ADVERTISEMENT

ಒಡಿಶಾ ಉಪನ್ಯಾಸಕನ ದೋಚಿದ ಕಳ್ಳರು: ಒಬ್ಬನ ಬಂಧನ; ಮತ್ತಿಬ್ಬರಿಗಾಗಿ ಶೋಧ

​ಪ್ರಜಾವಾಣಿ ವಾರ್ತೆ
Published 15 ಮೇ 2019, 15:26 IST
Last Updated 15 ಮೇ 2019, 15:26 IST

ಚಳ್ಳಕೆರೆ: ಇಲ್ಲಿನ ವೆಂಕಟೇಶ್ವರ ನಗರದ ಬಳಿ ಬುಧವಾರ ಬೈಕ್‌ನಲ್ಲಿ ಡ್ರಾಪ್ ಕೊಡುವ ನೆಪದಲ್ಲಿ ದುಷ್ಕರ್ಮಿಗಳು ಒಡಿಶಾದ ಹರೆಕೃಷ್ಣಗಿರಿ ಅವರಿಂದ ₹ 3,500 ನಗದು ಹಾಗೂ ಒಡವೆ, ವಾಚ್‌ ಸೇರಿ ಒಟ್ಟು ₹ 1.75 ಲಕ್ಷ ಮೌಲ್ಯದ ಸ್ವತ್ತು ಕಿತ್ತುಕೊಂಡು ಪರಾರಿಯಾಗಿದ್ದರು.

ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಚಳ್ಳಕೆರೆ ಠಾಣೆ ಪೊಲೀಸರು, ಮೂವರು ಆರೋಪಿಗಳ ಪೈಕಿ ಸಿದ್ದೇಶ್‌ (36) ಎಂಬುವವನ್ನು ಬಂಧಿಸಿದ್ದಾರೆ.

ತಾಲ್ಲೂಕಿನ ಕುದಾಪುರದ ಐಐಎಸ್‍ಸಿಯ ಟ್ಯಾಲೆಂಟ್ ಡೆವಲಪ್‌ಮೆಂಟ್‌ ಕೇಂದ್ರದಲ್ಲಿ ಮೇ 14ರಿಂದ 24ರವರೆಗೆ ನಡೆಯುವ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲು ಒಡಿಶಾದ ಹರೆಕೃಷ್ಣಗಿರಿ ಬಂದಿದ್ದರು. ಅಪರಿಚಿತ ಸವಾರನೊಬ್ಬ ಹೆಸರು, ವಿಳಾಸ ಕೇಳುವ ನೆಪದಲ್ಲಿ ಹರೆಕೃಷ್ಣಗಿರಿ ಅವರನ್ನು ಪರಿಚಯ ಮಾಡಿಕೊಂಡಿದ್ದಾರೆ. ಬಳಿಕ ಬೈಕ್‌ನಲ್ಲಿ ಕೂರಿಸಿಕೊಂಡು ಹೋಗಿದ್ದಾರೆ. ಕುದಾಪುರ ಮಾರ್ಗದ ರಸ್ತೆಯನ್ನು ಬದಲಾಯಿಸಿ ಹೋದಾಗ ಮತ್ತಿಬ್ಬರು ಸಹಚರರು ಬಂದು ಬೈಕ್‌ ಅಡ್ಡಗಟ್ಟಿದ್ದಾರೆ. ಬಳಿಕ ಹರೆಕೃಷ್ಣಗಿರಿ ಅವರ ಬ್ಯಾಗ್, ರಾಡೊ ವಾಚ್‌, ಚಿನ್ನದ ಸರ, ಉಂಗುರು ಹಾಗೂ ನಗದು ದೋಚಿ ಪರಾರಿಯಾಗಿದ್ದಾರೆ.

ADVERTISEMENT

ಚಳ್ಳಕೆರೆ ಠಾಣೆಗೆ ದೂರು ನೀಡಿದ್ದಾರೆ. ಪಿಎಸ್‍ಐ ಸತೀಶ್ ನಾಯ್ಕ ನೇತೃತ್ವದಲ್ಲಿ ಮತ್ತಿಬ್ಬರು ದರೋಡೆಕೋರರ ಪತ್ತೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.