ಚಿತ್ರದುರ್ಗ: ‘ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಜಾರಿಯಾಗಿ 20 ವರ್ಷಗಳಾಗಿದ್ದು ಕಾಯ್ದೆಯಡಿ ಮಾಹಿತಿ ಪಡೆಯಲು ನಿಗದಿಪಡಿಸಿದ್ದ ಶುಲ್ಕಗಳ ಪರಿಷ್ಕರಣೆ ಮಾಡುವಂತೆ ರಾಜ್ಯ ಆಡಳಿತ ಸುಧಾರಣ ಸಮಿತಿ ಸಲಹೆ ನೀಡಿದೆ. ಜುಲೈ ಮೊದಲ ವಾರದಲ್ಲಿ ಸಭೆ ನಡೆಸಿ, ಹೊಸ ಶುಲ್ಕ ಜಾರಿ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು’ ಎಂದು ರಾಜ್ಯ ಮಾಹಿತಿ ಆಯುಕ್ತ ರುದ್ರಣ್ಣ ಹರ್ತಿಕೋಟೆ ಹೇಳಿದರು.
ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಶನಿವಾರ ಮಾಹಿತಿ ಹಕ್ಕು ಕಾಯ್ದೆ ಅನುಷ್ಠಾನ ಸಂಬಂಧ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಹಾಗೂ ಮೊದಲ ಹಂತದ ಮೇಲ್ಮನವಿ ಪ್ರಾಧಿಕಾರದ ಅಧಿಕಾರಿಗಳಿಗೆ ಆಯೋಜಿಸಲಾದ ಕಾರ್ಯಗಾರ, ಸಂವಾದದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ಪ್ರಸ್ತುತ ಮಾಹಿತಿ ಅರ್ಜಿಯ ಜೊತೆ ₹ 10 ಶುಲ್ಕ ನೀಡಬೇಕಾಗಿದ್ದು, ಇದನ್ನು ₹ 25ಕ್ಕೆ ಹೆಚ್ಚಿಸಲು ಹಾಗೂ ಪ್ರತಿ ಪುಟದ ದಾಖಲೆ ನೀಡಬೇಕಾದರೆ ಇರುವ ₹ 2 ಶುಲ್ಕವನ್ನು ₹ 5ಕ್ಕೆ ಹೆಚ್ಚಿಸಲು ಸರ್ಕಾರಕ್ಕೆ ಪ್ರಸ್ತವಾನೆ ಸ್ಲಲಿಸಲಾಗಿದೆ. ಸಿ.ಡಿ ಉಪಯೋಗ ಬಳಕೆಯಲ್ಲಿ ಇಲ್ಲದಿರುವುದರಿಂದ ಇದರ ಹೊರತಾಗಿ ಪೆನ್‍ಡ್ರೈನ್ ಮೂಲಕ ನೀಡುವ ಮಾಹಿತಿಗೆ ಹೊಸದೊಂದು ಶುಲ್ಕ ನಿಗದಿ ಪಡಿಸಲು ಚಿಂತನೆ ನಡೆಸಲಾಗಿದೆ’ ಎಂದರು.
‘ಬಿಪಿಲ್ ಕಾರ್ಡುದಾರರು 100 ಪುಟದವರೆಗೆ ಮಾಹಿತಿ ಪಡೆಯಲು ಯಾವುದು ಶುಲ್ಕ ನೀಡುವಂತಿಲ್ಲ. ಆದರೆ, ಮಾಹಿತಿಗೆ ಅರ್ಜಿ ಸಲ್ಲಿಸುವಾಗ, ಬಿಪಿಎಲ್ ಕಾರ್ಡ್ ಜೆರಾಕ್ಸ್ ಹಾಗೂ ಚಾಲ್ತಿಯಲ್ಲಿರುವ ಆದಾಯ ಪ್ರಮಾಣ ಪತ್ರ ಮೂಲ ಪ್ರತಿ ಲಗತ್ತಿಸಬೇಕು’ ಎಂದರು.
‘ಯಾವುದೇ ಸಾರ್ವಜನಿಕ ಹಿತಾಸಕ್ತಿ ಇಲ್ಲದೇ ಅಧಿಕಾರಿಗಳನ್ನು ಬೆದರಿಸಲು ಹಾಗೂ ತೊಂದರೆ ನೀಡಲು ಮಾಹಿತಿ ಅರ್ಜಿ ಸಲ್ಲಿಸುತ್ತಿದ್ದ 26 ಜನರನ್ನು ರಾಜ್ಯ ಮಾಹಿತಿ ಆಯೋಗ ಕಪ್ಪು ಪಟ್ಟಿಗೆ ಸೇರಿಸಿದೆ. ಇದರಲ್ಲಿ ಚಿತ್ರದುರ್ಗ ಜಿಲ್ಲೆಯ ಒಬ್ಬರನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ. ಅಧಿಕಾರಿಗಳು ಮಾಹಿತಿ ನೀಡದಿದ್ದಾಗ ಅಥವಾ ಅರ್ಜಿದಾರರೊಂದಿಗೆ ಮಾತುಕತೆ ನಡೆಸಲು ಮುಂದಾದಾಗ ಮಾತ್ರ ಬೆದರಿಸುವವರು ಹುಟ್ಟಿಕೊಳ್ಳುತ್ತಾರೆ. ಅಧಿಕಾರಿಗಳು ವಿಳಂಬ ಮಾಡದೇ ಕಾಲಮಿತಿಯಲ್ಲಿ ಮಾಹಿತಿ ನೀಡಬೇಕು’ಎಂದರು.
ಮಾಹಿತಿ ಆಯುಕ್ತ ಎಸ್.ರಾಜಶೇಖರ್ ಮಾತನಾಡಿ ‘ಜಿಲ್ಲೆಯ ಸರ್ಕಾರಿ ಅಧಿಕಾರಿಗಳಿಗೆ ಮಾಹಿತಿ ಹಕ್ಕು ಕಾಯ್ದೆ ಬಗ್ಗೆ ತಿಳಿದುಕೊಳ್ಳುವ ಅವಶ್ಯಕತೆಯಿದೆ. ಅರ್ಜಿಗಳು ಸ್ವೀಕಾರವಾದ ತಕ್ಷಣ ಅವರಿಗೆ ಗೊಂದಲ ಉಂಟಾಗುತ್ತಿದೆ. ಇದನ್ನು ನಿವಾರಿಸಲು ಅಧಿಕಾರಿಗಳು ಕಾಯ್ದೆಯ ಬಗ್ಗೆ ಅಧ್ಯಯನ ನಡೆಸಬೇಕು. ಕಾಯ್ದೆಯ ಜಾರಿಯ ಮೂಲ ಉದ್ದೇಶ ಸಾರ್ವಜನಿಕ ಆಡಳಿತದಲ್ಲಿ ಪಾದರ್ಶಕತೆ ತರುವುದು, ಅಧಿಕಾರಿಗಳ ಜವಾಬ್ದಾರಿ ಹೆಚ್ಚಿಸಬೇಕಾಗಿದೆ’ ಎಂದರು.
‘ಸ್ವಾತಂತ್ರ್ಯ ನಂತರ ಸಾರ್ವಜನಿಕರಿಗೆ ಆಡಳಿತದ ವಿಷಯಗಳನ್ನು ತಿಳಿದುಕೊಳ್ಳಲು ಮಾಹಿತಿ ಹಕ್ಕು ಕಾಯ್ದೆ ಅಧಿಕಾರ ನೀಡಿದೆ. ಇದರ ಸದ್ಭಳಕೆಯಾಗಬೇಕು. ಯಾವುದೇ ರೀತಿಯ ವೈಯಕ್ತಿಕ ಮಾಹಿತಿಗಳನ್ನು ಕಾಯ್ದೆಯಡಿ ಮೂರನೇ ವ್ಯಕ್ತಿಗೆ ನೀಡಲು ಬರುವುದಿಲ್ಲ. 2005ರಲ್ಲಿ ಕಾಯ್ದೆ ಜಾರಿಯಾಗಿದ್ದು, ಅದಕ್ಕೂ ಮುಂಚಿನ 20 ವರ್ಷ ಅವಧಿಯ ದಾಖಲೆಗಳನ್ನು ಮಾತ್ರ ಕಾಯ್ದೆಯ ಮೂಲಕ ಸಾರ್ವಜನಿಕರು ಪಡೆದುಕೊಳ್ಳಬಹುದು’ ಎಂದರು.
ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಜೆ.ಸೋಮಶೇಖರ್ , ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ರಂಗಸ್ವಾಮಿ ಇದ್ದರು.
- 8 ಸಾವಿರ ಪ್ರಕರಣ ಇತ್ಯರ್ಥ
‘ರಾಜ್ಯ ಮಾಹಿತಿ ಆಯೋಗದ ಮುಂದೆ ಬಾಕಿ ಇದ್ದ 50000ಕ್ಕೂ ಅಧಿಕ ಮೇಲ್ಮನವಿ ಪ್ರಕಣಗಳ ಪೈಕಿ ಕಳೆದ ಮಾರ್ಚ್‍ನಿಂದ ಇಲ್ಲಿಯವರೆಗೂ 8000 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ಚಿತ್ರದುರ್ಗ ಜಿಲ್ಲೆಗೆ ಸಂಬಂಧಿಸಿದಂತೆ 787 ಮೇಲ್ಮನವಿ ಪ್ರಕರಣಗಳು ರಾಜ್ಯ ಮಾಹಿತಿ ಆಯೋಗದ ಮುಂದಿವೆ’ ಎಂದು ರುದ್ರಣ್ಣ ಹರ್ತಿಕೋಟೆ ಹೇಳಿದರು. ‘ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಂಬಂಧಿಸಿದಂತೆ 325 ಕಂದಾಯ 117 ಅರಣ್ಯ 55 ಸಮಾಜ ಕಲ್ಯಾಣ 53 ನಗರಾಭಿವೃದ್ಧಿ ಇಲಾಖೆ 46 ಜಲಸಂಪನ್ಮೂಲ 28 ಹಾಗೂ ಗೃಹ ಇಲಾಖೆಗೆ ಸಂಬಂಧಿಸಿದಂತೆ 19 ಮೇಲ್ಮನವಿ ಪ್ರಕರಣಗಳು ಇವೆ. ಹಣಕಾಸು ಸಾರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸಂಬಂಧಿಸಿದಂತೆ ತಲಾ ಒಂದು ಪ್ರಕರಣಗಳಿವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.