ADVERTISEMENT

ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ: ₹ 67 ಕೋಟಿ ಅನುದಾನಕ್ಕೆ ಪ್ರಸ್ತಾವ

ಬಯಲುಸೀಮೆ ಪ್ರದೇಶಗಳ ಅಭಿವೃದ್ಧಿಗೆ ಬದ್ಧ: ಎನ್.ಇ.ಜೀವನಮೂರ್ತಿ

​ಪ್ರಜಾವಾಣಿ ವಾರ್ತೆ
Published 12 ಜನವರಿ 2021, 14:31 IST
Last Updated 12 ಜನವರಿ 2021, 14:31 IST
ಜೀವನಮೂರ್ತಿ
ಜೀವನಮೂರ್ತಿ   

ಚಿತ್ರದುರ್ಗ: ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯಿಂದ ರಾಜ್ಯದಲ್ಲಿ 1,724 ಕಾಮಗಾರಿ ಕೈಗೊಳ್ಳಲಾಗಿದೆ. ಅದನ್ನು ಪೂರ್ಣಗೊಳಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ₹67.67 ಕೋಟಿ ಅನುದಾನ ನೀಡುವಂತೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಮಂಡಳಿ ಅಧ್ಯಕ್ಷ ಎನ್.ಇ.ಜೀವನಮೂರ್ತಿ ತಿಳಿಸಿದರು.

‘ಪ್ರಸಕ್ತ ಸಾಲಿನಲ್ಲಿ ₹22.73 ಕೋಟಿ ವೆಚ್ಚದ ಕಾಮಗಾರಿಗಳ ಪೈಕಿ ₹16.05 ಕೋಟಿ ವೆಚ್ಚದ ಕಾಮಗಾರಿಗಳು ಪೂರ್ಣಗೊಂಡಿದ್ದು, ಶೇ 75ರಷ್ಟು ಗುರಿ ಸಾಧಿಸಲಾಗಿದೆ. ಎಚ್‌.ಡಿ.ಕುಮಾರಸ್ವಾಮಿ ಅವರ ಅವಧಿಯಲ್ಲಿ ಕೈಗೊಳ್ಳಲಾದ ಕಾಮಗಾರಿಗಳನ್ನು ಪೂರ್ಣಗೊಳಿಸಲು ಮುಖ್ಯಮಂತ್ರಿ ಬಳಿ ಮನವಿ ಮಾಡಿದ್ದೇನೆ’ ಎಂದು ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಬಯಲುಸೀಮೆ ಪ್ರದೇಶಗಳಲ್ಲಿ ಅಂತರ್ಜಲ ಹೆಚ್ಚಿಸುವ ಗುರಿ ಹೊಂದಿದ್ದೇವೆ. ಜತೆಗೆ ಕೃಷಿ, ತೋಟಗಾರಿಕೆ, ಅರಣ್ಯ, ಪಶುಸಂಗೋಪನೆ, ಮಣ್ಣು ಮತ್ತು ನೀರು ಸಂರಕ್ಷಣಾ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು’ ಎಂದು ತಿಳಿಸಿದರು.

‘ಬಾಗಲಕೋಟೆ, ಬೆಳಗಾವಿ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಗದಗ, ಹಾಸನ, ಹಾವೇರಿ, ಕೋಲಾರ, ರಾಮನಗರ, ತುಮಕೂರು, ವಿಜಯಪುರ ಜಿಲ್ಲೆ ಸೇರಿ ಒಟ್ಟು 14 ಜಿಲ್ಲೆ ಒಳಗೊಂಡ 58 ತಾಲ್ಲೂಕುಗಳ 70 ವಿಧಾನಸಭಾ ಕ್ಷೇತ್ರಗಳು ಮಂಡಳಿ ವ್ಯಾಪ್ತಿಗೆ ಒಳಪಟ್ಟಿವೆ’ ಎಂದರು.

ADVERTISEMENT

‘14 ಲೋಕಸಭಾ ಸದಸ್ಯರು, 70 ವಿಧಾನಸಭಾ ಸದಸ್ಯರು, 24 ವಿಧಾನಪರಿಷತ್ತು ಸದಸ್ಯರು, 10 ಮಂಡಳಿಯ ನಾಮನಿರ್ದೇಶಿತ ಸದಸ್ಯರು, 14 ಜಿಲ್ಲಾ ಪಂಚಾಯಿತಿ ಸದಸ್ಯರು, 14 ಜಿಲ್ಲಾಧಿಕಾರಿಗಳು ಹಾಗೂ ಒಬ್ಬ ಕಾರ್ಯದರ್ಶಿ ಸೇರಿ ಒಟ್ಟು 147 ಜನ ಮಂಡಳಿಯ ಸದಸ್ಯರಾಗಿದ್ದಾರೆ’ ಎಂದು ಹೇಳಿದರು.

‘ಮಂಡಳಿಯಿಂದ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಅನುಷ್ಠಾನಾಧಿಕಾರಿ ಹೊಂದಿಲ್ಲ. ಕೃಷಿ, ಪಂಚಾಯತ್ ರಾಜ್, ಲೋಕೋಪಯೋಗಿ, ಸಣ್ಣ ನೀರಾವರಿ ಇಲಾಖೆ, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ, ನಿರ್ಮಿತಿ ಕೇಂದ್ರ ಹಾಗೂ ಅರಣ್ಯ ಇಲಾಖೆ ಸೇರಿ ಇತರೆ ಇಲಾಖೆಗಳಿಂದ ಮಂಡಳಿಯ ಅಭಿವೃದ್ದಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ’ ಎಂದರು.

ಮಂಡಳಿಯ ನಾಮನಿರ್ದೇಶಿತ ಸದಸ್ಯೆ ಶ್ಯಾಮಲಾ ಶಿವಪ್ರಕಾಶ್, ಕಾರ್ಯದರ್ಶಿ ಬಸವರಾಜಪ್ಪ, ಉಪಕಾರ್ಯದರ್ಶಿ ಕೃಷ್ಣನಾಯ್ಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.