ADVERTISEMENT

ಆಧಾರ್ ತಿದ್ದುಪಡಿಗಾಗಿ ಜನರ ಪರದಾಟ

ಆಧಾರ್ ನೋಂದಣಿ ಕೇಂದ್ರದ ಅವ್ಯವಸ್ಥೆಗೆ ರೋಸಿ ಹೋದ ಸಾರ್ವಜನಿಕರು

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2021, 4:18 IST
Last Updated 8 ಆಗಸ್ಟ್ 2021, 4:18 IST
ನಾಯಕನಹಟ್ಟಿ ಪಟ್ಟಣದ ಹೊರಮಠ ಸಮುದಾಯ ಭವನದಲ್ಲಿ ತೆರೆದಿರುವ ಆಧಾರ್ ನೋಂದಣಿ ಕೇಂದ್ರದ ಬಳಿ ಜಮಾಯಿಸಿರುವ ಸಾರ್ವಜನಿಕರು.
ನಾಯಕನಹಟ್ಟಿ ಪಟ್ಟಣದ ಹೊರಮಠ ಸಮುದಾಯ ಭವನದಲ್ಲಿ ತೆರೆದಿರುವ ಆಧಾರ್ ನೋಂದಣಿ ಕೇಂದ್ರದ ಬಳಿ ಜಮಾಯಿಸಿರುವ ಸಾರ್ವಜನಿಕರು.   

ನಾಯಕನಹಟ್ಟಿ: ಪಟ್ಟಣದ ಗುರುತಿಪ್ಪೇರುದ್ರಸ್ವಾಮಿ ಹೊರಮಠದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತೆರೆದಿರುವ ಆಧಾರ್ ನೋಂದಣಿ ಕೇಂದ್ರವು ಅವ್ಯವಸ್ಥೆಯಿಂದ ಕೂಡಿದ್ದು, ಸಾರ್ವಜನಿಕರು ಆಧಾರ್ ನೋಂದಣಿ ಮತ್ತು ತಿದ್ದುಪಡಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ನಾಯಕನಹಟ್ಟಿ ಹೋಬಳಿಯಲ್ಲಿ 8 ಗ್ರಾಮ ಪಂಚಾಯಿತಿಗಳು ಮತ್ತು 1 ಪಟ್ಟಣ ಪಂಚಾಯಿತಿ ಇದ್ದು, 48 ಗ್ರಾಮಗಳು ಹೋಬಳಿಯಲ್ಲಿ ಕಂಡು ಬರುತ್ತವೆ. ನಾಯಕನಹಟ್ಟಿ ಪಟ್ಟಣವು ಈ ಗ್ರಾಮಗಳಿಗೆ ಕೇಂದ್ರ ಸ್ಥಾನವಾಗಿದೆ. ಹೋಬಳಿಯ ಸಾರ್ವಜನಿಕರು ಯಾವುದೇ ಸರ್ಕಾರಿ ದಾಖಲೆಗಳು ಬೇಕಿದ್ದರೂ ಪಟ್ಟಣಕ್ಕೆ ಬರಬೇಕಿದೆ. ಪ್ರಸ್ತುತ ಸರ್ಕಾರದ ಯಾವುದೇ ಯೋಜನೆಗಳನ್ನು ಪಡೆದುಕೊಳ್ಳಬೇಕೆಂದರೂ ಆಧಾರ್‌ ಸಂಖ್ಯೆ ಕಡ್ಡಾಯವಾಗಿದೆ. ಆದರೆ ಆಧಾರ್‌ ನೋಂದಣಿ ಕೇಂದ್ರ ಮಾತ್ರ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಭಾರಿ ಅವ್ಯವಸ್ಥೆಯಿಂದ ಕೂಡಿದೆ. ಇದರಿಂದ ನಿತ್ಯ ನೂರಾರು ಜನರು ನಾಡಕಚೇರಿ ಮತ್ತು ಆಧಾರ್‌ ನೋಂದಣಿ ಕೇಂದ್ರದ ಬಳಿ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಶಾಲಾ ಮಕ್ಕಳ ದಾಖಲಾತಿಗಾಗಿ ಮತ್ತು ಪಡಿತರ ಚೀಟಿಗೆ ಹೆಸರು ಸೇರ್ಪಡೆಗೆ ಆಧಾರ್ ನೋಂದಣಿ ಕಡ್ಡಾಯವಾಗಿದೆ. ನಾಯಕನಹಟ್ಟಿ ಪಟ್ಟಣಕ್ಕೆ ಆಧಾರ್ ನೋಂದಣಿ, ಹೆಸರು, ದೂರವಾಣಿ ಸಂಖ್ಯೆ, ವಿಳಾಸ, ಭಾವಚಿತ್ರ, ಸೇರಿದಂತೆ ಹಲವು ತಿದ್ದುಪಡಿಗಳಿಗಾಗಿ ನೂರಾರು ಜನರು ಬರುತ್ತಾರೆ. ಆದರೆ ಆಧಾರ್ ನೋಂದಣಿ ಕೇಂದ್ರದಲ್ಲಿ ಇರುವುದು ಒಬ್ಬ ಸಿಬ್ಬಂದಿ ಮಾತ್ರ. ಒಬ್ಬ ವ್ಯಕ್ತಿಯ ಅಥವಾ ಒಂದು ಮಗುವಿನ ಆಧಾರ್ ನೋಂದಣಿ ಕಾರ್ಯ ಮಾಡಲು ಕನಿಷ್ಠ 10ರಿಂದ 15ನಿಮಿಷ ಸಮಯ ತೆಗೆದುಕೊಳ್ಳುತ್ತದೆ. ಇದರಿಂದ ದಿನಕ್ಕೆ 30ರಿಂದ 40ಜನರಿಗೆ ಮಾತ್ರ ಆಧಾರ್ ತಿದ್ದುಪಡಿ ಮತ್ತು ನೋಂದಣಿ ಸೇವೆ ದೊರೆಯುತ್ತಿದೆ. ಆದರೆ ಉಳಿದ ನೂರಾರು ಜನರು ತಿದ್ದುಪಡಿ ಸೇವೆ ಲಭಿಸದ ಕಾರಣ ಆಧಾರ್ ಸಿಬ್ಬಂದಿ ಮತ್ತು ಅಧಿಕಾರಿ ವರ್ಗಕ್ಕೆ ಹಿಡಿಶಾಪ ಹಾಕುತ್ತ ಮನೆಗಳತ್ತ ಹೋಗುವುದು ನಿತ್ಯದ ದೃಶ್ಯವಾಗಿದೆ.

ADVERTISEMENT

ಈ ಸಂಬಂಧ ಗ್ರಾಮಸ್ಥರಾದ ಮುತ್ತಯ್ಯ, ತಿಪ್ಪೇಸ್ವಾಮಿ, ಪ್ರಹ್ಲಾದ ಮಾತನಾಡಿ, ‘ಪ್ರಸ್ತುತ ಪಡಿತರ ಚೀಟಿಯ ಇ-ಕೆವೈಸಿಗಾಗಿ ಹೆಬ್ಬೆಟ್ಟಿನ ಗುರುತು ನೀಡಲು ದಿನಾಂಕ 10 ಕಡೆಯ ದಿನವಾಗಿದೆ. ಆಧಾರ್ ಸಂಖ್ಯೆಯಲ್ಲಿ ದೂರವಾಣಿ ಸಂಖ್ಯೆ ಮತ್ತು ಆಧಾರ್ ಸಿಂಧುತ್ವಕ್ಕಾಗಿ ಆಧಾರ್ ನೋಂದಣಿ ಕೇಂದ್ರದ ಬಳಿ ಬಂದಿದ್ದೇವೆ. ಆದರೆ ಆಧಾರ್ ಕೇಂದ್ರದಲ್ಲಿ ದಿನಪೂರ್ತಿ ಕಾಯುತ್ತ ಕುಳಿತರೂ ಯಾವುದೇ ಪ್ರಯೋಜನವಾಗಿಲ್ಲ. ಕೇವಲ ಒಬ್ಬ ಸಿಬ್ಬಂದಿಯಿಂದ ಆಧಾರ್ ಸೇವೆ ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಮಧ್ಯೆ ವಿದ್ಯುತ್ ಸಮಸ್ಯೆ ಉಂಟಾದರೆ ಸಾಕಷ್ಟು ತೊಂದರೆಯಾಗುತ್ತದೆ. ಜತೆಗೆ ಪಡಿತರ ಚೀಟಿಗೆ ಮಕ್ಕಳ ಹೆಸರು ಸೇರ್ಪಡೆಗೆ ಮಕ್ಕಳನ್ನು ಕರೆತರಲಾಗಿದ್ದು, ಇಲ್ಲಿ ತುಂಬಾ ಜನಸಂದಣಿ ಇದೆ. ಜನರು ನಾಮುಂದು ತಾಮುಂದು ಎಂಬಂತೆ ಅಂತರ ಮರೆತು ನಡೆದು ಕೊಳ್ಳುತ್ತಿದ್ದಾರೆ. ಇದರಿಂದ ಚಿಕ್ಕಮಕ್ಕಳು ಸೇರಿದಂತೆ ಸಾರ್ವಜನಿಕರಿಗೆ ಕೋವಿಡ್ ಹರಡುವ ಭೀತಿಯೂ ಉಂಟಾಗಿದೆ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಆಧಾರ್‌ ನೋಂದಣಿ ಸೇವೆ ಒದಗಿಸಲು ಇನ್ನೂ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಬೇಕು. ಮತ್ತು ಎಲ್ಲ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಆಧಾರ್‌ ನೋಂದಣಿ ಕೇಂದ್ರ ತೆರೆಯಬೇಕು’ ಎಂದು ಒತ್ತಾಯಿಸಿದರು.

ಶೀಘ್ರದಲ್ಲೇ ಕ್ರಮ
ಆಧಾರ್ ನೋಂದಣಿ ಮತ್ತು ತಿದ್ದುಪಡಿ‌ಯಲ್ಲಿನ ಸಮಸ್ಯೆ ನನ್ನ ಗಮನಕ್ಕೆ ಬಂದಿದೆ. ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಆಧಾರ್ ನೋಂದಣಿ ಕೇಂದ್ರ ತೆರೆಯಲು ಸರ್ಕಾರ ತೀರ್ಮಾನಿದೆ. ಶೀಘ್ರದಲ್ಲೇ ಈ ಬಗ್ಗೆ ‌ಅಗತ್ಯ ಕ್ರಮ ಕೈಗೊಳ್ಳುತ್ತೇನೆ. ಸೋಮವಾರ ನಾಯಕನಹಟ್ಟಿ ಪಟ್ಟಣದಲ್ಲಿರುವ ಆಧಾರ್ ಕೇಂದ್ರದ ಸಮಸ್ಯೆಯನ್ನು ಬಗೆಹರಿಸಲಾಗುವುದು.
-ಎನ್. ರಘುಮೂರ್ತಿ, ತಹಶೀಲ್ದಾರ್, ಚಳ್ಳಕೆರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.