ಚಿತ್ರದುರ್ಗ: ‘ಕೇವಲ 32 ವರ್ಷ ಬದುಕಿದ್ದ ಆದಿಗುರು ಶಂಕರಾಚಾರ್ಯರು ಅಲ್ಪಕಾಲದಲ್ಲಿಯೇ ಮಹೋನ್ನತ ಸಾಧನೆ ಮಾಡಿದರು. ಭಾರತೀಯ ತತ್ವಶಾಸ್ತ್ರ ಹಾಗೂ ದರ್ಶನ ಶಾಸ್ತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ತಿಳಿಸಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಶಂಕರಾಚಾರ್ಯರ ಜಯಂತಿಯಲ್ಲಿ ಮಾತನಾಡಿದ ಅವರು, ‘ಇವರ ಅದ್ವೈತ ಸಿದ್ದಾಂತ ಆತ್ಮ ಹಾಗೂ ಪರಮಾತ್ಮ ಎರಡು ಒಂದೇ ಎಂದು ಸಾರಿದೆ. ನಮ್ಮನ್ನು ನಾವು ಅರಿತರೆ, ಬೇರೆಯವರನ್ನು ಅರ್ಥೈಸಿಕೊಳ್ಳಬಹುದು ಎಂಬ ಸರಳ ಸತ್ಯವನ್ನು ತಿಳಿಸಿದ್ದಾರೆ’ ಎಂದರು.
‘ಬಾಲ್ಯದಲ್ಲಿಯೇ ಶಂಕರಚಾರ್ಯರು ಅದ್ಬುತ ಜ್ಞಾನ ಸಂಪಾದಿಸಿದ್ದರು. ಏಳನೇ ಶತಮಾನದಲ್ಲೇ ಅಖಂಡ ಭಾರತದಲ್ಲಿ ಸಂಚರಿಸಿ, ನಾಲ್ಕು ಕಡೆಗಳಲ್ಲಿ ಪೀಠ ಸ್ಥಾಪಿಸಿದರು. ಶೃಂಗೇರಿಯಲ್ಲಿ ಶಂಕರಾಚಾರ್ಯರು ಸ್ಥಾಪಿಸಿದ ಪೀಠ ಇಂದಿಗೂ ಜ್ಞಾನ ಮಹಿಮೆ ಸಾರುತ್ತಿದೆ. ನಾವೆಲ್ಲರು ಧರ್ಮ ಜಾತಿ ಸಂಕೋಲೆಗಳನ್ನು ಮೀರಿ, ಅಲ್ಪ ಮಾನವರಿಂದ ವಿಶ್ವಮಾನರಾಗಬೇಕು’ ಎಂದು ಹೇಳಿದರು.
‘ಶಂಕರಾಚಾರ್ಯರ ಜನ್ಮದಿನವನ್ನು ಭಾರತದಲ್ಲಿ ತತ್ವಜ್ಞಾನಿಗಳ ದಿನ ಎಂದು ಆಚರಿಸಲಾಗುತ್ತಿದೆ. ರಾಜ್ಯ ಸರ್ಕಾರದಿಂದ ಜಯಂತಿ ಆಚರಿಸುತ್ತಿರುವುದು ಸಂತಸದ ಸಂಗತಿ. ಅದ್ವೈತ ಸಿದ್ದಾಂತವನ್ನು ಅರ್ಥೈಸಿಕೊಳ್ಳುವುದು ಕಷ್ಟದ ವಿಷಯವಾಗಿದೆ’ ಎಂದು ಬ್ರಾಹ್ಮಣ ಸಂಘ ಜಿಲ್ಲಾ ಘಟಕದ ನಿರ್ದೇಶಕ ಎಸ್.ಸತೀಶ್ ತಿಳಿಸಿದರು.
‘ಸ್ವಾಮಿ ವಿವೇಕಾನಂದರು, ಶಂಕರಾಚಾರ್ಯರು ಬಗ್ಗೆ ತಳಸ್ಪರ್ಶಿಯಾಗಿ ಅಧ್ಯಯನ ಮಾಡದ ಹೊರತು ಭಾರತದ ಇತಿಹಾಸವನ್ನು ಅರಿಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಹಿಂದೂ ಸನಾತನ ಧರ್ಮ ರಕ್ಷಣೆಗೆ ಶಂಕರಾಚಾರ್ಯರು ಕೊಡುಗೆ ಅಪಾರವಾಗಿದೆ. ಒಂದು ಇಡೀ ವಿಶ್ವವಿದ್ಯಾಲಯ ಮಾಡಬಹುದಾದ ಕಾರ್ಯವನ್ನು ಶಂಕರಾಚಾರ್ಯರು ಒಬ್ಬರೇ ಮಾಡಿದ್ದಾರೆ. ಅವರು ಬರೆದ ಭಾಷ್ಯಗಳು, ಗ್ರಂಥಗಳನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿದರೆ ಮಾತ್ರ ಶಂಕರ ತತ್ವ ಅರಿಯಬಹುದು’ ಎಂದರು.
ಬ್ರಾಹ್ಮಣರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಎಸ್.ಮಂಜುನಾಥ, ಕಾರ್ಯದರ್ಶಿ ಪ್ರಾಣೇಶ್ ರಾವ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಣುಪ್ರಸಾದ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಂ.ಗುರುನಾಥ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.