
ಸಿರಿಗೆರೆ: ಆದಿಚುಂಚನಗಿರಿ ಮಹಾಸಂಸ್ಥಾನದ ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಚಿತ್ರದುರ್ಗದ ಮಾದಾರ ಚೆನ್ನಯ್ಯ ಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಶ್ರೀಗಳು ತರಳಬಾಳು ಮಠದ ಶಾಂತಿವನಕ್ಕೆ ಶುಕ್ರವಾರ ಭೇಟಿ ನೀಡಿ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರನ್ನು ಭೇಟಿ ಮಾಡಿದರು.
ಶಾಂತಿವನಕ್ಕೆ ಈ ಇಬ್ಬರು ಶ್ರೀಗಳು ಭೇಟಿ ನೀಡಿದ್ದು ಇದೇ ಮೊದಲು. ಆದಿಚುಂಚನಗಿರಿ ಮಠದ ಹಿರಿಯ ಗುರುಗಳಾಗಿದ್ದ ಬಾಲಗಂಗಾಧರನಾಥ ಸ್ವಾಮೀಜಿ ಮತ್ತು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಧ್ಯೆ ನಿಕಟ ಸಂಕರ್ಪ ಇತ್ತು. ಅವರು ಹಲವು ಬಾರಿ ತರಳಬಾಳು ಮಠಕ್ಕೆ ಭೇಟಿ ನೀಡಿದ್ದರು.
ಚಿತ್ರದುರ್ಗದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಹಲವು ಬಾರಿ ಸಿರಿಗೆರೆ ಮತ್ತು ಮಠದ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರೂ ಶಾಂತಿವನಕ್ಕೆ ಭೇಟಿ ನೀಡಿದ್ದು ಇದೇ ಮೊದಲು.
ಈ ಸಂದರ್ಭದಲ್ಲಿ ತರಳಬಾಳು ಶ್ರೀಗಳು ನಿರ್ಮಿಸಿರುವ ಕಿರು ಜಲಾಶಯದಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹವಾಗಿ ಈ ಭಾಗದ ಕೃಷಿಕರಿಗೆ ನೆರವಾಗುತ್ತಿರುವುದನ್ನು ಸ್ವಾಮೀಜಿಗಳು ಮುಕ್ತಕಂಠದಿಂದ ಪ್ರಶಂಸಿಸಿದರು. ಜಲಾಶಯದ ಮೇಲ್ಸೇತುವೆಯಲ್ಲಿ ಒಟ್ಟಿಗೆ ಕುಳಿತು ಮಾತುಕತೆ ನಡೆಸಿದರು. ಕೆಲಹೊತ್ತು ಕೃಷಿ ಚಟುವಟಿಕೆಗಳನ್ನು ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು. ಶಾಂತಿವನದ ಪ್ರಾಕೃತಿಕ ಸೊಬಗಿಗೆ ಮಾರುಹೋದರು.
ಭೇಟಿಯ ನಂತರ ತರಳಬಾಳು ಶ್ರೀಗಳು ಹಾಗೂ ನಿರ್ಮಲಾನಂದನಾಥ ಶ್ರೀಗಳು ಒಂದೇ ಕಾರಿನಲ್ಲಿ ತೆರಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.