ಹೊಳಲ್ಕೆರೆ: ತಾಲ್ಲೂಕಿನ ನವಣೆಕೆರೆಯಲ್ಲಿ ₹ 1 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕ ಎಂ.ಚಂದ್ರಪ್ಪ ಭಾನುವಾರ ಚಾಲನೆ ನೀಡಿದರು.
ರಾಮಗಿರಿ- ಶಿವನಿ ಪ್ರಮುಖ ರಸ್ತೆಯಲ್ಲಿರುವ ಕಣಿವೆ ಹಳ್ಳಿಯಿಂದ ಮುದ್ದಾಪುರ, ಲಂಬಾಣಿಹಟ್ಟಿ, ನವಣೆಕೆರೆ ಮಾರ್ಗವಾಗಿ ಹೊಸದುರ್ಗ ರೋಡ್‌ವರೆಗೆ ₹ 1 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಮಾಡಲಾಗುವುದು. ಈ ರಸ್ತೆಯನ್ನು ಅಭಿವೃದ್ಧಿ ಮಾಡುವುದರಿಂದ ಈ ಮಾರ್ಗದಲ್ಲಿ ಬರುವ ಹಳ್ಳಿಯ ಜನ ಹೊಸದುರ್ಗ, ರಾಮಗಿರಿ ಕಡೆ ಸಂಚರಿಸಲು ಅನುಕೂಲ ಆಗಲಿದೆ. ರಾಮಗಿರಿ ಪ್ರಮುಖ ರಸ್ತೆಗೂ ₹ 4 ಕೋಟಿ ಅನುದಾನ ನೀಡಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭಿಸಲಾಗುವುದು ಎಂದು ಚಂದ್ರಪ್ಪ ಹೇಳಿದರು.
‘ರಾಮಗಿರಿ ಹೋಬಳಿಯ ಈ ಹಳ್ಳಿಗಳು ತಾಲ್ಲೂಕಿನ ಗಡಿ ಗ್ರಾಮಗಳಾಗಿದ್ದು, ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ. ಸದಾ ಬರಕ್ಕೆ ತುತ್ತಾಗುವ ಈ ಪ್ರದೇಶದಲ್ಲಿ ಗುಡ್ಡಗಳು ಆವರಿಸಿರುವುದರಿಂದ ಕಾಲುವೆ ಮೂಲಕ ನೀರಾವರಿ ಒದಗಿಸುವುದು ಕಷ್ಟ. ಆದ್ದರಿಂದ ಗುಡ್ಡಗಳಿಂದ ಹರಿಯುವ ನೀರು ನಿಲ್ಲಿಸುವ ಮೂಲಕ ಅಂತರ್ಜಲ ಹೆಚ್ಚಳಕ್ಕೆ ಆದ್ಯತೆ ನೀಡಿದ್ದೇನೆ. ಸಿಂಗೇನಹಳ್ಳಿ, ರಾಮಗಿರಿ, ತುಪ್ಪದ ಹಳ್ಳಿ, ಕೆಂಚಾಪುರ, ದೇವರಹೊಸಹಳ್ಳಿ, ತಾಳಕಟ್ಟ, ಮುದ್ದಾಪುರ ಭಾಗದಲ್ಲಿ ಹತ್ತಾರು ಚೆಕ್ ಡ್ಯಾಂ ನಿರ್ಮಿಸಿರುವುದರಿಂದ ಅಂತರ್ಜಲ ಹೆಚ್ಚಾಗಿದೆ’ ಎಂದರು.
‘ಶಾಸಕರು ಗಡಿ ಗ್ರಾಮಗಳಿಗೆ ಬರುವುದೇ ಅಪರೂಪ. ಆದರೆ, ಶಾಸಕ ಎಂ.ಚಂದ್ರಪ್ಪ ಗಡಿ ಗ್ರಾಮಗಳನ್ನು ಗುರುತಿಸಿ ರಸ್ತೆ, ಶಾಲಾ ಕೊಠಡಿ, ಚೆಕ್ ಡ್ಯಾಂ ನಿರ್ಮಿಸುವುದು, ಕೆರೆಗಳಿಗೆ ನೀರು ತುಂಬಿಸುವ ಮೂಲಕ ರೈತರಿಗೆ ನೆರವಾಗುತ್ತಿದ್ದಾರೆ. ಕ್ಷೇತ್ರದ ಪ್ರತೀ ಗ್ರಾಮದಲ್ಲೂ ಹಲವು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅವರು ಹೆಚ್ಚು ಬದ್ಧತೆಯಿಂದ ಕೆಲಸ ಮಾಡುತ್ತಿದ್ದಾರೆ’ ಎಂದು ಬಿಜೆಪಿ ಮಂಡಲ ಮಾಜಿ ಅಧ್ಯಕ್ಷ ಎಂ.ಬಿ.ಸಿದ್ದೇಶ್ ಹೇಳಿದರು.
ರಾಮಗಿರಿ ಕುಮಾರಣ್ಣ, ಲೋಕೋಪಯೋಗಿ ಇಲಾಖೆಯ ಎಇಇ ಕಾಂತರಾಜ್, ಗುತ್ತಿಗೆದಾರರಾದ ಚಿಕ್ಕಂದವಾಡಿ ರಾಜಣ್ಣ, ಮಹಾಲಿಂಗಪ್ಪ, ಮರುಳಸಿದ್ದಪ್ಪ, ಹಿರಿಯ ಮುಖಂಡ ಚಂದ್ರಣ್ಣ, ಕಣಿವೆಹಳ್ಳಿ ಜಗದೀಶ್, ಶೇಖರ್ ಹಾಗೂ ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.