ADVERTISEMENT

ವೃದ್ಧರಿಗೆ ಆಸ್ತಿ ಪುನರ್‌ವಿಮರ್ಶೆ ಮಾಡುವ ಹಕ್ಕಿದೆ: ನ್ಯಾಯಾಧೀಶ ಉಮೇಶ್ ಸಲಹೆ

ಹಿರಿಯ ನಾಗರಿಕರ ದಿನಾಚರಣೆಯಲ್ಲಿ ನ್ಯಾಯಾಧೀಶ ಉಮೇಶ್ ಸಲಹೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2023, 16:33 IST
Last Updated 6 ಅಕ್ಟೋಬರ್ 2023, 16:33 IST
ಹೊಳಲ್ಕೆರೆಯಲ್ಲಿ ಶುಕ್ರವಾರ ನಡೆದ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಉಮೇಶ್ ಹಿರಿಯ ನಾಗರಿಕರನ್ನು ಸನ್ಮಾನಿಸಿದರು. ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ನಿರುಪಮಾ ರೇಣಕಪ್ಪ ಢಂಗ, ಎ.ಸಿ.ಗಂಗಾಧರಪ್ಪ ಇದ್ದರು.
ಹೊಳಲ್ಕೆರೆಯಲ್ಲಿ ಶುಕ್ರವಾರ ನಡೆದ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಉಮೇಶ್ ಹಿರಿಯ ನಾಗರಿಕರನ್ನು ಸನ್ಮಾನಿಸಿದರು. ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ನಿರುಪಮಾ ರೇಣಕಪ್ಪ ಢಂಗ, ಎ.ಸಿ.ಗಂಗಾಧರಪ್ಪ ಇದ್ದರು.   

ಹೊಳಲ್ಕೆರೆ: ಹಿರಿಯರಿಗೆ ತಮ್ಮ ಆಸ್ತಿಗಳನ್ನು ಪುನರ್‌ವಿಮರ್ಶೆ ಮಾಡುವ ಹಕ್ಕಿದೆ ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಉಮೇಶ್ ಸಲಹೆ ನೀಡಿದರು.

ಪಟ್ಟಣದಲ್ಲಿ ಶುಕ್ರವಾರ ನಿವೃತ್ತ ನೌಕರರ ಸಂಘ ಹಾಗೂ ವಕೀಲರ ಸಂಘದ ಆಶ್ರಯದಲ್ಲಿ ಏರ್ಪಡಿಸಿದ್ದ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಹಿರಿಯ ನಾಗರಿಕರು ತಾವು ಸಂಪಾಧಿಸಿದ ಆಸ್ತಿಯನ್ನು ಮಕ್ಕಳು ಅಥವಾ ಸಂಬಂಧಿಕರಿಗೆ ಪರಭಾರೆ ಮಾಡಿರುತ್ತಾರೆ. ಹೇಗೂ ಆಸ್ತಿ ನನ್ನ ಹೆಸರಿಗೆ ಮಾಡಿಸಿಕೊಂಡಿದ್ದೇನೆ ಎಂದು ಮಕ್ಕಳು ವಯಸ್ಸಾದ ತಂದೆ, ತಾಯಿಯರನ್ನು ಸರಿಯಾಗಿ ಆರೈಕೆ ಮಾಡದೆ ಇರುವ ಉದಾಹರಣೆಗಳೂ ಇವೆ. ಇಂತಹ ಸಂದರ್ಭದಲ್ಲಿ ಹಿರಿಯರು ತಾವು ಪರಭಾರೆ ಮಾಡಿದ ಆಸ್ತಿಯನ್ನು ಪನರ್‌ವಿಮರ್ಶಿಸಿ ವಾಪಸ್ ಪಡೆಯಲು ಕಾನೂನಿನಲ್ಲಿ ಅವಕಾಶಗಳಿವೆ. ಹಿರಿಯರು ಕಾನೂನಿನ ನೆರವು ಬೇಕಾಗಿದ್ದಲ್ಲಿ ಕಾನೂನು ಸೇವಾ ಪ್ರಾಧಿಕಾರವನ್ನು ಸಂಪರ್ಕಿಸಿ ಸಲಹೆ ಪಡೆಯಬಹುದು’ ಎಂದು ಹೇಳಿದರು.

ADVERTISEMENT

‘ನಮ್ಮ ಸಂಘದಲ್ಲಿ 800 ಸದಸ್ಯರಿದ್ದು, ಸಂಘದ ಚಟುವಟಿಕೆಗಳು ಸಕ್ರಿಯವಾಗಿ ನಡೆಯುತ್ತಿವೆ. ಹಿಂದೆ ಸರ್ಕಾರಿ ನೌಕರಿಯಿಂದ ನಿವೃತ್ತರಾದ ನಂತರ ಪಿಂಚಣಿ ಕೊಡುತ್ತಿರಲಿಲ್ಲ. ನಿವೃತ್ತಿ ಜೀವನದಲ್ಲಿ ಅಭದ್ರತೆ ಇತ್ತು. ಆಗ ಸುಪ್ರಿಂ ಕೋರ್ಟ್ ನ್ಯಾಯಾಧೀಶ ಬರೂಚಾ ಸಮಿತಿಯು ‘ಜೀವಮಾನವಿಡೀ ಸರ್ಕಾರಕ್ಕೆ ದುಡಿದಿರುವ ನೌಕರರು ನಿವೃತ್ತಿಯ ನಂತರ ಪಿಂಚಣಿ ಪಡೆಯಲು ಅರ್ಹರು’ ಎಂಬ ಸಲಹೆ ನೀಡಿತು. ಇದರ ಫಲವಾಗಿ ಇದುವರೆಗೂ ನಿವೃತ್ತ ನೌಕರರು ಪಿಂಚಣಿ ಪಡೆಯುತ್ತಿದ್ದಾರೆ’ ಎಂದು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎ.ಸಿ.ಗಂಗಾಧರಪ್ಪ ಸ್ಮರಿಸಿದರು.

ಹಿರಿಯ ನಾಗರಿಕರಾದ ಟಿ.ನುಲೆನೂರು ಗ್ರಾಮದ ಜಿ.ತಿಪ್ಪೇರುದ್ರಪ್ಪ ಹಾಗೂ ಮಲ್ಲಾಡಿಹಳ್ಳಿಯ ಜಯಪ್ಪ ಅವರನ್ನು ಸನ್ಮಾನಿಸಲಾಯಿತು.

ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ನಿರುಪಮಾ ರೇಣಕಪ್ಪ ಢಂಗ, ವಕೀಲರ ಸಂಘದ ಅಧ್ಯಕ್ಷ ಎಲ್.ಕೆ.ಶಿವಕುಮಾರ್, ಉಪಾಧ್ಯಕ್ಷ ಎಚ್.ರಮೇಶ್, ವಕೀಲರಾದ ಜಿ.ಇ.ರಂಗಸ್ವಾಮಿ, ಎಸ್.ವೇದಮೂರ್ತಿ, ನಿವೃತ್ತ ನೌಕರರ ಸಂಘದ ಮಲ್ಲೇಶಪ್ಪ, ಶಿವಲಿಂಗಪ್ಪ, ಡಿ.ಗೋಪಾಲಪ್ಪ, ದಯಾನಂದ, ಎಚ್.ಬಸವರಾಜಪ್ಪ, ನಾಗರಾಜ ರಾವ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.