ADVERTISEMENT

ಶರಣ ಸಂಸ್ಕೃತಿಯಲ್ಲಿ ಯುವಜನೋತ್ಸವ: ಬಸವಕುಮಾರ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 6:38 IST
Last Updated 22 ಆಗಸ್ಟ್ 2025, 6:38 IST
ಚಿತ್ರದುರ್ಗದ ಎಸ್‌ಜೆಎಂ ದಂತ ವೈದ್ಯಕೀಯ ವಿದ್ಯಾಲಯದ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಯುವಜನೋತ್ಸವ ಪೂರ್ವಭಾವಿ ಸಭೆಯಲ್ಲಿ ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಬಸವಕುಮಾರ ಸ್ವಾಮೀಜಿ ಮಾತನಾಡಿದರು
ಚಿತ್ರದುರ್ಗದ ಎಸ್‌ಜೆಎಂ ದಂತ ವೈದ್ಯಕೀಯ ವಿದ್ಯಾಲಯದ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಯುವಜನೋತ್ಸವ ಪೂರ್ವಭಾವಿ ಸಭೆಯಲ್ಲಿ ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಬಸವಕುಮಾರ ಸ್ವಾಮೀಜಿ ಮಾತನಾಡಿದರು   

ಚಿತ್ರದುರ್ಗ: ‘ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಶಿಕ್ಷಣದ ನಂತರ ವೃತ್ತಿ ಬದುಕಿನ ಸವಾಲು ಎದುರಿಸುತ್ತಿದ್ದಾರೆ. ಇದನ್ನು ಮನಗಂಡು ಈ ಬಾರಿ ಶರಣ ಸಂಸ್ಕೃತಿ ಉತ್ಸವದಲ್ಲಿ ಯುವಜನೋತ್ಸವದ ಮೂಲಕ ಪರಿಹಾರದ ಮಾರ್ಗ ತೋರುವ ಕೆಲಸಕ್ಕೆ ಮುಂದಾಗುತ್ತಿದ್ದೇವೆ’ ಎಂದು ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಬಸವಕುಮಾರ ಸ್ವಾಮೀಜಿ ತಿಳಿಸಿದರು.

ನಗರದ ಎಸ್‌ಜೆಎಂ ದಂತ ವೈದ್ಯಕೀಯ ವಿದ್ಯಾಲಯದ ಸಭಾಂಗಣದಲ್ಲಿ ಗುರುವಾರ ಶರಣ ಸಂಸ್ಕೃತಿ ಉತ್ಸವ-2025ರ ಅಂಗವಾಗಿ ಯುವಜನೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ‘ಮಾಹಿತಿ ಸ್ಫೋಟದಿಂದಾಗಿ ವಿಶಾಲ ಜ್ಞಾನವು ನೂರಾರು ಆಯ್ಕೆಗಳನ್ನು ಯುವಸಮೂಹದ ಎದುರಿಗಿಟ್ಟಿದೆ. ಹೀಗಾಗಿ ಪದವಿ ಪೂರೈಸಿದ ಬಳಿಕ ವಿದ್ಯಾರ್ಥಿಗಳಲ್ಲಿ ಭವಿಷ್ಯದ ವೃತ್ತಿ ಆಯ್ಕೆ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳುವುದು ತುಸು ಕಷ್ಟದ ಕೆಲಸವಾಗುತ್ತಿದೆ’ ಎಂದರು.

‘ಆಯ್ಕೆಗಳು ಎದುರಾದಾಗ ಸವಾಲುಗಳು ಹೆಚ್ಚಾಗುತ್ತವೆ. ಹೀಗಾಗಿ ವಿದ್ಯಾರ್ಥಿಗಳು ಪದವಿ ಹಂತದಲ್ಲಿರುವಾಗಲೇ ಅವರಿಗೆ ಭವಿಷ್ಯದ ಕುರಿತು ಅರಿವು ಹಾಗೂ ಮಾರ್ಗದರ್ಶನ ಅತಿಮುಖ್ಯ. ಈ ವಿಚಾರವಾಗಿ ಅತ್ಯಮೂಲ್ಯ ಸಲಹೆಗಳನ್ನು ನೀಡಿ ಯುವಸಮೂಹವನ್ನು ಉತ್ತೇಜಿಸಿ ಪ್ರೋತ್ಸಾಹಿಸುತ್ತಿರುವ ಸಂಪನ್ಮೂಲ ವ್ಯಕ್ತಿಗಳನ್ನು ಯುವಜನೋತ್ಸವಕ್ಕೆ ಆಹ್ವಾನಿಸಲಾಗುತ್ತಿದೆ’ ಎಂದು ತಿಳಿಸಿದರು.

ADVERTISEMENT

‘ಶಿಕ್ಷಣ ನಂತರದ ಬದುಕಿನ ಕುರಿತು ಜಾಗೃತರನ್ನಾಗಿ ಮಾಡಿ ಮುಂದಿನ ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಈ ಗುಣಗಳನ್ನು ಪ್ರೇರೇಪಿಸಲು ಹಾಗೂ ಮಾರ್ಗದರ್ಶನ ನೀಡುವ ಕಾರ್ಯ ಅತ್ಯಂತ ಜರೂರು ಆಗಬೇಕಿದೆ. ಈ ನೆಲೆಯಲ್ಲಿ ಈ ಬಾರಿಯ ಉತ್ಸವದಲ್ಲಿ ಯುವಜನೋತ್ಸವ ಹಮ್ಮಿಕೊಂಡು ಯುವಸಮೂಹಕ್ಕೆ ನೆರವಾಗಬೇಕೆಂಬುದು ಶ್ರೀಮಠದ ಆಶಯವಾಗಿದೆ’ ಎಂದರು.

‘ಈ ಬಾರಿಯ ಉತ್ಸವದಲ್ಲಿ ಯುವಜನೋತ್ಸವ ನಡೆಸುತ್ತಿರುವುದು ಒಂದು ಚಾರಿತ್ರಿಕ ಅಂಶ. ಇದು ಯುವಶಕ್ತಿಯನ್ನು ಜಾಗೃತಗೊಳಿಸಿ ಗಾಂಭೀರ್ಯತೆಯನ್ನು ಸಾರುತ್ತದೆ. ತರಗತಿಗಳಲ್ಲಿ ಪಾಠ ಪ್ರವಚನ ಕಲಿಸುವುದಕ್ಕಿಂತ ಹೆಚ್ಚು ಬದುಕಿನ ಕುರಿತು ಕೌಶಲ ಬೆಳೆಸಲು ಸಹಾಯಕಾರಿಯಾಗುತ್ತದೆ’ ಎಂದು ಸರ್ಕಾರಿ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಜೆ.ಕರಿಯಪ್ಪ ಮಾಳಿಗೆ ಹೇಳಿದರು.

‘ಶರಣ ಸಂಸ್ಕೃತಿ ಉತ್ಸವದಲ್ಲಿ ಈವರೆಗೂ ಯುವಜನೋತ್ಸವ ಆಯೋಜಿಸಿರಲಿಲ್ಲ. ಈ ಬಾರಿ ಆ ಕೊರತೆಯನ್ನು ನಿವಾರಿಸಲಾಗಿದೆ’ ಎಂದು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಎಚ್‌.ಗುಡ್ಡದೇಶ್ವರಪ್ಪ ತಿಳಿಸಿದರು.

ವೆಂಕಟೇಶ್ವರ ಶಿಕ್ಷಣ ವಿದ್ಯಾಲಯದ ಪ್ರಾಂಶುಪಾಲ ಕೆ.ಪಿ.ನಾಗಭೂಷಣ ಶೆಟ್ಟಿ, ಎಸ್‌ಆರ್‌ಎಸ್‌ ಸಮೂಹ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಟಿ.ಎಸ್‌.ರವಿ, ಸೇಂಟ್‌ಮೇರಿಸ್‌ ಶಿಕ್ಷಣ ವಿದ್ಯಾಲಯದ ಪ್ರಾಂಶುಪಾಲ ಎಲ್‌.ಸಂದೀಪ್‌, ಬಸವೇಶ್ವರ ವೈದ್ಯಕೀಯ ವಿದ್ಯಾಲಯದ ಡೀನ್‌ ಡಾ.ಜಿ.ಪ್ರಶಾಂತ್‌, ಎಸ್‌ಜೆಎಂ ದಂತ ವಿದ್ಯಾಲಯದ ಪ್ರಾಂಶುಪಾಲ ಡಾ.ರಘುನಾಥರೆಡ್ಡಿ, ಎಸ್‌ಜೆಎಂ ತಾಂತ್ರಿಕ ವಿದ್ಯಾಲಯದ ಪ್ರಾಂಶುಪಾಲ ಪಿ.ಬಿ. ಭರತ್ ಇದ್ದರು.

ವಿದ್ಯಾರ್ಥಿ ಜೀವನದ ಸಾರ್ಥಕತೆಗೆ ಅವರ ಶಕ್ತಿಯನ್ನು ಬಳಸಿಕೊಳ್ಳಬೇಕಾದ ಮಾರ್ಗದರ್ಶನ ನೀಡುವ ಅಗತ್ಯವಿದೆ. ಸಂವಿಧಾನ ಪಠಣದೊಡನೆ ವಚನ ಪಠಣವನ್ನು ವಿಶೇಷವಾಗಿ ಸೇರಿಸಿರುವುದು ಚಾರಿತ್ರಿಕ ಬೆಳವಣಿಗೆಯಾಗಿದೆ.
ಪ್ರೊ.ಜೆ.ಕರಿಯಪ್ಪ ಮಾಳಿಗೆ ಪ್ರಾಂಶುಪಾಲರು ಸರ್ಕಾರಿ ಕಲಾ ಕಾಲೇಜು
5 ಸಾವಿರ ವಿದ್ಯಾರ್ಥಿಗಳು ಭಾಗಿ
‘ಈ ಕಾರ್ಯಕ್ರಮದಲ್ಲಿ 5 ಸಾವಿರ ವಿದ್ಯಾರ್ಥಿಗಳನ್ನು ಭಾಗವಹಿಸುವಂತೆ ಕ್ರಮವಹಿಸಲಾಗಿದೆ. ಕಾರ್ಯಕ್ರಮದ ಕುರಿತು ಜಾಗೃತಿ ಉಂಟು ಮಾಡಲು ಪ್ರತಿ ಕಾಲೇಜಿಗೆ ಭೇಟಿ ನೀಡಲಾಗುತ್ತದೆ’ ಎಂದು ಬಸವಕುಮಾರ ಸ್ವಾಮೀಜಿ ತಿಳಿಸಿದರು. ‘ಸಾಮಾಜಿಕ ಜಾಲತಾಣಗಳ ಯುಗದಲ್ಲಿ ಯುವಜನರು ಗೊಂದಲದಲ್ಲಿ ಮುಳುಗಿದ್ದಾರೆ. ಭವಿಷ್ಯದ ಬಗ್ಗೆ ಗುರಿ ಇಲ್ಲದೇ ನಡೆಯುತ್ತಿದ್ದಾರೆ. ಅವರಿಗೆ ಗುರಿ ಬದ್ಧತೆ ಕಾಯಕ ತತ್ವದ ತಿಳಿವಳಿಕೆ ಅಗತ್ಯ. ಹೀಗಾಗಿ ಯುವಜನೋತ್ಸವ ಆಯೋಜಿಸಲಾಗುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.