ADVERTISEMENT

ಚಿತ್ರದುರ್ಗ: ನೇಮಕಾತಿಯಲ್ಲಿ ಅಕ್ರಮ;ಡಾ.ಯುವರಾಜ್‌ ಅಮಾನತಿಗೆ ಆಗ್ರಹಿಸಿ ಪ್ರತಿಭಟನೆ

ಚಿತ್ರದುರ್ಗ ವೈದ್ಯಕೀಯ ಕಾಲೇಜು ಬೋಧಕ ಸಿಬ್ಬಂದಿ ನೇಮಕಾತಿಯಲ್ಲಿ ಅಕ್ರಮ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2025, 9:09 IST
Last Updated 22 ಏಪ್ರಿಲ್ 2025, 9:09 IST
   

ಚಿತ್ರದುರ್ಗ: ಸರ್ಕಾರಿ ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆಯ ಬೋಧಕ ಸಿಬ್ಬಂದಿ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆಸಿದ ಆರೋಪ ಎದುರಿಸುತ್ತಿರುವ ಸಂಸ್ಥೆಯ ನಿರ್ದೇಶಕ ಡಾ.ಯುವರಾಜ್‌ ಅವರನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿ ರಾಜ್ಯ ಮಾದಿಗ ಯುವಸೇನೆ ಸದಸ್ಯರು ಮಂಗಳವಾರ ಒನಕೆ ಓಬವ್ವ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಪ್ರಾಧ್ಯಾಪಕ ಹುದ್ದೆಗೆ ₹ 50 ಲಕ್ಷ ಲಂಚ ಪಡೆಯಲಾಗಿದೆ ಎಂದು ‘ಪ್ರಜಾವಾಣಿ’ ಪತ್ರಿಕೆ ವರದಿ ಮಾಡಿದೆ. ಇತ್ತೀಚಿಗಷ್ಟೇ ಆರಂಭವಾದ ವೈದ್ಯಕೀಯ ಕಾಲೇಜಿನಲ್ಲಿ ಅವ್ಯವಹಾರ ನಡೆಸಿ ಸಂಸ್ಥೆಯ ಹೆಸರಿಗೆ ಧಕ್ಕೆ ತಂದಿದ್ದಾರೆ. ನೇಮಕಾತಿ ಪ್ರಕ್ರಿಯೆ ಬಗ್ಗೆ ಲೋಕಾಯುಕ್ತ ಅಥವಾ ಸಿಐಡಿ ತನಿಖೆ ನಡೆಸಬೇಕು. ತನಿಖೆ ಪೂರ್ಣಗೊಳ್ಳುವವರೆಗೂ ಡಾ.ಯುವರಾಜ್‌ ಅವರನ್ನು ಅಮಾನತಿನಲ್ಲಿ ಇಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿ ಹಣ ಪಡೆದು ಪ್ರಾಧ್ಯಾಪಕ, ಸಹ ಪ್ರಾಧ್ಯಾಪಕ ಹಾಗೂ ಸಹಾಯಕ ಪ್ರಾಧ್ಯಾಪಕ ಹುದ್ದೆ ನೀಡಲಾಗಿದೆ. ಸದ್ಯ ಪ್ರಕಟ ಮಾಡಿರುವ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ರದ್ದುಗೊಳಿಸಬೇಕು. ಉತ್ತಮವಾದ ಹಾಗೂ ಅನುಭವಿ ವೈದ್ಯರನ್ನು ಸಂಸ್ಥೆಗೆ ನೇಮಕ ಮಾಡಿಕೊಳ್ಳಬೇಕು. ಭಷ್ಟ್ರ ನಿರ್ದೇಶಕರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬಂದಿದ್ದು ಕೂಡಲೇ ಅವರನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.

ADVERTISEMENT

ಯುವಸೇನೆ ಮುಖಂಡರಾದ ಶಿವಕುಮಾರ್‌, ನಾಗರಾಜ್‌, ರುದ್ರಮುನಿ, ವೆಂಕಟೇಶ್‌, ಓಬಳಯ್ಯ, ತಿಪ್ಪೇಸ್ವಾಮಿ, ಸಂತೋಷ್‌, ಕೆ.ಸಿದ್ದಪ್ಪ ಇದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.