ADVERTISEMENT

ಜನಪರವಾಗಿದ್ದು ಜನಪ್ರಿಯತೆ ದುಡಿಸಿಕೊಂಡ ವೇಣು

ಕಾದಂಬರಿಕಾರ ಬಿ.ಎಲ್.ವೇಣು ಸಾಹಿತ್ಯ ವಿಚಾರ ಸಂಕಿರಣದಲ್ಲಿ ಚಿಂತಕ‌ ಬಂಜಗೆರೆ ಜಯಪ್ರಕಾಶ್ ಅಭಿಮತ

​ಪ್ರಜಾವಾಣಿ ವಾರ್ತೆ
Published 30 ಜನವರಿ 2023, 5:27 IST
Last Updated 30 ಜನವರಿ 2023, 5:27 IST
ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ವಿಚಾರ ಸಂಕಿರಣವನ್ನು ಚಿಂತಕ ಬಂಜಗೆರೆ ಜಯಪ್ರಕಾಶ್‌ ಉದ್ಘಾಟಿಸಿದರು. ಬಿ.ಎಲ್‌. ವೇಣು, ಪತ್ನಿ ನಾಗವೇಣಿ, ಜಾನಪದ ತಜ್ಞ ಮೀರಸಾಬಿಹಳ್ಳಿ ಶಿವಣ್ಣ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಾ.ದೊಡ್ಡಮಲ್ಲಯ್ಯ ಇದ್ದರು.
ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ವಿಚಾರ ಸಂಕಿರಣವನ್ನು ಚಿಂತಕ ಬಂಜಗೆರೆ ಜಯಪ್ರಕಾಶ್‌ ಉದ್ಘಾಟಿಸಿದರು. ಬಿ.ಎಲ್‌. ವೇಣು, ಪತ್ನಿ ನಾಗವೇಣಿ, ಜಾನಪದ ತಜ್ಞ ಮೀರಸಾಬಿಹಳ್ಳಿ ಶಿವಣ್ಣ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಾ.ದೊಡ್ಡಮಲ್ಲಯ್ಯ ಇದ್ದರು.   

ಚಿತ್ರದುರ್ಗ: ‘ಜನಪ್ರಿಯ ಸೂತ್ರಕ್ಕೆ ಕಟ್ಟುಬಿದ್ದು ಯಶಸ್ಸು ಕಂಡಿರುವ ಅನೇಕ ಸಾಹಿತಿಗಳು ಕನ್ನಡದಲ್ಲಿದ್ದಾರೆ. ಜನಪರ ನಿಲುವು ಹೊಂದಿದ ಸಾಹಿತಿಯೊಬ್ಬರು ಜನಪ್ರಿಯತೆ ಗಳಿಸುವುದು ಸುಲಭವಲ್ಲ. ಜನಪ್ರಿಯತೆ ಹಾಗೂ ಜನಪರ ನಿಲುವನ್ನು ಸಮರ್ಥವಾಗಿ ನಿಭಾಯಿಸಿ ಯಶಸ್ಸು ಕಂಡವರು ಬಿ.ಎಲ್‌.ವೇಣು’ ಎಂದು ಚಿಂತಕ ಬಂಜಗೆರೆ ಜಯಪ್ರಕಾಶ್ ವಿಶ್ಲೇಷಣೆ ಮಾಡಿದರು.

ಇಲ್ಲಿನ ತರಾಸು ರಂಗಮಂದಿರದಲ್ಲಿ ಅಭಿರುಚಿ ಸಾಹಿತ್ಯ ‌ಮತ್ತು ಸಾಂಸ್ಕೃತಿಕ ವೇದಿಕೆ ಮತ್ತು ಬಯಲುಸೀಮೆ ಕಲಾ ಬಳಗದ ವತಿಯಿಂದ ಕಾದಂಬರಿಕಾರ ಬಿ.ಎಲ್.ವೇಣು ಅವರ ಸಾಹಿತ್ಯದ ಕುರಿತು ಭಾನುವಾರ ಹಮ್ಮಿಕೊಂಡಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

‘ಹಠಯೋಗ ಇಲ್ಲದ ಹೊರತು ವೇಣು ಯಶಸ್ವಿ, ಜನಪ್ರಿಯ ಹಾಗೂ ಜನಪರ ಸಾಹಿತಿಯಾಗಿ ರೂಪುಗೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಜನಪರ ನಿಲುವು ಹೊಂದಿದ ಸಾಹಿತಿ ಜನಪ್ರಿಯತೆ ಪಡೆಯುವುದು ಸುಲಭ ಸಾಧ್ಯವೂ ಅಲ್ಲ. ನಂಬಿದ ನಿಲುವು, ಜನಪರ ಕಾಳಜಿಯನ್ನು ಜನಪ್ರಿಯ ಕಾದಂಬರಿಯಲ್ಲಿ ತಂದಿರುವ ರೀತಿ ಮಾದರಿಯಾಗಿದೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ವೇಣು ಅವರ ಸಾಹಿತ್ಯದ ವ್ಯಾಪ್ತಿ ಗಮನಿಸಿದರೆ ಶೈಕ್ಷಣಿಕ ವಲಯ ಅವರ ಕಡೆಗೆ ಹರಿಸಿದ ಗಮನ ಕಡಿಮೆ. ಕಥಾಸಂಕಲನ, ನಾಟಕ, ಸಿನಿಮಾ ಸಾಹಿತ್ಯ ಸೇರಿ ವಿಸ್ತಾರ ಕ್ಷೇತ್ರದಲ್ಲಿ ಕೆಲಸ ಮಾಡಿರುವ ವೇಣು ನಿಜವಾಗಿಯೂ ನಾಡಿನ ಹೆಮ್ಮೆ. ಬಿ.ಎಲ್.ವೇಣು ಅವರು ಸಾಹಿತ್ಯ ಕೃಷಿಕ. ಅತ್ಯಂತ ಪರಿಶ್ರಮದಿಂದ ಪ್ರತಿಭೆ ಬಳಸಿ ಹಲವು ಕಾರಣಗಳಿಗೆ ಹೆಮ್ಮೆಗೆ ಪಾತ್ರರಾಗಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಸಾಮಾನ್ಯ ಹಿನ್ನೆಲೆಯಲ್ಲಿ ಬೆಳೆದ ವೇಣು ಅವರ ದಾರಿ ಸುಗಮವಾಗಿ ಇರಲಿಲ್ಲ. ಸಿನಿಮಾ ರಂಗದಲ್ಲಿ ನಟ ರಾಜಕುಮಾರ್ ಪಟ್ಟಿರುವ ಕಷ್ಟವನ್ನು ಸಾಹಿತ್ಯ ಕ್ಷೇತ್ರದಲ್ಲಿ ವೇಣು ಅವರು ಪಟ್ಟಿದ್ದಾರೆ. ಆದರೆ ಈಗ ಸಾಹಿತ್ಯ, ಸಾಂಸ್ಕೃತಿಕ ಕಲಾಕ್ಷೇತ್ರ ಒಂದು ವಲಯಕ್ಕೆ ಸೀಮಿತ ಆಗಿದೆ. ಮೇಲ್ವರ್ಗ, ಹಣವಂತರು ಹಾಗೂ ವಿದ್ವತ್ತು ಹೊಂದಿದ ಕೌಟುಂಬಿಕ ಹಿನ್ನೆಲೆಯಿಂದ ಬಂದವರಿಗೆ ಇಂತಹ ಸಾಧನೆ ಕಷ್ಟವಲ್ಲ. ತಳವರ್ಗದಿಂದ ಬಂದ ಸಾಹಿತಿಗಳ ಕಾರ್ಯ ಅಷ್ಟು ಸುಲಭವಲ್ಲ. ಕುವೆಂಪು ಅವರ ಸಾಹಿತ್ಯಕ್ಕೆ ಆರಂಭದಲ್ಲಿ ಬಂದ ಪ್ರತಿಕ್ರಿಯೆ ತೃಪ್ತಿಕರವಾಗಿ ಇರಲಿಲ್ಲ’ ಎಂದು ವಿವರಿಸಿದರು.

‘ವೇಣು ಅವರು ಬಲಪಂಥೀಯ ಆಗಿದ್ದರೆ ವಿಧಾನ ಪರಿಷತ್ ಸದಸ್ಯ ಆಗಿರುತ್ತಿದ್ದರು. ಬಡವನ ಸ್ವಾಭಿಮಾನ, ಕೋಮುಸೌಹಾರ್ದ, ಪ್ರೇಮ, ಜಾತಿಯ ಬಗ್ಗೆ ಬರೆದ ವೇಣು ಅವರು ಅಧಿಕಾರ ಕೇಂದ್ರದಿಂದ ದೂರವೇ ಉಳಿದರು. ಪ್ರೇಮ ಕಾದಂಬರಿ ಪ್ರಕಾರದಲ್ಲಿ ವೇಣು ಅವರ ಸಾಹಿತ್ಯ ಅಗ್ರ ಸ್ಥಾನದಲ್ಲಿದೆ. ಹಲವು ವರ್ಷಗಳ ಕಾಲ ಇವರ ಕಾದಂಬರಿ ಜನಸಮುದಾಯ ತಲುಪಿದೆ. ತರಾಸು, ಅನಕೃ ಅವರಂತೆ ಓದುವಂತೆ ಬರೆದವರು ಬಿ.ಎಲ್‌.ವೇಣು’ ಎಂದರು.

‘ಜನಪ್ರಿಯ ಸಾಹಿತಿ ಜನಪರವಾಗಿ ಇದ್ದರೆ ಹೆಚ್ಚು ಉಪಯುಕ್ತ. ಮದಕರಿ ನಾಯಕರ ಹೋರಾಟದಲ್ಲಿ ಜನಪ್ರಿಯ, ರಂಜನೀಯ ಅಂಶಗಳು ಸಾಕಷ್ಟು ಸಿಗುತ್ತವೆ. ಧರ್ಮ, ಜಾತಿ ಲೇಪ ಮಾಡದೇ ಮಾನವೀಯ ಹೃದಯವಂತಿಕೆ ತೋರಿದ್ದು ವೇಣು. ಅವರ ಆಶಯ ಮತ್ತು ಹೂರಣ ಜನಪರವಾಗಿದೆ. ಅಸಹಿಷ್ಣುತೆ, ದಿಕ್ಕು ತಪ್ಪಿಸುವ ಮಾದರಿ ಅವರ ಸಾಹಿತ್ಯದಲ್ಲಿ ಕಾಣುವುದಿಲ್ಲ’ ಎಂದು ಹೇಳಿದರು.

‘ವೇಣು ಅವರನ್ನು ಭೇಟಿ ಮಾಡಿ ಪರಿಚಯ ಮಾಡಿಕೊಳ್ಳುವ ಉದ್ದೇಶದಿಂದ ವಿದ್ಯಾರ್ಥಿ ದಿಸೆಯಿಂದ ಕಾದಿದ್ದೇನೆ. ಸಾಹಿತ್ಯ ಮತ್ತು ಸಿನಿಮಾ ಕ್ಷೇತ್ರದಲ್ಲಿ ಆಸಕ್ತಿ ಇದ್ದಿದ್ದರಿಂದ ಅವರ ಮೇಲೆ ವಿಶೇಷ ಒಲವು ಹೊಂದಿದ್ದೆ. ವೇಣು ಅವರ ಅಭಿಮಾನಿಗಳು ಸೇರಿ ಟ್ರಸ್ಟ್ ರಚಿಸಿದರೆ ಹೆಚ್ಚು ಅನುಕೂಲ ಆಗುತ್ತದೆ. ಇದರಿಂದ ವೇಣು ಅವರ ಸಾಹಿತ್ಯ ಹಾಗೂ ಹೊಸ ಸಾಹಿತಿಗಳಿಗೆ ಇನ್ನಷ್ಟು ಪ್ರೋತ್ಸಾಹ ಸಿಗುತ್ತದೆ’ ಎಂದು ಸಲಹೆ ನೀಡಿದರು.

ಕಾದಂಬರಿಕಾರ ಬಿ.ಎಲ್‌.ವೇಣು, ಪತ್ನಿ ನಾಗವೇಣಿ, ಸಾಹಿತಿ ಗೋವಿಂದಪ್ಪ, ನಾಗರಾಜ್ ಬೆಳಗಟ್ಟ ಇದ್ದರು.

‘ತರಾಸು ಸಮರ್ಥ ಉತ್ತರಾಧಿಕಾರಿ’
‘ಬಿ.ಎಲ್‌.ವೇಣು ಅವರು ತರಾಸು ಪರಂಪರೆಯ ಐತಿಹಾಸಿಕ ಕಾದಂಬರಿಗಳ ಸಮರ್ಥ ಉತ್ತರಾಧಿಕಾರಿ’ ಎಂದು ಜಾನಪದ ತಜ್ಞ ಮೀರಸಾಬಿಹಳ್ಳಿ ಶಿವಣ್ಣ ಅಭಿಪ್ರಾಯಪಟ್ಟರು.

‘ಮಠಗಳು ದೇಶಕ್ಕೆ ಶಾಪ’ ಎಂಬ ಕೃತಿ ಅವರ ಜನಪರ ನಿಲುವಿಗೆ ಸಾಕ್ಷಿ. ಸಿನಿಮಾ ರಂಗದಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದಾರೆ. ಜನಪ್ರಿಯತೆ ಮೂಲಕ ಸಾಹಿತ್ಯಕ್ಕೆ ಮೇರು ಘನತೆ ತಂದವರಲ್ಲಿ ಇವರ ಪಾತ್ರ ದೊಡ್ಡದು. ಅನಕೃ ಸೃಷ್ಟಿಸಿದ ಓದುಗ ವಲಯ ಮುಂದುವರಿಸಿಕೊಂಡು ಹೋಗುತ್ತಿರುವವರು ವೇಣು. ಅವರು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಯೋಗ್ಯರಾಗಿದ್ದಾರೆ’ ಎಂದರು.

***

ಸಮಾಜ ತಿದ್ದುವ ಅನಧಿಕೃತ ಶಾಸನಕರ್ತ ಸಾಹಿತಿ. ಇಂತಹ ಕಾರ್ಯವನ್ನು ನಿರಂತರವಾಗಿ ಮಾಡುತ್ತಾ ಬಂದವರು ಬಿ.ಎಲ್.ವೇಣು. ಅವರ ಸಾಹಿತ್ಯ ಸಮಾಜಮುಖಿಯಾಗಿದೆ.
ಡಾ.ದೊಡ್ಡಮಲ್ಲಯ್ಯ, ಮಾಜಿ ಅಧ್ಯಕ್ಷ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.