ಹಿರಿಯೂರು: ‘ಜೀವ ಜಗತ್ತು ಉಳಿಯಲು ಪಂಚಭೂತಗಳು ಎಷ್ಟು ಅಗತ್ಯವೋ ಅದೇರೀತಿ, ಸಸ್ಯಗಳ ಸಂತಾನಾಭಿವೃದ್ಧಿ, ಸಂರಕ್ಷಣೆಗೆ ಪರಾಗ ಸ್ಪರ್ಶ ಅಗತ್ಯ. ಶೇ 90ಕ್ಕಿಂತ ಹೆಚ್ಚು ಸಸ್ಯಗಳು ಪರಾಗಸ್ಪರ್ಶಕ್ಕಾಗಿ ಜೇನ್ನೊಣಗಳನ್ನು ಅವಲಂಬಿಸಿವೆ. ಹೀಗಾಗಿ ಸಹಜ ಕೃಷಿಯ ಉಳಿವಿಗಾಗಿ ಅಳಿಲು ಸೇವೆ ಸಲ್ಲಿಸಬೇಕು ಎಂದು ನಿವೃತ್ತಿಯ ನಂತರ ಜೇನು ಸಾಕಣೆಗೆ ಮುಂದಾದೆ’
ಕೃಷಿ ಇಲಾಖೆ ಸಹಾಯಕ ನಿರ್ದೇಶಕರಾಗಿ ನಿವೃತ್ತಿ ಹೊಂದಿದ ನಂತರ ಹಿರಿಯೂರು ತಾಲ್ಲೂಕಿನ ಮೇಟಿಕುರ್ಕೆ ಗ್ರಾಮದ ತಮ್ಮ ತೋಟದಲ್ಲಿ ‘ಚಂದನ–ಮಧುವನ’ ಸಂಸ್ಥೆ ಆರಂಭಿಸಿ ಜೇನು ಸಾಕಣೆ ಜೊತೆಗೆ ರೈತರಿಗೆ ಜೇನು ಸಾಕಣೆ ಕುರಿತು ತರಬೇತಿ ನೀಡುತ್ತಿರುವ ಎಸ್.ಎಂ. ಶಾಂತವೀರಯ್ಯ ರೈತರಿಗೆ ಮಾದರಿಯಾಗಿದೆ.
‘ನಾನು ಸಣ್ಣವನಿದ್ದಾಗ ನನ್ನ ತಂದೆ ಬೇಲಿಯಲ್ಲಿನ ಕೋಲ್ಜೇನನ್ನು ಹುಳುಗಳನ್ನು ನಾಶಮಾಡದೆ ಔಡಲ ಎಲೆಯಲ್ಲಿ ಮಾಡಿದ ದೊನ್ನೆಯಲ್ಲಿ ತುಪ್ಪವನ್ನು ಮಾತ್ರ ಸಂಗ್ರಹಿಸಿ ತಂದು ಬೆರಳ ತುದಿಯಲ್ಲಿ ನೆಕ್ಕಿಸುತ್ತಿದ್ದರು. ಜೇನುಗಳು ತುಪ್ಪವನ್ನು ಸಂಗ್ರಹಿಸುವ ಬಗ್ಗೆ ಮೊದಲ ಪಾಠ ಹೇಳಿಕೊಟ್ಟಿದ್ದೇ ಅವರು. ನಂತರ ಕೃಷಿ ಪದವಿ ಓದುವ ವೇಳೆ ಕೀಟ ಶಾಸ್ತ್ರಜ್ಞ ಡಾ. ಪುಟ್ಟರುದ್ರಯ್ಯ ಅವರು ಜೇನು ಸಂರಕ್ಷಣೆಯ ಅಗತ್ಯವನ್ನು ಒತ್ತಿ ಹೇಳುತ್ತಿದ್ದರು. ಜೊತೆಗೆ ಜಮ್ಮು ಕಾಶ್ಮೀರ ಕೃಷಿ ವಿ.ವಿ.ಯ ಜೇನು ವಿಭಾಗದ ಪ್ರಾಧ್ಯಾಪಕ ಡಿ.ಪಿ. ಆಬ್ರೋಲ್ ಬರೆದ ‘ಬೀಸ್ ಅಂಡ್ ಬೀ ಕೀಪಿಂಗ್ ಇನ್ ಇಂಡಿಯಾ’ ಪುಸ್ತಕದಿಂದ ಪ್ರೇರಿತನಾದ ನಾನು, ನಮ್ಮೂರಿನ ಕೋಟೆ ಗೋಡೆಯಲ್ಲಿ ಪತ್ತೆಯಾದ ಜೇನು ಕುಟುಂಬವೊಂದನ್ನು ಪೆಟ್ಟಿಗೆಗೆ ಸ್ಥಳಾಂತರಿಸುವ ಮೂಲಕ ಜೇನು ಸಾಕಣೆಗೆ ಮುಂದಾದೆ’ ಎಂದು ಅವರು ಸ್ಮರಿಸುತ್ತಾರೆ.
‘ಚಂದನ– ಮಧುವನ ಸಂಸ್ಥೆಯ ಮೂಲಕ ಜೇನು ಸಾಕಣೆ ಕುರಿತು ಬೋಧನಾ ಸಾಮಗ್ರಿ ತಯಾರಿಕೆ, ವಿಡಿಯೊಗಳು, ಚಾರ್ಟ್‌ಗಳನ್ನು ತಯಾರಿಸಿ ಸಂಘದ ಕೇಂದ್ರದಲ್ಲಿ ಜೇನು ಸಾಕಣೆ ಹಾಗೂ ರಾಣಿ ಜೇನು ಉತ್ಪಾದನೆ ಕುರಿತು ವಸತಿಯುತ ತರಬೇತಿ ನೀಡಲಾಗಿದೆ. ದಾವಣಗೆರೆ, ಕೊಪ್ಪಳ, ಮಂಡ್ಯ ಜಿಲ್ಲೆಗಳಿಗೆ ಹೋಗಿ ರೈತರಿಗೆ ತರಬೇತಿ ನೀಡಿದ್ದೇನೆ’ ಎಂಬುದು ಅವರ ಮಾಹಿತಿ.
‘ಅಡವಿಯಲ್ಲಿ ಜೇನು ಕುಟುಂಬಗಳು ಸಿಗುವುದು ಕಷ್ಟ. ಹೀಗಾಗಿ ರಾಣಿ ಜೇನನ್ನು ಅಭಿವೃದ್ಧಿ ಪಡಿಸುವ ಅನಿವಾರ್ಯತೆ ಇದೆ. ಹಳ್ಳಿಗಳಲ್ಲಿ ಪ್ರತಿ ಮನೆಯಲ್ಲೂ ಕೈತೋಟಗಳಿರುತ್ತವೆ. ಅಂತಹ ಕಡೆ ಐದಾರು ಜೇನು ಕುಟುಂಬ ಸಾಕಿದರೂ ತಿಂಗಳ ದಿನಸಿ, ತರಕಾರಿ ಖರ್ಚಿನ ಹಣ ಕೈಗೆ ಸಿಗುತ್ತದೆ. ನನ್ನಿಂದ ತರಬೇತಿ ಪಡೆದಿರುವ ನೂರಾರು ರೈತರು ತಂತಮ್ಮ ತೋಟಗಳಲ್ಲಿ 20ರಿಂದ 100ರವರೆಗೆ ಜೇನು ಕುಟುಂಬಗಳನ್ನು ಹೊಂದಿದ್ದಾರೆ’ ಎಂದು ಅವರು ವಿವರಿಸುತ್ತಾರೆ.
‘ಈ ರೈತರೆಲ್ಲ ವರ್ಷಕ್ಕೆ ತೋಟದ ಆದಾಯ ಹೊರತುಪಡಿಸಿ ₹ 3 ಲಕ್ಷದಿಂದ ₹ 4 ಲಕ್ಷವನ್ನು ಜೇನು ಸಾಕಣೆಯಂದಲೇ ಸಂಪಾದಿಸುತ್ತಿದ್ದಾರೆ. ಜೇನು ಮಾರಾಟಕ್ಕೆ ಮಾರುಕಟ್ಟೆ ತೊಂದರೆ ಇಲ್ಲ. ಗ್ರಾಹಕರು ತೋಟಕ್ಕೇ ಬಂದು ಖರೀದಿಸುತ್ತಾರೆ. ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆಯಾದರೆ ದೊಡ್ಡ ದೊಡ್ಡ ಕಂಪನಿಯವರು ಬಂದು ಖರೀದಿಸುತ್ತಾರೆ. ಕೃಷಿಗೆ ಉಪ ಕಸುಬಾಗಿ ಜೇನು ಸಾಕಣೆ ಮಾಡಿದಲ್ಲಿ ಒಂದೆಡೆ ಕೈತುಂಬ ಆದಾಯದ ಜೊತೆಗೆ ಸುಸ್ಥಿರ ಕೃಷಿಗೆ ಸಹಾಯಕವಾಗುತ್ತದೆ’ ಎಂದು ಶಾಂತವೀರಯ್ಯ ಹೇಳುತ್ತಾರೆ.
ಇವರ ಮೊ.ಸಂಖ್ಯೆ: 9449726068
‘ಸೂರ್ಯಕಾಂತಿ ಹೆಸರು ಬಳಿ ಪೆಟ್ಟಿಗೆ ಇಡಿ’
ರೈತರು ತಮ್ಮ ಜಮೀನುಗಳಲ್ಲಿ ಸೂರ್ಯಕಾಂತಿ ಹೆಸರು ಮತ್ತಿತರೆ ಬೆಳೆಗಳು ಹೂವು ಕಟ್ಟುವಾಗ ಜೇನು ಪೆಟ್ಟಿಗೆಗಳನ್ನು ಒಯ್ದು ಇಟ್ಟಲ್ಲಿ ಹೆಚ್ಚಿನ ಜೇನು ತುಪ್ಪ ಸಂಗ್ರಹವಾಗುತ್ತದೆ. ಬೇಸಿಗೆ ಸಮಯದಲ್ಲಿ ಬಯಲು ಸೀಮೆಯಿಂದ ಮಲೆನಾಡಿಗೆ ಪೆಟ್ಟಿಗೆಗಳನ್ನು ಒಯ್ಯುವವರೂ ಇದ್ದಾರೆ. ಜೇನು ಸಾಕಣೆ ಜೇನನ್ನು ಹುಳುಗಳಿಂದ ಬೇರ್ಪಡಿಸುವುದು ತುಪ್ಪವನ್ನು ನಾಜೂಕಾಗಿ ಸಂಗ್ರಹಿಸುವುದನ್ನು ತರಬೇತಿಯಿಂದ ಕಲಿಯಬಹುದು. ಬಬ್ಬೂರು ಫಾರಂನಲ್ಲಿರುವ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಮೂಲಕ ಜೇನು ಕೃಷಿ ಕುರಿತು ತರಬೇತಿ ನೀಡಲಾಗುತ್ತಿದೆ. ಇದರ ಪ್ರಯೋಜನವನ್ನು ರೈತರು ಪಡೆದಲ್ಲಿ ಕೃಷಿಯಲ್ಲಿ ನಷ್ಟವೆಂಬುದು ಇರದು. ಜೊತೆಗೆ ಬೆಳೆಯ ಇಳುವರಿಯೂ ಹೆಚ್ಚುತ್ತದೆ ಎಂಬುದು ಅವರ ಸಲಹೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.