ADVERTISEMENT

ಮೋದಿಯನ್ನು ಹೊತ್ತು ಕುಣಿಯುವವರೇ ಅವರ ಸಮಾಧಿ ಕಟ್ಟುತ್ತಾರೆ: ರವಿ ಬೆಳಗೆರೆ

ಸಿಎಎ ವಿರೋಧಿ ಚಳವಳಿಯಲ್ಲಿ ಪತ್ರಕರ್ತ ರವಿ ಬೆಳಗೆರೆ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2020, 13:31 IST
Last Updated 20 ಫೆಬ್ರುವರಿ 2020, 13:31 IST
ರವಿ ಬೆಳಗೆರೆ
ರವಿ ಬೆಳಗೆರೆ   

ಚಿತ್ರದುರ್ಗ: ಪ್ರಧಾನಿ ನರೇಂದ್ರ ಮೋದಿ ಅವರನ್ನು ತಲೆ ಮೇಲೆ ಹೊತ್ತು ಕುಣಿಯುತ್ತಿರುವ ದೇಶವಾಸಿಗಳೇ ಅವರ ಸಮಾಧಿಯನ್ನು ಕಟ್ಟುತ್ತಾರೆ. ಇತಿಹಾಸ ಚಲನಶೀಲವಾಗಿದ್ದು, ಶೀಘ್ರವೇ ಪುನರಾವರ್ತನೆಯಾಗುತ್ತದೆ ಎಂದು ಪತ್ರಕರ್ತ ರವಿ ಬೆಳಗೆರೆ ಅಭಿಪ್ರಾಯಪಟ್ಟರು.

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ವಿರೋಧಿಸಿ 18 ದಿನಗಳಿಂದ ನಡೆಯುತ್ತಿರುವ ಧರಣಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಮೋದಿ ಅಕ್ಷರಶಃ ಸೂತ್ರದ ಗೊಂಬೆ. ಈ ಗೊಂಬೆಯನ್ನು ಕೆಲವರು ಆಡಿಸುತ್ತಿದ್ದಾರೆ. ಅಮಿತ್‌ ಶಾ, ಅಂಬಾನಿ ಹಾಗೂ ಅದಾನಿಯ ರಕ್ಷಣೆಯಲ್ಲಿ ಮೋದಿ ಬದುಕುತ್ತಿದ್ದಾರೆ. ತ್ರಿವಳಿ ತಲಾಖ್‌, ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನ ಹಿಂಪಡೆದಿದ್ದಕ್ಕೆ ಬೆಂಬಲವಿದೆ. ಆದರೆ, ಮಾನವ ವಿರೋಧಿಯಾಗಿರುವ ಸಿಎಎ ಹಾಗೂ ಎನ್‌ಆರ್‌ಸಿಗೆ ಬೆಂಬಲವಿಲ್ಲ. ನೀವು ಕೇಳುವ ದಾಖಲೆಗಳನ್ನು ಒದಗಿಸಲು ಸಾಧ್ಯವಿಲ್ಲ’ ಎಂದರು.

ADVERTISEMENT

‘ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಂದ ಕೊಳಚೆ ಪ್ರದೇಶ ಮುಚ್ಚಿಡಲು ಗೋಡೆ ಕಟ್ಟಲಾಗುತ್ತಿದೆ. ಇನ್ನೊಂದು ಬಾರಿ ಮೋದಿ ಗೆಲ್ಲಿಸಿದರೆ ಎಲ್ಲರ ಗೋರಿ ಕಟ್ಟುತ್ತಾರೆ. ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ಬಹುತೇಕ ಕೈಗಾರಿಕೆಗಳು ಬಾಗಿಲು ಮುಚ್ಚಿವೆ. ಹಸಿದವರು ಊಟ ಕೇಳುತ್ತಾರೆ ಹೊರತು ಭಜನೆ ಮಾಡುವುದಿಲ್ಲ’ ಎಂದು ಕಿಡಿಕಾರಿದರು.

‘ಸಿಎಎ ವಿರೋಧಿಸಿ ಸಿರಾಜ್‌ ಬಿಸರಳ್ಳಿ ರಚಿಸಿದ ಕವನ ಸೂಕ್ತವಾಗಿದೆ. ತೋಚಿದ್ದನ್ನು ಬರೆದ ಸಿರಾಜ್‌ ಕವಿ ಗಾಲಿಬ್ ಅಲ್ಲ. ಸಿರಾಜ್‌ ಮೇಲೆ ಪ್ರಕರಣ ದಾಖಲಿಸಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮೂರ್ಖತನ ಪ್ರದರ್ಶಿಸಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.