ADVERTISEMENT

ರಾಷ್ಟ್ರೀಯ ಯೋಜನೆ: ಆದೇಶಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 22 ಜೂನ್ 2021, 18:36 IST
Last Updated 22 ಜೂನ್ 2021, 18:36 IST
ಚಿತ್ರದುರ್ಗ ಸಂಸದ ಎ.ನಾರಾಯಣಸ್ವಾಮಿ ಅವರು ನವದೆಹಲಿಯ ಕೇಂದ್ರ ಜಲಶಕ್ತಿ ಕಾರ್ಯದರ್ಶಿ ಓರಾ ಅವರನ್ನು ಮಂಗಳವಾರ ಭೇಟಿ ಮಾಡಿ ಚರ್ಚೆ ನಡೆಸಿದರು.
ಚಿತ್ರದುರ್ಗ ಸಂಸದ ಎ.ನಾರಾಯಣಸ್ವಾಮಿ ಅವರು ನವದೆಹಲಿಯ ಕೇಂದ್ರ ಜಲಶಕ್ತಿ ಕಾರ್ಯದರ್ಶಿ ಓರಾ ಅವರನ್ನು ಮಂಗಳವಾರ ಭೇಟಿ ಮಾಡಿ ಚರ್ಚೆ ನಡೆಸಿದರು.   

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಿ ಆದೇಶ ಹೊರಡಿಸಬೇಕು ಹಾಗೂ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು ಎಂದು ಸಂಸದ ಎ.ನಾರಾಯಣಸ್ವಾಮಿ ಅವರು ಕೇಂದ್ರ ಜಲಶಕ್ತಿ ಸಚಿವಾಲಯವನ್ನು ಕೋರಿದ್ದಾರೆ.

ನವದೆಹಲಿಯ ಕೇಂದ್ರ ಜಲಶಕ್ತಿ ಕಾರ್ಯದರ್ಶಿ ಓರಾ ಅವರನ್ನು ಮಂಗಳವಾರ ಭೇಟಿ ಮಾಡಿದ ಸಂಸದರು ಈ ಬಗ್ಗೆ ಚರ್ಚೆ ನಡೆಸಿದರು.

ಚಿತ್ರದುರ್ಗ, ಚಿಕ್ಕಮಗಳೂರು, ದಾವಣಗೆರೆ, ತುಮಕೂರು ಜಿಲ್ಲೆಯ 5.5 ಲಕ್ಷ ಎಕರೆಗೆ ನೀರಾವರಿ ಸೌಲಭ್ಯ ಕಲ್ಪಿಸುವ ಮಹಾತ್ವಕಾಂಕ್ಷೆಯೊಂದಿಗೆ ಭದ್ರಾ ಮೇಲ್ದಂಡೆ ಯೋಜನೆ ರೂಪುಗೊಂಡಿದೆ. 367 ಕೆರೆಗಳನ್ನು ತುಂಬಿಸಲಾಗುತ್ತಿದೆ. ಇದರ ಯೋಜನಾ ಗಾತ್ರವನ್ನು ₹ 12,340 ಕೋಟಿಯಿಂದ ₹ 21,473 ಕೋಟಿಗೆ ಹೆಚ್ಚಿಸಿ ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಣೆ ಮಾಡುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿದೆ.

ADVERTISEMENT

‘ಭದ್ರಾ ಮೇಲ್ದಂಡೆಯು ಕರ್ನಾಟಕದ ಬೃಹತ್‌ ನೀರಾವರಿ ಯೋಜನೆಯಾಗಿದೆ. ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಣೆ ಮಾಡುವ ಎಲ್ಲ ಅರ್ಹತೆಗಳನ್ನು ಇದು ಹೊಂದಿದೆ. ಕೇಂದ್ರ ಸರ್ಕಾರ ಈ ಯೋಜನೆಗೆ ತ್ವರಿತಗತಿಯಲ್ಲಿ ರಾಷ್ಟ್ರೀಯ ಮಾನ್ಯತೆ ನೀಡಬೇಕು’ ಎಂದು ಎ.ನಾರಾಯಣಸ್ವಾಮಿ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.