ADVERTISEMENT

ಬೈಕಿನಲ್ಲಿ ಇಬ್ಬರು ಸಂಚರಿಸುವಂತಿಲ್ಲ

ನಿರ್ಬಂಧ ವಿಧಿಸಿ ಆರ್‌ಟಿಒ ಆದೇಶ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2020, 12:48 IST
Last Updated 3 ಏಪ್ರಿಲ್ 2020, 12:48 IST

ಚಿತ್ರದುರ್ಗ: ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ದ್ವಿಚಕ್ರ ವಾಹನದಲ್ಲಿ ಇಬ್ಬರು ಪ್ರಯಾಣಿಸುವುದಕ್ಕೆ ನಿರ್ಬಂಧ ವಿಧಿಸಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಜಿ.ಎಸ್‌.ಹೆಗಡೆ ಆದೇಶ ಹೊರಡಿಸಿದ್ದಾರೆ. ಒಬ್ಬರಿಗಿಂತ ಹೆಚ್ಚು ಜನರು ಸಂಚರಿಸುವ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯುವಂತೆ ಸೂಚನೆ ನೀಡಿದ್ದಾರೆ.

ಲಾಕ್‌ಡೌನ್‌ ನಡುವೆಯೂ ಕಾಣಿಸಿಕೊಳ್ಳುತ್ತಿರುವ ಜನ ಮತ್ತು ವಾಹನ ಸಂಚಾರಕ್ಕೆ ಕಡಿವಾಣ ಹಾಕಲು ಇಂತಹ ನಿರ್ಬಂಧಗಳನ್ನು ಕೈಗೊಳ್ಳಲಾಗಿದೆ. ನಿಯಮ ಉಲ್ಲಂಘಿಸುವ ವಾಹನಗಳ ಪಾಸ್‌ಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವಾಹನಗಳ ಪ್ರಯಾಣಿಕರ ಸಂಖ್ಯೆಯನ್ನು ಕಡಿತಗೊಳಿಸಲಾಗಿದೆ. ಆಟೊಗಳಲ್ಲಿ ಒಬ್ಬರು ಹಾಗೂ ಕಾರುಗಳಲ್ಲಿ ಇಬ್ಬರು ಮಾತ್ರ ಸಂಚರಿಸಬೇಕು. ಸರಕು ಸಾಗಣೆ ವಾಹನದಲ್ಲಿ ಚಾಲಕ ಮತ್ತು ಕ್ಲಿನರ್‌ ಮಾತ್ರ ಅವಕಾಶ ಎಂದು ತಿಳಿಸಿದ್ದಾರೆ.

ADVERTISEMENT

ವೈದ್ಯಕೀಯ ತುರ್ತು ಸೇವೆಗಾಗಿ 20 ಆಟೊ ಹಾಗೂ 10 ಟ್ಯಾಕ್ಸಿಗಳಿಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಪಾಸ್‌ ನೀಡಿದೆ. ಪಾಸ್ ಹೊಂದಿದ ವಾಹನ ಮಾತ್ರ ಪ್ರಯಾಣಿಕರಿಗೆ ಸೇವೆ ಒದಗಿಸಲು ಅರ್ಹತೆ ಪಡೆದಿರುತ್ತದೆ. ಇಲ್ಲವಾದರೆ ಅದನ್ನು ಜಪ್ತಿ ಮಾಡಲಾಗುತ್ತದೆ. ತುರ್ತು ಸೇವೆಗೆ ಆಟೊ ಅಥವಾ ಟ್ಯಾಕ್ಸಿ ಬೇಕಿದ್ದಲ್ಲಿ 9449864016, 9008368017, 9108906938, 9449545299, 9900096699 ಕ್ಕೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ಪಾಸ್ ಆಟೊ ಮತ್ತು ಟ್ಯಾಕ್ಸಿ ಚಾಲಕರು ವಾಹನದ ಸ್ವಚ್ಛತೆಗೆ ಒತ್ತು ನೀಡಬೇಕು. ಪ್ರತಿ ಟ್ರಿಪ್ ಮುಗಿದ ಕೂಡಲೇ ಬಾಗಿಲು, ಸೀಟು, ಬಾಗಿಲ ಹಿಡಿಕೆಗಳನ್ನು ಸ್ವಚ್ಛಗೊಳಿಸಬೇಕು. ಚಾಲಕರು ಪದೇ ಪದೇ ಕೈಗೊಳ್ಳನ್ನು ಸ್ಯಾನಿಟೈಸರ್ ಅಥವಾ ಸೋಪಿನಿಂದ ತೊಳೆದುಕೊಳ್ಳಬೇಕು. ವಾಹನಗಳ ಅರ್ಹತಾ ಪತ್ರ, ವಿಮಾ ಪಾಲಿಸಿ, ರಹದಾರಿ ಸೇರಿ ಇತರೆ ದಾಖಲೆಗಳ ನವೀಕರಣ ಅವಧಿಯನ್ನು ಜೂನ್‌ 30ರವರೆಗೆ ವಿಸ್ತರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.