ಚಳ್ಳಕೆರೆ: ಪ್ರಾಥಮಿಕ ಶಾಲಾ ಹಂತದಲ್ಲೇ ಮಕ್ಕಳಲ್ಲಿ ವಿಜ್ಞಾನದ ತಿಳಿವಳಿಕೆ ಹಾಗೂ ವೈಜ್ಞಾನಿಕ ಮನೋಭಾವ ಬೆಳೆಸಲು ಕುವೈತ್ ಕನ್ನಡ ಕೂಟದಿಂದ ₹ 7,000 ಮೌಲ್ಯದ ವಿಜ್ಞಾನದ ಕಿಟ್ ಅನ್ನು ತಾಲ್ಲೂಕಿನ 30 ಶಾಲೆಗಳಿಗೆ ವಿತರಿಸಲಾಗಿದೆ ಎಂದು ಬೆಂಗಳೂರು ಕುವೈತ್ ಕನ್ನಡ ಕೂಟ ಕ್ಷೇಮಾಭ್ಯುದಯ ಸಂಘದ ಮಾಜಿ ಅಧ್ಯಕ್ಷ ವಾಸಕಿ ನುಗ್ಗೇನಹಳ್ಳಿ ಹೇಳಿದರು.
ಶಾಲಾ ದತ್ತು ಯೋಜನೆಯಡಿ ನಗರದ ಹೆಗ್ಗೆರೆ ತಾಯಮ್ಮ ಮತ್ತು ತಿಪ್ಪೇಸ್ವಾಮಿ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಜ್ಞಾನ ಕರ್ಯಾಗಾರದಲ್ಲಿ ಅವರು ಮಾತನಾಡಿದರು.
ಗಡಿ ಭಾಗದ ಮತ್ತು ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ನಗರ ಪ್ರದೇಶದ ಶಾಲೆ ಸೇರಿ ತಾಲ್ಲೂಕಿನಲ್ಲಿ ಒಟ್ಟು 24 ಪ್ರಾಥಮಿಕ ಶಾಲೆಗಳನ್ನು ದತ್ತು ತೆಗೆದುಕೊಳ್ಳಲಾಗಿದ್ದು, ಎಲ್ಲ ಶಾಲೆಗಳಿಗೂ ಸುಣ್ಣ ಬಣ್ಣ, ಕಂಪ್ಯೂಟರ್, ಸ್ಮಾರ್ಟ್‌ಕ್ಲಾಸ್, ವಿಜ್ಞಾನ ಪ್ರಯೋಗಾಲಯ, ಕ್ರೀಡಾ ಸಾಮಗ್ರಿ ಮುಂತಾದ ಪರಿಕರಗಳನ್ನು ಉಚಿತವಾಗಿ ಒದಗಿಸಲಾಗುವುದು ಎಂದು ಹೇಳಿದರು.
ಪ್ರಾಥಮಿಕ ಶಿಕ್ಷಕರ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಆರ್.ಮಾರುತೇಶ್, ‘ವಿಜ್ಞಾನ ವಿಷಯವನ್ನು ಮಕ್ಕಳು ಕೂತೂಹಲ ಹಾಗೂ ಉತ್ಸುಕತೆಯಿಂದ ಕಲಿಯಲು ಉಚಿತ ವಿಜ್ಞಾನದ ಕಿಟ್ ವಿತರಿಸಿರುವ ಕುವೈತ್ ಕನ್ನಡ ಕೂಟದ ಕೆಲಸ ಶ್ಲಾಘನೀಯ’ ಎಂದು ಹೇಳಿದರು.
ಕುವೈತ್ ಕನ್ನಡ ಕೂಟದ ಪ್ರಧಾನ ಕಾರ್ಯದರ್ಶಿ ಸುಧೀರ್ ಶಣೈ, ಖಜಾಂಚಿ ಪ್ರಭಾಕರ್, ಪ್ರೌಢಶಾಲಾ ಮುಖ್ಯಶಿಕ್ಷಕ ವೀರಣ್ಣ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಬಿ.ರಾಜಕುಮಾರ್, ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ತಿಪ್ಪೇಸ್ವಾಮಿ ಮಾತನಾಡಿದರು.
ಸಹ ಶಿಕ್ಷಕ ಕಸ್ತೂರಿ ತಿಮ್ಮನಹಳ್ಳಿ ಶ್ರೀಕಾಂತ್, ಶಿಕ್ಷಣ ಸಂಯೋಜಕ ಮಾರುತಿ ಭಂಡಾರಿ, ರಾಜೇಶ್, ರಾಜಣ್ಣ, ರಾಧಾ, ಈರಣ್ಣ, ಪ್ರದೀಪ್, ಪ್ರಾಣೇಶ್, ನಾಗರಾಜ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.