ಚಿತ್ರದುರ್ಗ: ‘ಮುಂಗಾರು ಪೂರ್ವದಲ್ಲಿಯೇ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ. ರೈತರು ಭೂಮಿಯನ್ನು ಹದ ಮಾಡಿಕೊಂಡು ಬಿತ್ತನೆಗೆ ಸಿದ್ಧತೆ ನಡೆಸಿದ್ದಾರೆ. ಕೃಷಿ ಅಧಿಕಾರಿಗಳು ಬಿತ್ತನೆ ಬೀಜ ಹಾಗೂ ಅಗತ್ಯ ರಸಗೊಬ್ಬರ ಕೊರತೆಯಾಗದಂತೆ ಕ್ರಮ ವಹಿಸಬೇಕು, ಕಾಳಸಂತೆಯಲ್ಲಿ ಅಧಿಕ ಬೆಲೆಗೆ ಮಾರಾಟವಾಗದಂತೆ ಎಚ್ಚರ ವಹಿಸಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಮುಂಗಾರು ಹಂಗಾಮಿನ ಪೂರ್ವ ಸಿದ್ಧತೆ, ಬಿತ್ತನೆ ಬೀಜ ಮತ್ತು ರಸಗೊಬ್ಬರ , ಕೃಷಿ ಪರಿಕರಗಳ ಲಭ್ಯತೆ ಕುರಿತು ಜರುಗಿದ ಸಭೆಯಲ್ಲಿ ಮಾತನಾಡಿದರು.
‘ಬಿತ್ತನೆ ಬೀಜ ಹಾಗೂ ರಸಗೊಬ್ಬರಕ್ಕೆ ರೈತರು ಸಾಲುಗಟ್ಟಿ ನಿಲ್ಲುವಂತಾಗಬಾರದು. ಬೇಡಿಕೆಗೆ ಅನುಸಾರವಾಗಿ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಅಗತ್ಯ ದಾಸ್ತಾನು ಇಟ್ಟುಕೊಳ್ಳಬೇಕು. ರೈತರು ಕೃಷಿ ಇಲಾಖೆಯ ಸಂಚಾರಿ ಮಣ್ಣು ಪರೀಕ್ಷಾ ಕೇಂದ್ರಗಳ ಸದುಪಯೋಗ ಮಾಡಿಕೊಳ್ಳಬೇಕು. ಮಣ್ಣಿನ ಫಲವತ್ತತೆಯ ವರದಿ ನೀಡಬೇಕು. ಇದನ್ನು ಆಧರಿಸಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಬಳಕೆ ಮಾಡಲು ರೈತರಿಗೆ ಅಧಿಕಾರಿಗಳು ಶಿಫಾರಸು ಮಾಡಬೇಕು’ ಎಂದರು.
‘ಮಣ್ಣು ಪರೀಕ್ಷೆ ಮಾಡಿಸುವುದರಿಂದ ಮಣ್ಣಿಗೆ ಹೆಚ್ಚು ರಾಸಾಯನಿಕ ಗೊಬ್ಬರ ಸುರಿಯುವುದು ತಪ್ಪುತ್ತದೆ. ಮಣ್ಣಿನ ಫಲವತ್ತತೆ ಆಧರಿಸಿ ಬೆಳೆ ಬೆಳೆಯುವುದರಿಂದ ರೈತರಿಗೆ ಆರ್ಥಿಕವಾಗಿ ಹೆಚ್ಚಿನ ನಷ್ಟ ಉಂಟಾಗುವುದಿಲ್ಲ. ರೈತರು ಸಾಲದ ಸುಳಿಯಲ್ಲಿ ಸಿಲುಕುವುದಿಲ್ಲ. ರೈತರು ಕೃಷಿಯೊಂದಿಗೆ ಪಶು ಸಂಗೋಪನೆ ಕೈಗೊಂಡು ಸಮಗ್ರ ಬೇಸಾಯ ಪದ್ಧತಿಯನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹ ನೀಡಬೇಕು. ಕೊಟ್ಟಿಗೆ ಹಾಗೂ ಸಾವಯವ ಗೊಬ್ಬರಗಳನ್ನು ಬಳಸುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ’ ಎಂದರು.
ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ್ ಮಾತನಾಡಿ ‘ಜನವರಿಯಿಂದ ಮೇ ತಿಂಗಳವರೆಗೆ ಜಿಲ್ಲೆಯಲ್ಲಿ 7.99 ಸೆಂ.ಮೀ ವಾಡಿಕೆ ಮಳೆ ನಿರೀಕ್ಷೆ ಇತ್ತು. ಆದರೆ ಜಿಲ್ಲೆಯಲ್ಲಿ ಈವರೆಗೆ 13.58 ಸೆಂ.ಮೀ ಮಳೆಯಾಗಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಬಿತ್ತನೆ ಚಟುವಟಿಕೆಗಳು ಗರಿಗೆದರಿವೆ. ಶೇಂಗಾ, ಮೆಕ್ಕೆಜೋಳ, ರಾಗಿ, ತೊಗರಿ, ಸೂರ್ಯಕಾಂತಿ, ಹೆಸರು, ಹಲಸಂದೆ, ಸಿರಿಧಾನ್ಯ ಹತ್ತಿ ಬೆಳೆಗಳನ್ನು ಹೆಚ್ಚಾಗಿ ಬೆಳೆಯುತ್ತಾರೆ. ಕೃಷಿ ಇಲಾಖೆಯಿಂದ ಒಟ್ಟು 31,454 ಕ್ವಿಂಟಲ್ ಬಿತ್ತನೆ ಬೀಜದ ಗುರಿ ನಿಗದಿ ಪಡಿಸಿಕೊಂಡಿದೆ. ಈಗಾಗಲೇ 12,924 ಕ್ವಿಂಟಲ್ ಬಿತ್ತನೆ ಬೀಜದ ದಾಸ್ತಾನು ಸಂಗ್ರಹಣೆ ಮಾಡಲಾಗಿದೆ. ಜುಲೈ 2ನೇ ವಾರದವರೆಗೂ ಬಿತ್ತನೆ ಮಾಡಲು ಅವಕಾಶವಿದೆ’ ಎಂದರು.
ಜಿಲ್ಲೆಯಲ್ಲಿ ಏ.25 ರಿಂದ ಮಾ.26 ವರೆಗೆ ಒಟ್ಟು 94,546 ಮೆಟ್ರಿಕ್ ಟನ್ ರಸಗೊಬ್ಬರದ ಬೇಡಿಕೆ ನಿರೀಕ್ಷೆಯಿದೆ. ಇದೂವರೆಗೂ ಒಟ್ಟು 32,045 ಮೆಟ್ರಿಕ್ ಟನ್ ಹೊಸ ಗೊಬ್ಬರ ದಾಸ್ತಾನಿದೆ. 12,567 ಮೆಟ್ರಿಕ್ ಟನ್ ಮಾರಾಟವಾಗಿದೆ. 19,477 ಮೆಟ್ರಿಕ್ ಟನ್ ಗೊಬ್ಬರ ಉಳಿಕೆಯಾಗಿದೆ. ಕೃಷಿ ಇಲಾಖೆಯ 22 ರೈತಸಂಪರ್ಕ ಕೇಂದ್ರ ಹಾಗೂ 13 ಹೆಚ್ಚುವರಿ ವಿತರಣಾ ಕೇಂದ್ರಗಳಲ್ಲಿ ಸಹಾಯಧನದಲ್ಲಿ ಬಿತ್ತನೆ ಬೀಜ ವಿತರಣೆ ಮಾಡಲಾಗುವುದು’ ಎಂದರು.
‘59 ಕೃಷಿಪತ್ತಿನ ಸಹಕಾರ ಸಂಘಗಳು, 26 ರೈತ ಉತ್ಪಾದಕ ಸಂಸ್ಥೆಗಳು, 283 ಖಾಸಗಿ ಮಾರಾಟಗಾರರು ಬಿತ್ತನೆ ಬೀಜ ಮಾರಾಟ ಮಾಡಲಿದ್ದಾರೆ. ಕಳಪೆ ಹಾಗೂ ಹೆಚ್ಚಿನ ದರಕ್ಕೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಮಾರಾಟ ಮಾಡದಂತೆ ಈಗಾಗಲೇ ಸಂಬಂಧಪಟ್ಟವರಿಗೆ ಎಚ್ಚರಿಕೆ ನೀಡಲಾಗಿದೆ. ಯೂರಿಯಾ, ಡಿಎಪಿ, ಎಂಒಪಿ, ಕಾಂಪ್ಲೆಕ್ಸ್ ಹಾಗೂ ಎಸ್‍ಎಸ್‍ಪಿ ರಸಗೊಬ್ಬರಗಳ ಜೊತೆಗೆ ಲಘು ಪೋಷಕಾಂಶಗಳು, ಪೋಟಾಷಿಯಂ ಹಾಗೂ ಗಂಧಕ ಸಾರಗಳನ್ನು ಒದಗಿಸುವ ಹೊಸ ಗೊಬ್ಬರಗಳನ್ನು ಬಳಸಲು ರೈತರಿಗೆ ಸಲಹೆ ನೀಡಲಾಗುತ್ತಿದೆ’ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಗಾಯಿತ್ರಿ, ಕೃಷಿ ಉಪ ನಿರ್ದೇಶಕ ಕೆ.ಎಸ್.ಶಿವಕುಮಾರ್, ಕೃಷಿ ಇಲಾಖೆ ಜಾರಿ ದಳದ ಸಹಾಯಕ ನಿರ್ದೇಶಕರಾದ ಮಲ್ಲನಗೌಡ, ಜೆ,ಉಲ್ಪತ್ ಜೈಬ್, ಇಪ್ಕೋ ಸಂಸ್ಥೆಯ ಕ್ಷೇತ್ರಾಧಿಕಾರಿ ಚಿದಂಬರಮೂರ್ತಿ, ಜಿಲ್ಲಾ ರಸಗೊಬ್ಬರ ಮಾರಾಟಗಾರರ ಯೂನಿಯನ್ ಅಧ್ಯಕ್ಷ ಜಿ.ಪಿ.ರೇವಣಸಿದ್ದಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.