ಚಿತ್ರದುರ್ಗ: ‘ಪ್ರಬಲ ಜಾತಿಗಳ ಜೊತೆಗಿದ್ದ ಕ್ರಿಶ್ಚಿಯನ್ ಪದ ತೆಗೆದು ಪರಿಶಿಷ್ಟ ಜಾತಿಗಳ ಜೊತೆಗೆ ಹಾಗೆಯೇ ಉಳಿಸಿರುವುದು ಸರಿಯಲ್ಲ. ಪರಿಶಿಷ್ಟ ಜಾತಿ ಜೊತೆಗಿರುವ ಕ್ರಿಶ್ಚಿಯನ್ ಪದವನ್ನೂ ತೆಗೆಯಬೇಕು’ ಎಂದು ಕೆಪಿಸಿಸಿ ಉಪಾಧ್ಯಕ್ಷ ಎಚ್.ಆಂಜನೇಯ ಒತ್ತಾಯಿಸಿದರು.
‘ಈಗ 33 ಸಮುದಾಯಗಳ ಜೊತೆಗಿನ ಕ್ರಿಶ್ಚಿಯನ್ ಪದ ತೆಗೆದು ಸಮೀಕ್ಷೆ ಆರಂಭಿಸಲಾಗಿದೆ. ಮಾದಿಗ ಕ್ರಿಶ್ಚಿಯನ್, ಛಲವಾದಿ ಕ್ರಿಶ್ಚಿಯನ್ ಎಂದು ಪರಿಶಿಷ್ಟ ಜಾತಿಗಳನ್ನು ಗುರುತಿಸುವುದು ಸರಿಯಲ್ಲ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ನಾಗಮೋಹನ ದಾಸ್ ಆಯೋಗ ನಡೆಸಿದ್ದ ಗಣತಿಯಲ್ಲಿ ಧರ್ಮ ಕಾಲಂ ಇರಲಿಲ್ಲ. ಈಗ ಧರ್ಮ ಕಾಲಂ ಸೇರಿಸಿರುವುದೇ ತಪ್ಪು. ಮೀಸಲಾತಿ ಜಾತಿ ಆಧಾರಿತವಾಗಿದ್ದು, ಧರ್ಮ ಕೇಳುವ ಅಗತ್ಯವೇ ಇರಲಿಲ್ಲ. ಒಂದು ವೇಳೆ ಎಸ್.ಸಿ ಸಮುದಾಯಗಳ ಜನರು ಮತಾಂತರಗೊಂಡಿದ್ದರೆ ಅವರು ಆ ಧರ್ಮದ ಹೆಸರನ್ನೇ ಬರೆಸಲಿ’ ಎಂದರು.
‘ಪರಿಶಿಷ್ಟ ಜಾತಿಗಳ ಜೊತೆಗಿನ ಕ್ರಿಶ್ಚಿಯನ್ ಪದ ತೆಗೆಯದಿದ್ದರೆ ಆಯೋಗದ ಕ್ರಮದ ವಿರುದ್ಧ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ. ಕೆಲ ಮಾದಿಗ, ಹೊಲೆಯರು ಅಸ್ಪೃಶ್ಯತೆಯಿಂದ ಬೇಸರಗೊಂಡು ಚರ್ಚ್‌ಗೆ ಹೋಗಿ ಪ್ರಾರ್ಥನೆ ಮಾಡುತ್ತಾರೆ. ಅಂಥವರನ್ನು ಮೀಸಲಾತಿಯಿಂದಲೇ ಹೊರಗಿಡುವ ಕೆಲಸ ಮಾಡಬಾರದು’ ಎಂದರು.
‘ಅಲೆಮಾರಿಗಳಿಗೆ ಆಗಿರುವ ಅನ್ಯಾಯವನ್ನು ಸರ್ಕಾರ ಸರಿಪಡಿಸಬೇಕು’ ಎಂದರು. ಈಗಿನ ಸಮೀಕ್ಷೆಯಲ್ಲಿ ಎಸ್.ಸಿ. ಸಮುದಾಯಗಳ ಜನರು ತಮ್ಮ ಮೂಲ ಜಾತಿ ಹೆಸರು ಬರೆಸಬೇಕು. ಮೂಲ ಜಾತಿ ಬರೆಸದಿದ್ದರೆ ಸೌಲಭ್ಯಗಳೂ ಸಿಗುವುದಿಲ್ಲ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.