ADVERTISEMENT

ಜಾತ್ಯಾತೀತ ಮನೋಭಾವ ಬೆಳೆಸೋಣ: ಶಾಸಕ ಟಿ.ರಘುಮೂರ್ತಿ ಸಲಹೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2025, 7:31 IST
Last Updated 1 ಡಿಸೆಂಬರ್ 2025, 7:31 IST
ಚಿತ್ರದುರ್ಗದ ಪತ್ರಿಕಾ ಭವನದಲ್ಲಿ ಭಾನುವಾರ ಕರ್ನಾಟಕ ಪ್ರತಿಭಾ ಅಕಾಡೆಮಿ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಸಾಧಕರಿಗೆ ಸನ್ಮಾನ
ಚಿತ್ರದುರ್ಗದ ಪತ್ರಿಕಾ ಭವನದಲ್ಲಿ ಭಾನುವಾರ ಕರ್ನಾಟಕ ಪ್ರತಿಭಾ ಅಕಾಡೆಮಿ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಸಾಧಕರಿಗೆ ಸನ್ಮಾನ   

ಚಿತ್ರದುರ್ಗ: ‘ಪ್ರಸ್ತುತ ದಿನಗಳಲ್ಲಿ ಶಿಕ್ಷಣ ವ್ಯವಸ್ಥೆ ಬದಲಾಗಿದ್ದು, ಅಂಗೈಯಲ್ಲಿ ಪ್ರಪಂಚ ಎನ್ನುವಂತಾಗಿದೆ. ಆದ್ದರಿಂದ ಜಾತ್ಯಾತೀತ ಮನೋಭಾವದಿಂದ ಮಕ್ಕಳನ್ನು ಬೆಳೆಸುವ ಮೂಲಕ ಉತ್ತಮ ನಾಗರೀಕರನ್ನಾಗಿ ಮಾಡಬೇಕಿದೆ’ ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಕರ್ನಾಟಕ ಪ್ರತಿಭಾ ಅಕಾಡೆಮಿ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ‘ಅಂಬೇಡ್ಕರ್ ಆದರ್ಶಗಳನ್ನು ಪಾಲಿಸಿದರೆ ಅನೇಕ ಸಮಸ್ಯೆಗಳಿಗೆ ಉತ್ತರ ಸಿಗುತ್ತದೆ. ಜ್ಯಾತ್ಯಾತೀತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರು ಮುಂದಾಗಬೇಕು’ ಎಂದರು.

‘ಪ್ರತಿಯೊಬ್ಬ ಪೋಷಕರು ಸಹ ನಮ್ಮ ಮಕ್ಕಳು ಉನ್ನತ ಸ್ಥಾನಕ್ಕೆ ಏರಬೇಕೆಂಬುದು ದೊಡ್ಡ ಕನಸ್ಸ ಕಂಡಿರುತ್ತಾರೆ. ಪೋಷಕರ ಕನಸನ್ನು ನನಸು ಮಾಡುವ ದೊಡ್ಡ ಹೊಣೆಗಾರಿಕೆ ಮಕ್ಕಳ ಮೇಲಿದ್ದು, ಮಕ್ಕಳು ಸಹ ಉತ್ತಮ ಸಾಧನೆಯ ಕಡೆ ಹೆಜ್ಜೆ ಹಾಕಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ದೇಶದಲ್ಲಿ ಜಾತಿ ವ್ಯವಸ್ಥೆಯ ನಡುವೆ ಜಾತ್ಯತೀತ ಬೀಜವನ್ನು ಬಿತ್ತುವ ಕೆಲಸ ಮಾಡುತ್ತಿರುವ ಏಕೈಕ ವ್ಯಕ್ತಿ ಸತೀಶ್ ಜಾರಕಿಹೊಳಿ. ಮಾನವ ಬಂದುತ್ವ ವೇದಿಕೆ ಮೂಲಕ ರಾಜ್ಯದಲ್ಲಿ ತಮ್ಮ ಹೆಸರನ್ನು ಸಹ ಬಳಕೆ ಮಾಡದೇ ತೆರೆಯ ಹಿಂದೆಯೇ ಸಮ ಸಮಾಜ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಇಂತಹ ವ್ಯಕ್ತಿಗಳ ಸಂಖ್ಯೆ ರಾಜಕಾರಣದಲ್ಲಿ ತುಂಬಾ ವಿರಳ’ ಎಂದರು.

‘ಭವಿಷ್ಯದಲ್ಲಿ ಉತ್ತಮ ಸಮಾಜ ನಿರ್ಮಾಣಕ್ಕೆ ಮಕ್ಕಳ ಪಾತ್ರ ದೊಡ್ಡದಿದೆ. ಶಿಕ್ಷಣಕ್ಕಿರುವ ಶಕ್ತಿ ಬೇರೆ ಯಾವುದಕ್ಕೂ ಇಲ್ಲ. ಈ ಜಾತಿ ವ್ಯವಸ್ಥೆ ತೊಗಿಸುವ ಶಕ್ತಿ ಇರುವುದು ಶಿಕ್ಷಣಕ್ಕೆ ಮಾತ್ರ’ ಎಂದು ತಿಳಿಸಿದರು.

‘ಪ್ರತಿಭೆ ಮತ್ತು ಜಾತಿಗೆ ಯಾವುದೇ ಸಂಬಂಧವಿಲ್ಲ, ಅಂಬೇಡ್ಕರ್‌ ಹಾಕಿ ಕೊಟ್ಟ ಹಾದಿಯಲ್ಲಿ ನಾವು ನಡೆಯುತ್ತಿದ್ದೇವೆ. ನಾಳಿನ ಸಮಾಜಕ್ಕೆ ಆಸ್ತಿ ಎಂದರೆ ಅದು ಪ್ರತಿಭಾವಂತ ಮಕ್ಕಳು’ ಎಂದು ಮಾನವ ಬಂದುತ್ವ ವೇದಿಕೆ ರಾಜ್ಯ ಸಂಚಾಲಕ ಎ.ಬಿ. ರಾಮಚಂದ್ರಪ್ಪ ಹೇಳಿದರು.

‘ಉತ್ತಮ ತತ್ವಗಳನ್ನು ಅಳವಡಿಸಿಕೊಂಡು ಎಲ್ಲವನ್ನೂ ಮೀರಿ ನಡೆಯಬೇಕಿದೆ. ತಮ್ಮ ಸಮುದಾಯದವರನ್ನು ಮಾತ್ರ ಗುರುತಿಸಿ ಸನ್ಮಾನಿಸಿ ಪ್ರೋತ್ಸಾಹಿಸುವ ಕೆಲಸ ಬಿಟ್ಟು ಎಲ್ಲರನ್ನು ಗೌರವಿಸಿ, ಸನ್ಮಾನಿಸುವ ಕೆಲಸ ಆಗಬೇಕಿದೆ’ ಎಂದು ಸಾಹಿತಿ ಲೋಕೇಶ್‌ ಅಗಸನಕಟ್ಟೆ ತಿಳಿಸಿದರು.

‘ಮಾನವ ಬಂದುತ್ವ ವೇದಿಕೆ ಮೂಲಕ ಎಲ್ಲಾರೊಳಗೆ ಬಂದುತ್ವ ಸಾಧಿಸುವ ಮೂಲಕ ಕಲ್ಯಾಣ ಕರ್ನಾಟಕ ಮಾಡಬಹುದಾಗಿದೆ. ರಾಮ ರಾಜ್ಯ ಮಾಡಲು ಸಾಧ್ಯವಾಗದಿದ್ದರು ಸಹ ಕಲ್ಯಾಣ ಭಾರತ ಸ್ಥಾಪಿಸಬೇಕಾಗಿದೆ. ನಮಗೆಲ್ಲ ಪ್ರಧಾನವಾಗಿ ಸಮಾನತೆ ಮತ್ತು ಸಹೋದರತ್ವ ಅತ್ಯಗತ್ಯವಾಗಿ ಬೇಕಾಗಿದೆ. ಈ ಎರಡರಿಂದ ಸ್ವಾತಂತ್ರ್ಯ ಪಡೆಯಲು ಸಾಧ್ಯ’ ಎಂದರು.

‘ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಗುರುತಿಸಿ ಪ್ರೋತ್ಸಾಹ ನೀಡುವುದರಿಂದ ಮಕ್ಕಳಿಗೆ ಪ್ರೇರಣೆ ನೀಡಿದಂತೆ ಆಗುತ್ತದೆ. ವಿಶೇಷವಾಗಿ ಪ್ರತಿಭಾ ಅಕಾಡೆಮಿಯಿಂದ ಎಲ್ಲಾ ವರ್ಗದ ಮಕ್ಕಳನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ಮಾಡುತ್ತಿರುವುದು ಉತ್ತಮ ಬೆಳವಣಿಗೆ’ ಎಂದು ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಪಿ.ರಘು ತಿಳಿಸಿದರು.

ಜಿಲ್ಲಾ ಸಂಚಾಲಕ ಪಿ. ಬಸವರಾಜ್‌, ಮುಖಂಡರಾದ ಯೋಗೇಶ್‌ ಬಾಬು, ಬಿ.ಟಿ. ಜಗದೀಶ್‌, ಎಚ್‌.ಅಂಜಿನಪ್ಪ, ಬಿ.ಮಂಜುನಾಥ್‌, ಸಯ್ಯದ್‌ ಖುದ್ದೂಸ್‌, ನಾಗರಾಜ್‌ ಇದ್ದರು.

ರಾಜಕಾರಣದಲ್ಲಿ ಪ್ರಚಾರ ಅಗತ್ಯ ಆದರೆ ಪ್ರಚಾರ ಬಯಸದೆ ಕೆಲಸ ಮಾಡುವ ಒಬ್ಬ ರಾಜಕಾರಣಿ ದೇಶದಲ್ಲಿ ಇದ್ದರೆ ಅದು ಸತೀಶ್‌ ಜಾರಕಿಹೊಳಿ ಅವರು ಎಂದರೆ ತಪ್ಪಗಲಾರದು
ಟಿ.ರಘುಮೂರ್ತಿ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.