ADVERTISEMENT

ಚಿತ್ರದುರ್ಗದಲ್ಲಿ ಸೇತುವೆ ನಿರ್ಮಾಣ, ರಸ್ತೆ ವಿಸ್ತರಣೆ ವಿಳಂಬ

ತುರುವನೂರು ರಸ್ತೆಯಲ್ಲಿ ಸಂಚಾರ ಸಮಸ್ಯೆ, ವ್ಯಾಪಾರ ವಹಿವಾಟು ಕುಸಿತ

ಜಿ.ಬಿ.ನಾಗರಾಜ್
Published 31 ಆಗಸ್ಟ್ 2020, 19:30 IST
Last Updated 31 ಆಗಸ್ಟ್ 2020, 19:30 IST
ಚಿತ್ರದುರ್ಗದ ತುರುವನೂರು ರಸ್ತೆಯಲ್ಲಿ ನಿರ್ಮಾಣ ಹಂತದ ಸೇತುವೆ ದಾಟಲು ಪಾದಚಾರಿಗಳು ಸೋಮವಾರ ಪರದಾಡಿದ ಪರಿ.–ಪ್ರಜಾವಾಣಿ ಚಿತ್ರ– ಭವಾನಿ ಮಂಜು
ಚಿತ್ರದುರ್ಗದ ತುರುವನೂರು ರಸ್ತೆಯಲ್ಲಿ ನಿರ್ಮಾಣ ಹಂತದ ಸೇತುವೆ ದಾಟಲು ಪಾದಚಾರಿಗಳು ಸೋಮವಾರ ಪರದಾಡಿದ ಪರಿ.–ಪ್ರಜಾವಾಣಿ ಚಿತ್ರ– ಭವಾನಿ ಮಂಜು   

ಚಿತ್ರದುರ್ಗ: ಜಿಲ್ಲಾ ಆಸ್ಪತ್ರೆಯ ಮುಂಭಾಗದಿಂದ ಆರ್‌ಟಿಒ ಕಚೇರಿ ಸಮೀಪದ ಮೇಲ್ಸೇತುವೆವರೆಗಿನ ತುರುವನೂರು ರಸ್ತೆ ವಿಸ್ತರಣೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಇದರಿಂದ ಸಂಚಾರ ಸಮಸ್ಯೆ ಸೃಷ್ಟಿಯಾಗಿದ್ದು, ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ.

ಸುಮಾರು ₹ 5 ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ರಸ್ತೆ ವಿಸ್ತರಣೆ ಕಾಮಗಾರಿ ಜನವರಿ ತಿಂಗಳಲ್ಲಿ ಆರಂಭವಾಗಿತ್ತು. ಕೊರೊನಾ ಸೋಂಕು ನಿಯಂತ್ರಣಕ್ಕೆ ಅನುಷ್ಠಾನಗೊಂಡ ಲಾಕ್‌ಡೌನ್‌ ಕಾರಣಕ್ಕೆ ಎರಡೂವರೆ ತಿಂಗಳು ಕಾಮಗಾರಿ ಸಂಪೂರ್ಣ ಸ್ಥಗಿತಗೊಂಡಿತ್ತು. ರಸ್ತೆ ವಿಸ್ತರಣೆಗೆ ಮತ್ತೆ ಅವಕಾಶ ಸಿಕ್ಕ ಬಳಿಕವೂ ಕಾಮಗಾರಿ ತ್ವರಿತಗತಿ ಪಡೆಯಲೇ ಇಲ್ಲ.

ಜಿಲ್ಲಾ ಆಸ್ಪತ್ರೆಯ ಮುಂಭಾಗದಿಂದ ತಿಪ್ಪಜ್ಜಿ ವೃತ್ತದವರೆಗೆ ರಸ್ತೆ ವಿಸ್ತರಣೆ ಅಲ್ಲಲ್ಲಿ ಪೂರ್ಣಗೊಂಡಿದೆ. ವಾಹನ ಸಂಚಾರಕ್ಕೆ ರಸ್ತೆಯನ್ನು ಮುಕ್ತಗೊಳಿಸುವ ಅಗತ್ಯವಿದೆ. ತಿಪ್ಪಜ್ಜಿ ವೃತ್ತದಿಂದ ಆಫಿಸರ್ಸ್‌ ಕ್ಲಬ್‌ವರೆಗೆ ವಿಸ್ತರಣೆಗೆ ಸ್ಥಳ ಗುರುತಿಸಲಾಗಿದ್ದು, ರಸ್ತೆ ಬದಿಯಲ್ಲಿದ್ದ ಮರಗಳನ್ನು ಧರೆಗೆ ಉರುಳಿಸಲಾಗಿದೆ. ಸಮೀಪದಲ್ಲೇ ಹರಿಯುವ ಮೋರಿಗೆ ನಿರ್ಮಿಸುತ್ತಿರುವ ಸೇತುವೆ ಕಾಮಗಾರಿ ಮೂರು ತಿಂಗಳು ಕಳೆದರೂ ಪೂರ್ಣಗೊಂಡಿಲ್ಲ.

ADVERTISEMENT

ವಿಸ್ತರಣೆ ಕಾಮಗಾರಿ ಕೈಗೆತ್ತಿಕೊಂಡಿರುವ ಕಾರಣಕ್ಕೆ ತುರುವನೂರು ರಸ್ತೆಯಲ್ಲಿ ಸಂಚಾರ ಸಮಸ್ಯೆ ಸೃಷ್ಟಿಯಾಗಿದೆ. ನಾಯಕನಹಟ್ಟಿ ಸೇರಿದಂತೆ ಹಲವು ಗ್ರಾಮಗಳಿಗೆ ತೆರಳುತ್ತಿದ್ದ ಬಸ್‌ಗಳಿಗೆ ಪರ್ಯಾಯ ಮಾರ್ಗ ಸೂಚಿಸಲಾಗಿದೆ. ಪ್ರಮುಖ ರಸ್ತೆಯಲ್ಲಿ ಸಂಚಾರಕ್ಕೆ ನಿರ್ಬಂಧ ವಿಧಿಸಿದ್ದರಿಂದ ಸುತ್ತಲಿನ ಬಡಾವಣೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ. ಇದು ಮುನ್ಸಿಪಲ್ ಕಾಲೊನಿ, ಎಸ್‌ಆರ್‌ಎಸ್‌ ಬಡಾವಣೆ ಹಾಗೂ ವಿ.ಪಿ.ಬಡಾವಣೆಯ ನಿವಾಸಿಗಳಲ್ಲೂ ಕಿರಿಕಿರಿಯುಂಟು ಮಾಡುತ್ತಿದೆ.

ರಸ್ತೆಯ ಮಧ್ಯ ಭಾಗದಿಂದ ಎಡ ಮತ್ತು ಬಲ ಭಾಗಕ್ಕೆ 10.5 ಮೀಟರ್‌ನಂತೆ ಒಟ್ಟು 21 ಮೀಟರ್ (69 ಅಡಿವರೆಗೆ) ರಸ್ತೆ ವಿಸ್ತರಣೆಯಾಗಲಿದೆ. ರಸ್ತೆಯ ಪಶ್ಚಿಮ ಭಾಗಕ್ಕೆ ಜಿಲ್ಲಾ ಆಸ್ಪತ್ರೆಯಿಂದ ಆಫಿಸರ್ಸ್‌ ಕ್ಲಬ್‌ವರೆಗೆ ಸರ್ಕಾರಿ ಕಟ್ಟಡಗಳಿವೆ. ಕಟ್ಟಡಗಳ ಕಾಂಪೌಂಡ್‌ ತೆರವುಗೊಳಿಸಿ ರಸ್ತೆ ವಿಸ್ತರಣೆ ಕಾಮಗಾರಿ ತ್ವರಿತಗೊಳಿಸುವುದಾಗಿ ನಗರಸಭೆ ಆರಂಭದಲ್ಲೇ ಆಶ್ವಾಸನೆ ನೀಡಿತ್ತು. ಎಂಟು ತಿಂಗಳು ಕಳೆದರೂ ಕಾಮಗಾರಿಯ ಪ್ರಗತಿ ಮಾತ್ರ ಸಾರ್ವಜನಿಕರಿಗೆ ತೃಪ್ತಿದಾಯಕವಾಗಿ ಕಾಣಿಸುತ್ತಿಲ್ಲ.

ಆರ್‌ಟಿಒ ಕಚೇರಿ–ತಿಪ್ಪಜ್ಜಿ ವೃತ್ತದ ನಡುವೆ ರಸ್ತೆ ಸಂಪರ್ಕವು ಸೇತುವೆ ನಿರ್ಮಾಣ ಕಾಮಗಾರಿಯಿಂದ ಕಡಿತಗೊಂಡಿದೆ. ಈ ಮಾರ್ಗದಲ್ಲಿ ಸಾಗುತ್ತಿದ್ದ ವಾಹನಗಳು ಬಸಪ್ಪ ಆಸ್ಪತ್ರೆಯ ಸಮೀಪದಿಂದ ಮುನ್ಸಿಪಲ್‌ ಕಾಲೊನಿ ಮೂಲಕ ತೆರಳುತ್ತಿವೆ. ಕಾರು, ಸರಕು ಸಾಗಣೆ ವಾಹನಗಳು ಐಶ್ವರ್ಯ ಫೋರ್ಟ್‌ ಹೋಟೆಲ್‌ ಮುಂಭಾಗದಿಂದ ವಿ.ಪಿ.ಬಡಾವಣೆಗೆ ತೆರಳುವ ಮಾರ್ಗದಲ್ಲಿ ಸಂಚರಿಸುತ್ತಿವೆ. ಇದರಿಂದ ತೋಟಗಾರಿಕೆ ಇಲಾಖೆ ಮುಂಭಾಗದ ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದೆ.

ರಸ್ತೆ ವಿಸ್ತರಣೆ ಉದ್ದೇಶಕ್ಕೆ ತುರುವನೂರು ರಸ್ತೆಯಲ್ಲಿ 108 ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆ ಅನುಮತಿ ನೀಡಿದೆ. ಈ ಪೈಕಿ ಅರ್ಧದಷ್ಟು ಮರಗಳನ್ನು ತೆರವುಗೊಳಿಸಲಾಗಿದೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಮುಂಭಾಗದ ಮರಗಳನ್ನು ಕಡಿದು ಎರಡು ವಾರ ಕಳೆದರೂ ತೆರವು ಕಾರ್ಯಾಚರಣೆ ಮಾತ್ರ ನಿಧಾನಗತಿಯಲ್ಲಿ ಸಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.