ADVERTISEMENT

ಪರಿಸರದ ಅಧೋಗತಿಯಿಂದ ಭೂಮಿ ಗರ್ಜನೆ: ಹಿರಿಯ ಪತ್ರಕರ್ತ ನಾಗೇಶ್‌ ಹೆಗಡೆ

ಸಾಣೇಹಳ್ಳಿಯಲ್ಲಿ ನಡೆದ ರಾಷ್ಟ್ರೀಯ ಅಂತರ್ಜಾಲ ನಾಟಕೋತ್ಸವದಲ್ಲಿ ಹಿರಿಯ ಪತ್ರಕರ್ತ ನಾಗೇಶ್‌ ಹೆಗಡೆ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2020, 2:30 IST
Last Updated 5 ನವೆಂಬರ್ 2020, 2:30 IST
ಬೆಂಗಳೂರಿನ ಬೆನಕ- ಕಲಾವಿದರು ಅಭಿನಯಿಸಿದ ‘ವಿದ್ಯಾಸುಂದರಿ ಬೆಂಗಳೂರು ನಾಗರತ್ನಮ್ಮ’ ನಾಟಕದ ದೃಶ್ಯ
ಬೆಂಗಳೂರಿನ ಬೆನಕ- ಕಲಾವಿದರು ಅಭಿನಯಿಸಿದ ‘ವಿದ್ಯಾಸುಂದರಿ ಬೆಂಗಳೂರು ನಾಗರತ್ನಮ್ಮ’ ನಾಟಕದ ದೃಶ್ಯ   

ಹೊಸದುರ್ಗ: ‘ದಿನೇ ದಿನೇ ಪರಿಸರ ಅಧೋಗತಿಗೆ ಇಳಿಯುತ್ತಿದೆ. ಈ ಭೂಮಿ ‘ಮಾತಾಡಿದ್ ಸಾಕು ಬಾಯಿ ಮುಚ್ಚಿಕೊಳ್ಳಿ’ ಎಂದು ಹೇಳ್ತಾ ಕಾಡ್ಗಿಚ್ಚು, ಭೂಕಂಪ, ಮಣ್ಣು ಕುಸಿತ, ಮಿಡತೆಗಳ ದಾಳಿ, ಕೊರೊನಾ ಸಾಂಕ್ರಾಮಿಕ ದಾಳಿ ಮುಂತಾದವುಗಳ ಮೂಲಕ ತಾನೇ ಗರ್ಜಿಸ್ತಾ ಇದೆ’ ಎಂದು ಬೆಂಗಳೂರಿನ ಹಿರಿಯ ಪತ್ರಕರ್ತ ನಾಗೇಶ್ ಹೆಗಡೆ ಹೇಳಿದರು.

ರಾಷ್ಟ್ರೀಯ ಅಂತರ್ಜಾಲ ನಾಟಕೋತ್ಸವದಲ್ಲಿ ಬುಧವಾರ ಸಂಜೆ ಅವರು ‘ಪರಿಸರ- ಅತಿಮಾನವ’ ವಿಷಯ ಕುರಿತು ಉಪನ್ಯಾಸ ನೀಡಿದರು.

‘ಪ್ರತಿಭಟನೆಯ ನೆಪದಲ್ಲಿ ಕಾಣಿಸಿಕೊಳ್ಳುವ ಹೊಗೆ, ಗದ್ದಲಗಳು ಮನುಷ್ಯರನ್ನಷ್ಟೇ ಅಲ್ಲ, ಇಡೀ ಪರಿಸರವನ್ನೇ ಅನಾರೋಗ್ಯಕ್ಕೀಡು ಮಾಡುತ್ತಿವೆ. ನಮ್ಮ ಹೋರಾಟ ಎಲ್ಲರಿಗೂ ಕಾಣಬೇಕು ಎನ್ನುವ ಧಾವಂತದಲ್ಲಿ ಗಾಳಿಗೆ, ನೀರಿಗೆ, ನೆಲಕ್ಕೆ ಮಾಲಿನ್ಯ ಸೇರಿಸುತ್ತಿದ್ದೇವೆ. ಅತಿವೃಷ್ಟಿ, ಅನಾವೃಷ್ಟಿಯಿಂದ ನಾಡು ಕಂಗಾಲಾತ್ತಿದೆ. ಕೆಲವೇ ವರ್ಷಗಳಲ್ಲಿ ಉತ್ತರ ಕರ್ನಾಟಕದ ಹತ್ತಾರು ಜಿಲ್ಲೆಗಳು ರಾಜಸ್ಥಾನದ ನಂತರದ ಎರಡನೇ ಅತಿದೊಡ್ಡ ಮರುಭೂಮಿ
ಗಳಾಗಲಿವೆ ಎಂದು ವೈಜ್ಞಾನಿಕ ವರದಿಗಳು ಹೇಳುತ್ತಿವೆ’ ಎಂದು ವಿವರಿಸಿದರು.

ADVERTISEMENT

‘ಮಳೆ–ನೀರು–ಸಮಾಜ’ ಕುರಿತು ಉಪನ್ಯಾಸ ನೀಡಿದ ಹಾಸನದ ಸಾಮಾಜಿಕ ಹೋರಾಟಗಾರ್ತಿ ರೂಪಾ ಹಾಸನ, ‘ಪ್ರಕೃತಿ ಒಂದು ಉದಾತ್ತ ನೆಲೆಗಟ್ಟಿನಲ್ಲಿ ಸಕಲ ಜೀವಜಂತು, ಗಿಡಮರಬಳ್ಳಿಗಳನ್ನು ತನ್ನೊಳಗೆ ಒಳಗೊಂಡು ಎಲ್ಲದರ ಕ್ಷೇಮವನ್ನು ಪರಿಗಣಿಸುತ್ತ ಬಂದಿದೆ. ಆದರೆ, ಮನುಷ್ಯ ಅಭಿವೃದ್ಧಿಯ ಹೆಸರಿನಲ್ಲಿ ಕೇವಲ ಮಾನವ ಕೇಂದ್ರಿತವಾಗಿ ಯೋಚಿಸುತ್ತಿರುವುದರಿಂದ ಕಾಡು, ಗುಡ್ಡು, ಬೆಟ್ಟ, ನದಿ ಎಲ್ಲವೂ ನಿರ್ನಾಮದ ಹಂತ ತಲುಪಿದೆ. ಹವಾಮಾನ ವೈಪರಿತ್ಯದಿಂದ ಭೀಕರ ಸಮಸ್ಯೆಗಳಾಗುತ್ತಿವೆ. ಬರ–ನೆರೆ ಬಡವರ ಬದುಕನ್ನು ಕಿತ್ತು ತಿನ್ನುತ್ತಿದೆ’ ಎಂದು ವಿವರಿಸಿದರು.

ನೇತೃತ್ವ ವಹಿಸಿದ್ದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಪಂಡಿತಾರಾಧ್ಯ ಶ್ರೀಗಳ ಸಂಪಾದಿತ ‘ಗಾಂಧಿ ಆರ್ಥಿಕತೆ ಮತ್ತು ಗ್ರಾಮ ಸ್ವರಾಜ್’ ಕೃತಿಯನ್ನು ಲೋಕಾರ್ಪಣೆಗೊಳಿಸಿದ ದಾವಣಗೆರೆಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮಂಜುನಾಥ್ ಮಾತನಾಡಿದರು. ಬೆಂಗಳೂರಿನ ಬೆನಕ–ಕಲಾವಿದರು ‘ವಿದ್ಯಾಸುಂದರಿ ಬೆಂಗಳೂರು ನಾಗರತ್ನಮ್ಮ’ ನಾಟಕ ಅಭಿನಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.