ADVERTISEMENT

ವದ್ದೀಕೆರೆ ಸಿದ್ದೇಶ್ವರಸ್ವಾಮಿ ಬ್ರಹ್ಮ ರಥೋತ್ಸವ ವೈಭವ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2025, 14:21 IST
Last Updated 14 ಏಪ್ರಿಲ್ 2025, 14:21 IST
ಹಿರಿಯೂರು ತಾಲ್ಲೂಕಿನ ವದ್ದೀಕೆರೆ ಗ್ರಾಮದಲ್ಲಿ ಸೋಮವಾರ ನಡೆದ ಸಿದ್ದೇಶ್ವರ (ಕಾಲಭೈರವೇಶ್ವರ)ಸ್ವಾಮಿ ಬ್ರಹ್ಮ ರಥೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು 
ಹಿರಿಯೂರು ತಾಲ್ಲೂಕಿನ ವದ್ದೀಕೆರೆ ಗ್ರಾಮದಲ್ಲಿ ಸೋಮವಾರ ನಡೆದ ಸಿದ್ದೇಶ್ವರ (ಕಾಲಭೈರವೇಶ್ವರ)ಸ್ವಾಮಿ ಬ್ರಹ್ಮ ರಥೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು    

ಹಿರಿಯೂರು: ತಾಲ್ಲೂಕಿನ ಸುಕ್ಷೇತ್ರ ವದ್ದೀಕೆರೆಯ ಕಾಲಭೈರವೇಶ್ವರ ಸ್ವಾಮಿ ಅಥವಾ ಸಿದ್ದೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಸೋಮವಾರ ಸಾವಿರಾರು ಭಕ್ತರ ಸಂಭ್ರಮದ ನಡುವೆ ವಿಜೃಂಭಣೆಯಿಂದ ನೆರವೇರಿತು.

ಸೋಮವಾರ ಮಧ್ಯಾಹ್ನ ಹೂವಿನ ಪಲ್ಲಕ್ಕಿ ಉತ್ಸವ, ಜನಪದ ಕಲಾವಿದರಿಂದ ವೈವಿಧ್ಯಮಯ ಮೆರವಣಿಗೆ ನಂತರ ಸಂಜೆ 5ಕ್ಕೆ ಬ್ರಹ್ಮರಥೋತ್ಸವ ನಡೆಯಿತು.

ಏ. 11ರಂದು ರಾತ್ರಿ 8ಕ್ಕೆ ಕಂಕಣ ಧಾರಣೆಯೊಂದಿಗೆ ಜಾತ್ರೆಗೆ ಚಾಲನೆ ನೀಡಲಾಗಿತ್ತು. 12ರಂದು ಸಂಜೆ 7ಕ್ಕೆ ಅಗ್ನಿಗುಂಡ, 13ರಂದು ರಾತ್ರಿ 8ಕ್ಕೆ ಚಿಕ್ಕ ರಥೋತ್ಸವ ನಡೆದಿತ್ತು. 14ರಂದು ರಥೋತ್ಸವಕ್ಕೆ ಮೊದಲು ಹೂವಿನ ಪಲ್ಲಕ್ಕಿ ಉತ್ಸವ, ಜಾನಪದ ತಂಡಗಳಿಂದ ಕೂಡಿವ ವೈವಿಧ್ಯಮಯ ಮೆರವಣಿಗೆ ನಡೆಯಿತು.

ADVERTISEMENT

15ರಂದು ಉಂಡೆ, ಮಂಡೆ, ಸಿದ್ದಭುಕ್ತಿ, ಏ. 16ರಂದು ಕಿರುಬಾನ, ವಸಂತೋತ್ಸವ ಹಾಗೂ ಸಂಜೆ 6ಕ್ಕೆ ಕಂಕಣ ವಿಸರ್ಜನೆಯೊಂದಿಗೆ ಜಾತ್ರೆ ಸಮಾಪನೆಗೊಳ್ಳಲಿದೆ.

ಸಿದ್ದಪ್ಪನ ಕುರಿತು ಹಲವಾರು ಜಾನಪದ ಕತೆಗಳು ಈ ಭಾಗದ ಹಳ್ಳಿಗರ ಬಾಯಲ್ಲಿ ನಲಿದಾಡುತ್ತವೆ. ಹೇಮಾವತಿಯ ಹೆಂಜಾರಪ್ಪನ ತಮ್ಮ ಸಿದ್ದಪ್ಪ ವದ್ದೀಕೆರೆಯ ಬಳಿ ಬಂದಾಗ ಬಾಯಾರಿಕೆಯಾಗಿ ತ್ರಿಶೂಲದಿಂದ ನೆಲಕ್ಕೆ ತಿವಿದದ್ದರಿಂದ ನೀರು ಚಿಮ್ಮಿ ಬಾವಿಯಾಯಿತು. ಇಡೀ ವರ್ಷ ಈ ಬಾವಿಯಲ್ಲಿ ನೀರು ತುಂಬಿರುತ್ತದೆ. ಜಾತ್ರೆಯ ದಿನ ನೀರು ಇಲ್ಲವಾಗುತ್ತದೆ. ಹಿಂದೆ ಈ ಪ್ರದೇಶದಲ್ಲಿ ವದ್ದಿಮೆಳೆ (ಬಿದಿರುಮೆಳೆ) ಯಥೇಚ್ಛವಾಗಿದ್ದುದರಿಂದ ವದ್ದೀಕೆರೆ ಎಂಬ ಹೆಸರು ಬಂದಿದ್ದು, ಸಿದ್ದಪ್ಪ ಈ ಮೆಳೆಗಳಲ್ಲೇ ವಾಸವಾಗಿದ್ದ ಎಂಬ ನಂಬಿಕೆ ಜನರಲ್ಲಿದೆ.

ಸಿದ್ದಪ್ಪನ ದೇವಾಲಯ ಚೋಳರ ಕಾಲದಲ್ಲಿ ನಿರ್ಮಾಣವಾಗಿರಬಹುದು ಎನ್ನುವುದು ಇತಿಹಾಸಕಾರರ ಅನಿಸಿಕೆ. ಸಿದ್ದಪ್ಪನ ಜಾತ್ರೆ 8 ದಿನಗಳ ಕಾಲ ಅದ್ದೂರಿಯಾಗಿ ನಡೆಯುತ್ತದೆ. ಮನೆಗಳಲ್ಲಿ ಚೇಳು ಕಾಣಿಸಿಕೊಂಡರೆ ಸಿದ್ದಪ್ಪನನ್ನು ಸ್ಮರಿಸಿದರೆ ಕಣ್ಮರೆಯಾಗುತ್ತದೆ ಎಂಬ ಪ್ರತೀತಿಯಿದೆ. ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ತೇರನ್ನು ಹೊರತುಪಡಿಸಿದರೆ ಜಿಲ್ಲೆಯಲ್ಲಿ ಅತೀ ಹೆಚ್ಚು ಭಕ್ತರು ಸೇರುವ ಮತ್ತೊಂದು ಜಾತ್ರೆ ಎಂಬ ಖ್ಯಾತಿ ಸಿದ್ದೇಶ್ವರಸ್ವಾಮಿ ಜಾತ್ರೆಯದ್ದು.

ಉತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಎನ್.ಆರ್. ಲಕ್ಷ್ಮೀಕಾಂತ್, ತಹಶೀಲ್ದಾರ್ ರಾಜೇಶ್ ಕುಮಾರ್ ಪಾಲ್ಗೊಂಡಿದ್ದರು.

ಸಿದ್ದೇಶ್ವರಸ್ವಾಮಿ ಬ್ರಹ್ಮರಥೋತ್ಸವಕ್ಕೂ ಮೊದಲು ನಡೆದ ಆಕರ್ಷಕ ಹೂವಿನ ಪಲ್ಲಕ್ಕಿ ಉತ್ಸವ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.