ನಾಯಕನಹಟ್ಟಿ: ರಷ್ಯಾದಲ್ಲಿ ವರ್ಷಾಂತ್ಯಕ್ಕೆ ನಡೆಯುವ ಅಂತರರಾಷ್ಟ್ರೀಯ ಜೂನಿಯರ್ ವಿಜ್ಞಾನ ಒಲಿಂಪಿಯಾಡ್ ಸ್ಪರ್ಧೆಗೆ ಭಾರತದಿಂದ 6 ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವ ಜವಾಬ್ದಾರಿ ಕುದಾಪುರದ ಐಐಎಸ್‌ಸಿ ಪ್ರತಿಭಾನ್ವೇಷಣೆ ಅಭಿವೃದ್ಧಿ ಕೇಂದ್ರಕ್ಕೆ ದೊರೆತಿದೆ ಎಂದು ಸಂಸ್ಥೆಯ ಮುಖ್ಯಸ್ಥ ಸುಬ್ಬಾರೆಡ್ಡಿ ತಿಳಿಸಿದರು.
ಸಮೀಪದ ಕುದಾಪುರ ಐಐಎಸ್‌ಸಿ ಆವರಣದಲ್ಲಿರುವ ಕೌಶಲಾಭಿವೃದ್ಧಿ ಮತ್ತು ಪ್ರತಿಭಾನ್ವೇಷಣೆ ತರಬೇತಿ ಕೇಂದ್ರದಲ್ಲಿ ಬುಧವಾರ ಆರಂಭಗೊಂಡ 15 ದಿನಗಳ ಅಂತರರಾಷ್ಟ್ರೀಯ ಮಟ್ಟದ ವಿಜ್ಞಾನ ಒಲಿಂಪಿಯಾಡ್ ಸ್ಪರ್ಧೆ ಆಯ್ಕೆ ಮತ್ತು ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು.
ಅಂತರರಾಷ್ಟ್ರೀಯ ಜೂನಿಯರ್ ವಿಜ್ಞಾನ ಒಲಿಂಪಿಯಾಡ್ ಸ್ಪರ್ಧೆ ಅತ್ಯಂತ ಪ್ರತಿಷ್ಠಿತ ಸಮಾವೇಶ. ಈ ಸಮಾವೇಶಕ್ಕೆ ವಿಶ್ವದ 60ಕ್ಕೂ ಹೆಚ್ಚು ರಾಷ್ಟ್ರಗಳಿಂದ ನೂರಾರು ವಿದ್ಯಾರ್ಥಿಗಳು ಭಾಗವಹಿಸುತ್ತಾರೆ. ನಮ್ಮ ದೇಶದಿಂದ 2023ರಿಂದ ಈ ಸಮಾವೇಶಕ್ಕೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವ ಮತ್ತು ತರಬೇತಿ ನೀಡುವ ಹೊಣೆಗಾರಿಕೆಯನ್ನು ಮುಂಬೈನ ಹೋಮಿ ಬಾಬಾ ಸೆಂಟರ್ ಫಾರ್ ಸೈನ್ಸ್ ಎಜುಕೇಷನ್ ಸಹಯೋಗದಲ್ಲಿ ಭಾರತೀಯ ಭೌತವಿಜ್ಞಾನ ಶಿಕ್ಷಕರ ವೇದಿಕೆ ವಹಿಸಿಕೊಂಡಿದೆ ಎಂದು ತಿಳಿಸಿದರು.
ಸ್ಪರ್ಧೆಗಾಗಿ ವಿದ್ಯಾರ್ಥಿಗಳ ಆಯ್ಕೆಗೆ ನ್ಯಾಷನಲ್ ಸ್ಟ್ಯಾಂಡರ್ಡ್ ಎಕ್ಸಾಮಿನೇಷನ್ ಇನ್ ಜೂನಿಯರ್ ಸೈನ್ಸ್ ಸಂಸ್ಥೆಯು 2024ರ ನವೆಂಬರ್‌ನಲ್ಲಿ ಒಟ್ಟು 15 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಯನ್ನು ಆಯೋಜಿಸಿತ್ತು. ಈ ಪರೀಕ್ಷೆಯಲ್ಲಿ 50 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಆ ಪರೀಕ್ಷೆಯಲ್ಲಿ 500 ವಿದ್ಯಾರ್ಥಿಗಳನ್ನು ಮಾತ್ರ ಮುಂದಿನ ಹಂತಕ್ಕೆ ಆಯ್ಕೆ ಮಾಡಲಾಗಿತ್ತು. ಫೆಬ್ರುವರಿಯಲ್ಲಿ ಮತ್ತೊಂದು ಸುತ್ತಿನ ಪರೀಕ್ಷೆ ನಡೆಸಿ 500 ವಿದ್ಯಾರ್ಥಿಗಳಲ್ಲಿ 36 ವಿದ್ಯಾರ್ಥಿಗಳನ್ನು ಇನ್ನೊಂದು ಸುತ್ತಿಗೆ ಆಯ್ಕೆ ಮಾಡಲಾಗಿತ್ತು ಎಂದು ಮಾಹಿತಿ ನೀಡಿದರು.
‘36 ವಿದ್ಯಾರ್ಥಿಗಳಿಗೆ ಅಂತಿಮ ಹಂತದ ಸಿದ್ಧತೆ ಮತ್ತು ತರಬೇತಿಯನ್ನು ಕ್ಯಾಂಪಸ್‌ನಲ್ಲಿ ನೀಡಲಾಗುವುದು. 15 ದಿನಗಳವರೆಗೂ ಎಲ್ಲ ವಿದ್ಯಾರ್ಥಿಗಳಿಗೆ ಸೈದ್ಧಾಂತಿಕ ಮತ್ತು ಪ್ರಾಯೋಗಿಕ ತರಬೇತಿ ನೀಡಲಾಗುವುದು. ಈ 36 ವಿದ್ಯಾರ್ಥಿಗಳಲ್ಲಿ ಅಂತಿಮವಾಗಿ 6 ವಿದ್ಯಾರ್ಥಿಗಳನ್ನು ಮಾತ್ರ ಒಲಿಂಪಿಯಾಡ್‌ಗೆ ಆಯ್ಕೆ ಮಾಡಲಾಗುವುದ’ ಎಂದು ವಿವರಿಸಿದರು.
ವಿದ್ಯಾರ್ಥಿಗಳ ಉತ್ತಮ ಭವಿಷ್ಯವನ್ನು ರೂಪಿಸುವ ಈ ಕಾರ್ಯಕ್ರಮಕ್ಕೆ ಐಐಎಸ್ಸಿ ಆತಿಥ್ಯ ವಹಿಸಿದೆ. ಅದಕ್ಕಾಗಿ ಇಲ್ಲಿನ ಸುಸಜ್ಜಿತ ಪ್ರಯೋಗಾಲಯ ಮತ್ತು ಸಂಪನ್ಮೂಲ ವ್ಯಕ್ತಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ಕರ್ನಾಟಕದಿಂದಲೂ ಹೆಚ್ಚಿನ ವಿದ್ಯಾರ್ಥಿಗಳು ಇಂತಹ ವಿಶ್ವ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ಶಿಕ್ಷಕರು ಮತ್ತು ಪಾಲಕರು ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.
ಭಾರತೀಯ ಭೌತವಿಜ್ಞಾನ ಶಿಕ್ಷಕರ ವೇದಿಕೆಯ ಪ್ರಧಾನ ಕಾರ್ಯದರ್ಶಿ ಪ್ರೊ.ರೇಖಾ ಗೋರ್ಪಡೆ, ಸಂಚಾಲಕರಾದ ಬಿ.ಎಸ್. ಅಚ್ಯುತ, ಎಂ.ಕೆ.ರಾಘವೇಂದ್ರ, ಪ್ರೊ.ವಿನಾಯಕ ಕಟ್ದಾರೆ, ಎಸ್.ರೇಖಾ, ಪ್ರೊ.ಅರವಿಂದ, ಪ್ರೊ. ಶ್ರೀನಾಥ್, ಎಂಜಿನಿಯರ್ ಹೇಮಂತ್ ಮತ್ತು ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.