ADVERTISEMENT

ಪಿಯು ಪ್ರವೇಶಕ್ಕೆ ರೋಸ್ಟರ್‌ ಪದ್ದತಿ ಉಲ್ಲಂಘನೆ

ಅಂಬೇಡ್ಕರ್‌ ವಿದ್ಯಾರ್ಥಿ ಪರಿಷತ್‌ ಮನವಿ

​ಪ್ರಜಾವಾಣಿ ವಾರ್ತೆ
Published 13 ಜೂನ್ 2025, 15:53 IST
Last Updated 13 ಜೂನ್ 2025, 15:53 IST
ಚಿತ್ರದುರ್ಗದಲ್ಲಿ ಶುಕ್ರವಾರ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪನಿರ್ದೇಶಕ ತಿಮ್ಮಯ್ಯ ಅವರಿಗೆ ಮನವಿ ಸಲ್ಲಿಸಿದ ಅಂಬೇಡ್ಕರ್‌ ವಿದ್ಯಾರ್ಥಿ ಪರಿಷತ್‌
ಚಿತ್ರದುರ್ಗದಲ್ಲಿ ಶುಕ್ರವಾರ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪನಿರ್ದೇಶಕ ತಿಮ್ಮಯ್ಯ ಅವರಿಗೆ ಮನವಿ ಸಲ್ಲಿಸಿದ ಅಂಬೇಡ್ಕರ್‌ ವಿದ್ಯಾರ್ಥಿ ಪರಿಷತ್‌   

ಚಿತ್ರದುರ್ಗ: ಖಾಸಗಿ ಪದವಿ ಪೂರ್ವ ಕಾಲೇಜುಗಳಲ್ಲಿ ಪಿಯುಸಿ ಪ್ರವೇಶಕ್ಕಿರುವ ರೋಸ್ಟರ್‌ ಪದ್ಧತಿ ಉಲ್ಲಂಘನೆ ಆಗುತ್ತಿದೆ. ಕೂಡಲೇ ಈ ಬಗ್ಗೆ ಪರಿಶೀಲನೆ ನಡೆಸಬೇಕೆಂದು ಅಂಬೇಡ್ಕರ್‌ ವಿದ್ಯಾರ್ಥಿ ಪರಿಷತ್‌ ಆಗ್ರಹಿಸಿದೆ.

ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪನಿರ್ದೇಶಕ ತಿಮ್ಮಯ್ಯ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ, ‘ಖಾಸಗಿ ಕಾಲೇಜುಗಳಲ್ಲಿ ಶೇ 50ರಷ್ಟು ಸರ್ಕಾರಿ ಕೋಟಾದಡಿ ರೋಸ್ಟರ್ ಮೂಲಕ ಪ್ರವೇಶ ನೀಡಬೇಕೆಂಬ ಆದೇಶವಿದೆ. ಆದರೆ ಖಾಸಗಿ ಕಾಲೇಜುಗಳು ಯಾವುದೇ ವಿದ್ಯಾರ್ಥಿಗೆ ಮುಕ್ತವಾಗಿ ಅರ್ಜಿಯೇ ವಿತರಣೆ ಮಾಡಿಲ್ಲ. ಅರ್ಜಿ ಸಲ್ಲಿಸುವ ವೇಳೆಯಲ್ಲೇ ಕಾಲೇಜಿನ ಸ್ಯಾಟ್ಸ್‌ ಲಾಗಿನ್‍ನಲ್ಲಿ ಮಕ್ಕಳ ದತ್ತಾಂಶ ದಾಖಲಿಸಿಕೊಳ್ಳಬೇಕು. ಅದು ಕೂಡ ಯಾವುದೇ ಸಮರ್ಪಕವಾಗಿ ನಿರ್ವಹಿಸಿಲ್ಲ’ ಎಂದು ದೂರಿದರು.

‘ರೋಸ್ಟರ್‌ ಪ್ರಕಾರ ಎಸ್‌ಟಿಎಸ್‌ ನಮೂನೆ-13ರಲ್ಲಿ ನಮೂದಿಸಿಲ್ಲ. ಅವರಿಗೆ ಬೇಕಾದಂತೆ ಪ್ರವೇಶಾತಿ ನೀಡಿದ್ದು, ರೋಸ್ಟರ್‌ ಪದ್ದತಿಯನ್ನೇ ಉಲ್ಲಂಘಿಸಿರುವುದು ಮೇಲ್ನೂಟಕ್ಕೆ ಕಂಡು ಬಂದಿದೆ. ಪಾರದರ್ಶಕವಾಗಿ ನಿಯಮಗಳು ಪಾಲನೆಯಾಗುತ್ತಿಲ್ಲ’ ಎಂದು ಆರೋಪಿಸಿದರು.

ADVERTISEMENT

‘ಸರ್ಕಾರಿ ಕೋಟಾದಡಿ ಆಯ್ಕೆಯಾಗಿರುವ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಸರ್ಕಾರದ ಶುಲ್ಕ ₹ 3132, ಎಸ್‌ಸಿ, ಎಸ್‌ಟಿ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ₹ 736 ಶುಲ್ಕವೆಂದು ನಾಮಫಲಕದಲ್ಲಿ ಪ್ರಕಟಿಸಬೇಕು. ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ₹ 255 ಶುಲ್ಕ ನಿಗದಿಪಡಿಸಿದೆ. ಆದರೆ ಬಹುತೇಕ ಸರ್ಕಾರಿ ಕಾಲೇಜುಗಳಲ್ಲಿ ಹೆಣ್ಣು ಮಕ್ಕಳಿಗೆ ಕಾಲೇಜು ಅಭಿವೃದ್ಧಿ ಶುಲ್ಕ ಕಡ್ಡಾಯವೆಂದು ₹1200 ಕ್ಕಿಂತಲೂ ಹೆಚ್ಚು ಶುಲ್ಕ ವಸೂಲಿ ಮಾಡಲಾಗುತ್ತಿದೆ. ಇದನ್ನು ತಡೆದು ಈಗಾಗಲೇ ಪಾವತಿಸಿರುವ ಮಹಿಳಾ ವಿದ್ಯಾರ್ಥಿಗಳಿಗೆ ಶುಲ್ಕ ಹಿಂತಿರುಗಿಸಲು ಕ್ರಮವಹಿಸಬೇಕು’ ಎಂದು ಒತ್ತಾಯಿಸಿದರು.

‘ಇಲ್ಲಿಯವರೆಗೂ ಯಾವುದೇ ಪೋಷಕರು ಪ್ರತಿಷ್ಠಿತ ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದಡಿ ಪ್ರವೇಶಕ್ಕೆ ಅರ್ಜಿ ನೀಡುತ್ತಿಲ್ಲ ಎಂಬ ದೂರುಗಳು ಬಂದಿಲ್ಲ. ಅಂತಹ ದೂರು ಬಂದರೆ ತಕ್ಷಣವೇ ಕ್ರಮ ವಹಿಸುತ್ತೇನೆ. ಅಲ್ಲದೇ ಬೇಡಿಕೆಗಳನ್ನು ಈಡೇರಿಸಲು ಅಗತ್ಯ ಕ್ರಮ ಕೈಗೊಳ್ಳುತ್ತೇನೆ’ ಎಂದು ಪಿಯು ಉಪನಿರ್ದೇಶಕ ತಿಮ್ಮಯ್ಯ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.