ಚಿತ್ರದುರ್ಗ: ‘ನಿವೃತ್ತ ನೌಕರರ ತಾಲ್ಲೂಕು ಸಂಘವನ್ನು ಜೂನ್ 15 ರಂದು ಅಸ್ತಿತ್ವಕ್ಕೆ ತರಲಾಗುತ್ತಿದೆ. ಈ ಮೂಲಕ ನೌಕರರ ಸಮಸ್ಯೆಗೆ ಸ್ಪಂದಿಸಲಾಗುತ್ತದೆ’ ಎಂದು ಸಂಘದ ಗೌರವಾಧ್ಯಕ್ಷ ನಾಗರಾಜ್ ಸಂಗಮ್ ತಿಳಿಸಿದರು.
‘ಜಿಲ್ಲೆಯಲ್ಲಿ ಎಲ್ಲಾ ತಾಲ್ಲೂಕುಗಳಲ್ಲಿ ಸಂಘ ಅಸ್ತಿತ್ವದಲ್ಲಿದೆ. ಆದರೆ ಜಿಲ್ಲಾ ಕೇಂದ್ರದಲ್ಲಿ ತಾಲ್ಲೂಕು ಸಂಘ ಸ್ಥಾಪನೆ ಆಗಿರಲಿಲ್ಲ. ಸೂಕ್ತ ಕಾಲದಲ್ಲಿ ಹಾಗೂ ತ್ವರಿತವಾಗಿ ನಿವೃತ್ತ ನೌಕರರಿಗೆ ನ್ಯಾಯ ಒದಗಿಸಲು ಆಗುತ್ತಿರಲಿಲ್ಲ’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘ನಿವೃತ್ತ ನೌಕರರ ಸಭೆ ನಡೆಸಿ ಸೂಕ್ತ ನಿರ್ಧಾರಕ್ಕೆ ಬರಲಾಗಿದೆ. ಈಗಾಗಲೇ ಸಂಘವನ್ನು ನೋಂದಣಿ ಮಾಡಿಸಲಾಗಿದೆ. ನಿವೃತ್ತಿ ನೌಕರರಿಗೆ ಪ್ರತಿ ತಿಂಗಳು ಪಿಂಚಣಿ ಬಗ್ಗೆ ನಿಗಾವಹಿಸಲಾಗುತ್ತದೆ. ಕುಟುಂಬದಲ್ಲಿ ಯಾರಾದರೂ ವಿನಾಕಾರಣ ತೊಂದರೆ ನೀಡುತ್ತಿದ್ದಲ್ಲಿ ಅಂತಹ ನೌಕರರ ಸಹಾಯಕ್ಕೆ ಧಾವಿಸಲಾಗುತ್ತದೆ. ವರ್ಷದಲ್ಲಿ 2 ಬಾರಿ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಗುತ್ತದೆ’ ಎಂದು ವಿವರಿಸಿದರು.
‘ಜೂನ್ 15ರಂದು ಸಂಘವನ್ನು ಶಾಸಕ ಕೆ.ಸಿ.ವೀರೇಂದ್ರ ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಸಂಸದ ಗೋವಿಂದ ಎಂ.ಕಾರಜೋಳ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಡಿವೈಎಸ್‌ಪಿ ಪಿ.ಕೆ.ದಿನಕರ ಭಾಗವಹಿಸಲಿದ್ದಾರೆ’ ಎಂದರು.
ಸಂಘದ ಅಧ್ಯಕ್ಷ ಬಿ.ಕೆ.ಹನುಮಂತಪ್ಪ, ಕಾರ್ಯಾಧ್ಯಕ್ಷ ಎಚ್.ಗೋವಿಂದಯ್ಯ, ಪ್ರಧಾನ ಕಾರ್ಯದರ್ಶಿ ಎಚ್.ಪರಮೇಶ್ವರಪ್ಪ, ಉಪಾಧ್ಯಕ್ಷರಾದ ಎಂ.ಜಿ.ಸೂರ್ಯ ನಾರಾಯಣ್, ಓ.ಮಾದಯ್ಯ, ಪ್ರೇಮಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.