ಹಿರಿಯೂರು: ತಾಲ್ಲೂಕಿನ ಜವನಗೊಂಡನಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಕಾಟನಾಯಕನಹಳ್ಳಿ ಗ್ರಾಮದ ಮೆಟ್ಲಿಂಗ್ ರಸ್ತೆ ಮತ್ತು ಸಿ.ಡಿ. ನಿರ್ಮಾಣ ಕಾಮಗಾರಿಯನ್ನು ಗುರುವಾರ ಸಾಮಾಜಿಕ ಪರಿಶೋಧನಾ ರಾಜ್ಯ ನಿರ್ದೇಶಕ ಮಲ್ಲಪ್ಪ ಪರಿಶೀಲಿಸಿದರು.
ಕಾಟನಾಯಕನಹಳ್ಳಿಗೆ ಹೋಗುವ ಮೊದಲು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಸಾಮಾಜಿಕ ಪರಿಶೋಧನಾ ಪೂರ್ವಭಾವಿ ಸಭೆ ನಡೆಸಿದ ಮಲ್ಲಪ್ಪ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಉದ್ದೇಶಗಳು, ನಮೂನೆ 1ರಿಂದ 7ರವರೆಗಿನ ರಿಜಿಸ್ಟರ್ ಪ್ರತಿಗಳು, ಕ್ರಿಯಾ ಯೋಜನೆ ಪ್ರತಿಗಳನ್ನು ಪರಿಶೀಲಿಸಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೆಂಕಟೇಶ್ ಅವರಿಗೆ ಕಾಮಗಾರಿ ಕಡತಗಳು, ರಿಜಿಸ್ಟರ್ ಪ್ರತಿಗಳನ್ನು ಸಮರ್ಪಕವಾಗಿ ನಿರ್ವಹಿಸಲು ಸೂಚಿಸಿದರು.
ನರೇಗಾ ಯೋಜನೆಯಡಿ ಗ್ರಾಮೀಣ ಪ್ರದೇಶದ ಸರ್ವತೋಮುಖ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಲು ಅವಕಾಶವಿದೆ. ಪಂಚಾಯಿತಿ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಒಟ್ಟಾಗಿ ಶ್ರಮಿಸಿದಲ್ಲಿ ಇಡೀ ಪಂಚಾಯಿತಿಯನ್ನು ಮಾದರಿಯಾಗಿ ರೂಪಿಸಬಹುದು. ಗ್ರಾಮೀಣ ಭಾಗದ ರಸ್ತೆ ಸುಧಾರಣೆ, ಕುಡಿಯುವ ನೀರಿನ ಸಮರ್ಪಕ ಪೂರೈಕೆ, ಮಳೆ ನೀರು ಸಂರಕ್ಷಣೆ ಒಳಗೊಂಡು ಹಲವು ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಬಹುದು. ಜಾಬ್ ಕಾರ್ಡ್ ಹೊಂದಿರುವ ಕೂಲಿಕಾರರಿಗೆ ಕೈತುಂಬ ಕೆಲಸ ಕೊಡಬಹುದು ಎಂದು ಹೇಳಿದರು.
ಸಭೆಯಲ್ಲಿ ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ಎ.ಕೇಶವಮೂರ್ತಿ, ನರಸರೆಡ್ಡಿ ವಾರಂಗಲ್, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ನಾಗರಾಜ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜಿ. ಪ್ರಮೋದ್, ಸಹಾಯಕ ನಿರ್ದೇಶಕ ಶಿವಮೂರ್ತಿ, ತಿಪ್ಪೇರುದ್ರಪ್ಪ, ಅಬೂಬಕರ್ ಸಿದ್ದೀಕ್, ಗಿರೀಶ್, ಉಷಾದೇವಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹಾಲಿಂಗಪ್ಪ, ಮಾಜಿ ಅಧ್ಯಕ್ಷ ಅಲ್ತಾಫ್ ಅಹಮದ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.