ರಾಮದ ರಾಣಿಕೆರೆಯಲ್ಲಿ 20 ಅಡಿಗಿಂತಲೂ ಹೆಚ್ಚು ಮಳೆನೀರು ಸಂಗ್ರಹವಾಗಿದೆ.

ಭರಮಸಾಗರ, ಬೊಮ್ಮಸಮುದ್ರ, ದೊಡ್ಡೇರಿ, ಡಿ.ಉಪ್ಪಾರಹಟ್ಟಿ, ದೇವರ ಮರಿಕುಂಟೆ, ಕಸ್ತೂರಿತಿಮ್ಮನಹಳ್ಳಿ, ಚನ್ನಮ್ಮನಾಗತಿಹಳ್ಳಿ, ಕಾಲುವೆಹಳ್ಳಿ, ಕ್ಯಾತಗೊಂಡನಹಳ್ಳಿ, ಕರಿಕೆರೆ, ಯಾದಲಗಟ್ಟೆ, ಜಾಜೂರು, ದೊಡ್ಡ ಉಳ್ಳಾರ್ತಿ, ದುರ್ಗವರ, ವಿಡಪನಕುಂಟೆ ಸೇರಿ ಕೆರೆಯ ಅಕ್ಕಪಕ್ಕದ 60ಕ್ಕೂ ಹೆಚ್ಚು ಗ್ರಾಮದ ಕೊಳವೆಬಾವಿಗಳಲ್ಲಿ ಅಂರ್ತಜಲ ವೃದ್ಧಿಯಾಗಿದೆ. ಇದರಿಂದ ಕೆರೆ ತಟದ ಪ್ರದೇಶದಲ್ಲಿ ನೀರಾವರಿ ಕೃಷಿ ಚಟವಟಿಕೆಗೆ ಮರು ಜೀವ ಬಂದಂತಾಗಿದೆ.

2,500 ಎಕರೆ ಪ್ರದೇಶದ ವಿಸ್ತೀರ್ಣ ಹೊಂದಿರುವ ರಾಣಿಕೆರೆ 24 ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. 1,900 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಉಣಿಸುತ್ತದೆ. ಕೆರೆಯಲ್ಲಿ ಈಗಾಗಲೇ 20 ಅಡಿ ನೀರು ಸಂಗ್ರಹವಾಗಿರುವ ಕಾರಣ ಮೀನುಗಾರಿಕೆ ಇಲಾಖೆ 10 ಲಕ್ಷ ಮೀನು ಮರಿಗಳನ್ನು ಕೆರೆಗೆ ಬಿಟ್ಟಿದೆ.

ADVERTISEMENT

ನೀರು ಹರಿಸಲು ಮನವಿ: ಕೆರೆ ಕೋಡಿ ಬಿದ್ದು 10 ವರ್ಷ ಕಳೆದಿದೆ. ಮೂರು ಬಾರಿ 13 ಮತ್ತು 15 ಅಡಿ ನೀರು ಸಂಗ್ರಹವಾಗಿತ್ತು. ಬರದ ಕಾರಣ ಜನ- ಜಾನುವಾರಿನ ಕುಡಿಯುವ ನೀರಿಗೆ ಜಿಲ್ಲಾಡಳಿತ ಕೆರೆಯ ನೀರು ಹರಿಸಲಿಲ್ಲ. ಇದರಿಂದ ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ಕೃಷಿ ಚಟವಟಿಕೆ ಇಲ್ಲಿವರೆಗೂ ಸಂಪೂರ್ಣ ಸ್ಥಗಿತಗೊಂಡಿದೆ.

‘ಈ ಬಾರಿ ಎಲ್ಲೆಡೆ ಹೆಚ್ಚಿನ ಪ್ರಮಾಣದಲ್ಲಿ ಮಳೆ ಬಿದ್ದಿರುವ ಕಾರಣ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗುವುದಿಲ್ಲ. ಆದ್ದರಿಂದ ತಡಿ ಫಸಲು ಬೆಳೆದುಕೊಳ್ಳಲು ಅಚ್ಚುಕಟ್ಟು ಪ್ರದೇಶಕ್ಕೆ ಕೆರೆ ನೀರು ಹರಿಸಲು ಕ್ರಮ ಕೈಗೊಳ್ಳಬೇಕು’ ಎಂದು ಕೆರೆ ಅಚ್ಚುಕಟ್ಟು ಸಮಿತಿ ಅಧ್ಯಕ್ಷ ಸುದರ್ಶನರೆಡ್ಡಿ, ಎಂಜೆ.ರೆಡ್ಡಿ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.

ಕೆರೆ ಸಂರಕ್ಷಣೆ ಮಾಡಿ: ಕೆಡವಿದ ಮನೆಯ ಕಲ್ಲು, ಮಣ್ಣು, ಇಟ್ಟಿಗೆ ಹಾಗೂ ಸಿಮೆಂಟ್ ಚೂರುಗಳು ಸೇರಿದಂತೆ ಘನ ತ್ಯಾಜ್ಯ ವಸ್ತುಗಳನ್ನು ಲೋಡ್‌ಗಟ್ಟಲೆ ಕೆರೆಯಂಗಳಕ್ಕೆ ತಂದು ಸುರಿಯುತ್ತಾರೆ. ಜಾಗವನ್ನು ದಿನೇ ದಿನೆ ಒತ್ತುವರಿ ಮಾಡುತ್ತಿರುವುದನ್ನು ತಡೆಯಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಸರ್.ಎಂ.ವಿಶ್ವೇಶ್ವರಯ್ಯ ಅವರು ರೂಪಿಸಿದ ಯೋಜನೆಯಂತೆ ಮೈಸೂರು ಮಹಾರಾಜ ಜಯಚಾಮರಾಜ ಒಡೆಯರು ತಮ್ಮ ರಾಣಿಯ ನೆನಪಿಗೆ (1907ರಲ್ಲಿ) ಚಿತ್ರದುರ್ಗ ಜಿಲ್ಲೆ ಹಿರಿಯೂರಿನಲ್ಲಿ ವಾಣಿವಿಲಾಸ ಸಾಗರ, ಸೂಳೆಕೆರೆ ಮತ್ತು ಚಳ್ಳಕೆರೆ ತಾಲ್ಲೂಕು ಮೀರಾಸಾಬಿಹಳ್ಳಿ ಗ್ರಾಮದ ರಾಣಿಕೆರೆ ನಿರ್ಮಿಸಿದರು. ಈ ಕೆರೆ-ಕಟ್ಟೆಗಳಿಗೆ ಈಗ 113 ವರ್ಷ ಸಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.