ADVERTISEMENT

ಪರಸ್ಪರ ಸಹಾಯ ಗುಣದಿಂದ ಮಾನಸಿಕ ನೆಮ್ಮದಿ: ಶಿರಸಂಗಿ ಮಹಾಂತ ಸ್ವಾಮೀಜಿ

ಶರಣ ಸಂಸ್ಕೃತಿ ಉತ್ಸವ; ‘ಸಹಜ ಶಿವಯೋಗ’

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2025, 5:19 IST
Last Updated 25 ಸೆಪ್ಟೆಂಬರ್ 2025, 5:19 IST
ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಚಿತ್ರದುರ್ಗದ ಮುರುಘಾ ಮಠದಲ್ಲಿ ಬುಧವಾರ ಸಹಜ ಶಿವಯೋಗ ಪ್ರಾತ್ಯಕ್ಷಿಕೆ ನಡೆಯಿತು
ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಚಿತ್ರದುರ್ಗದ ಮುರುಘಾ ಮಠದಲ್ಲಿ ಬುಧವಾರ ಸಹಜ ಶಿವಯೋಗ ಪ್ರಾತ್ಯಕ್ಷಿಕೆ ನಡೆಯಿತು   

ಚಿತ್ರದುರ್ಗ: ‘ಬಾಗಿದ ತಲೆ, ಮುಗಿದ ಕೈಯಿಂದ ಪ್ರಾರ್ಥನೆ, ಬಾಯಿಂದ ಶರಣು ಶರುಣಾರ್ಥಿ ಹೇಳಿದರೆ ಅದು ಬಸವಣ್ಣನವರಿಗೆ ಸಲ್ಲಿಸಿದ ಪ್ರಾರ್ಥನೆಯಾಗುತ್ತದೆ. ಮತ್ತೊಬ್ಬರಿಗೆ ಸಹಾಯ ಮಾಡುವ ಗುಣಗಳನ್ನು ಬೆಳೆಸಿಕೊಂಡರೆ ನೆಮ್ಮದಿ ನಮ್ಮದಾಗುತ್ತದೆ’ ಎಂದು ಶಿರಸಂಗಿ ಮಹಾಂತ ಸ್ವಾಮೀಜಿ ಹೇಳಿದರು.

ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಮುರುಘರಾಜೇಂದ್ರ ಮಠದ ಮುರುಗಿ ಶಾಂತವೀರ ಮುರುಘರಾಜೇಂದ್ರ ಶ್ರೀಗಳ ಲೀಲಾ ವಿಶ್ರಾಂತಿ ಸನ್ನಿಧಾನದಲ್ಲಿ ಬುಧವಾರ ನಡೆದ ಸಹಜ ಶಿವಯೋಗ ಪ್ರಾತ್ಯಕ್ಷಿಕೆಯಲ್ಲಿ ಮಾತನಾಡಿದರು.

‘ಬಬ್ಬರ ಮನಸ್ಸನ್ನು ಮತ್ತೊಬ್ಬರು ನೋಯಿಸಬಾರದು. ಭಾವನೆಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ಸುಖ ದುಃಖವನ್ನು ಸರಳ ಉದಾಹರಣೆ ಮೂಲಕ ಶರಣರು ತಿಳಿಸಿದ್ದಾರೆ. ಸಹಜ ಶಿವಯೋಗವು ನೆಮ್ಮದಿ ನೀಡುತ್ತದೆ’ ಎಂದರು.

ADVERTISEMENT

‘ರವಿಂದ್ರನಾಥ್ ಠಾಗೂರ್ ಅವರು ನೀವೇ ದೊಡ್ಡವರು ನಾನು ಚಿಕ್ಕವನು ಎಂದು ಹೇಳಿದ್ದಾರೆ. ಒಳ್ಳೆಯ ಕೆಲಸವನ್ನು ಮಾಡುವಾಗ ಅದು ಇತರರಿಗೆ ಮಾರ್ಗದರ್ಶನವಾಗುತ್ತದೆ. ಸಮಾಧಾನ ನೆಮ್ಮದಿ ಬೇಕಾದರೆ ಇತರರೊಂದಿಗೆ ಹೋಲಿಸಿಕೊಳ್ಳಬಾರದು. 140 ಕೋಟಿ ಜನರು ಒಬ್ಬರಿಗಿಂತ ಮೊತ್ತೊಬ್ಬರು ಭಿನ್ನರಾಗಿದ್ದಾರೆ. ಆದ್ದರಿಂದ ಹೋಲಿಕೆ ಮಾಡಿಕೊಳ್ಳಬಾರದು’ ಎಂದರು.

ಕಾರ್ಯಕ್ರಮದಲ್ಲಿ ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಬಸವ ಕುಮಾರ ಸ್ವಾಮೀಜಿ, ಕೊಲ್ಲಾಪುರದ ಶಿವಾನಂದ ಸ್ವಾಮೀಜಿ, ಮುರುಘೇಂದ್ರ ಸ್ವಾಮೀಜಿ, ಸತ್ಯಕ್ಕ ಇದ್ದರು. ಜಮುರಾ ಕಲಾಲೋಕದ ಉಮೇಶ ಪತ್ತಾರ ವಚನಗೀತೆಗಳನ್ನು ಹಾಡಿದರು.

ವಿವಿಧ ಸ್ಪರ್ಧೆಗಳು: ಮುರುಘಾಮಠದ ಆವರಣದಲ್ಲಿ ಸಿರಿಧಾನ್ಯಗಳನ್ನು ಬಳಸಿ ಅಡುಗೆ ಸ್ಪರ್ಧೆ, ಶರಣ ಭಾವಚಿತ್ರ ರಂಗೋಲಿ ಸ್ಪರ್ಧೆ, ಚುಕ್ಕಿ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿತ್ತು. ಗುರುಮಠಕಲ್ ಗುರು ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು.

ಸಾವಯವ ಧಾನ್ಯಗಳ ಅಡುಗೆ ಸ್ಪರ್ಧೆಯಲ್ಲಿ ಶ್ರೀದೇವಿ ಪ್ರಥಮ, ಕಲ್ಯಾಣಿ ದ್ವಿತೀಯ, ಗಂಗಮ್ಮ ತೃತೀಯ ಹಾಗು ಸವಿತಾ ತಿಪ್ಪೇರುದ್ರಪ್ಪ ಸಮಾಧಾನಕರ ಬಹುಮಾನ ಪಡೆದರು. ಶಿವಶರಣರ ಭಾವಚಿತ್ರ ರಂಗೋಲಿ ಸ್ಪರ್ಧೆಯಲ್ಲಿ ಯಶೋಧಾ ಜಿ.ಎಸ್ ಪ್ರಥಮ, ಗಗನ್ ರಾಜ್ ಎಂ. ದ್ವಿತೀಯ, ಶ್ರೀರಕ್ಷಾ ಕೆ.ಎಂ. ತೃತೀಯ ಹಾಗೂ ಮಂಜುಳ ಸಿ.ಜಿ. ಸಮಾಧಾನಕರ ಬಹುಮಾನ ಪಡೆದರು.

ಚುಕ್ಕಿ ರಂಗೋಲಿ ಸ್ಪರ್ಧೆಯಲ್ಲಿ ಜ್ಯೋತಿ ಬಸವರಾಜ್ ಪ್ರಥಮ, ತ್ರಿಷಾ ಪಿ. ದ್ವಿತೀಯ, ಕಾವೇರಿ ಎಸ್. ತೃತೀಯ ಹಾಗೂ ಪುಷ್ಪಾ ಪಿ. ಸಮಾಧಾನಕಾರ ಬಹುಮಾನ ಪಡೆದರು. ವಚನ ಕಂಠಪಾಠ ಸ್ಪರ್ಧೆ ವಿದ್ಯಾರ್ಥಿ ವಿಭಾಗದಲ್ಲಿ ಸ್ಫೂರ್ತಿ ಸಿ.ವೈ. ಪ್ರಥಮ, ಸಾನ್ವಿ ಸಿ.ವೈ. ದ್ವಿತೀಯ ಹಾಗೂ ದೀಪ್ತಿ ತೃತೀಯ ಸ್ಥಾನ ಪಡೆದರು. ವಯಸ್ಕರ ವಿಭಾಗದಲ್ಲಿ ಗೀತಾ ರುದ್ರೇಶ್ ಪ್ರಥಮ, ಲೀಲಾವತಿ ಆರ್. ದ್ವಿತೀಯ ಹಾಗು ಭಾಗ್ಯಲಕ್ಷ್ಮಿ ತೃತೀಯ ಸ್ಥಾನ ಪಡೆದಿದರು.

ವಿಚಾರ ಸಂಕಿರಣ ಇಂದು

ಶರಣ ಸಂಸ್ಕೃತಿ ಉತ್ಸವ ಸೆ 25ರಿಂದ ವಿಧ್ಯುಕ್ತವಾಗಿ ಆರಂಭವಾಗಲಿದೆ. ಬೆಳಿಗ್ಗೆ 7.30ಕ್ಕೆ ಸಹಜ ಶಿವಯೋಗ ಪ್ರಾತ್ಯಕ್ಷಿಕೆ ನಡೆಯಲಿದೆ. ನಂತರ ಬಸವತತ್ವ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 11ಕ್ಕೆ ಅಥಣಿ ಮುರುಘೇಂದ್ರ ಯೋಗಿಗಳ ಕುರಿತು ವಿಚಾರ ಸಂಕಿರಣ ನಡೆಯಲಿದೆ. ಮಧ್ಯಾಹ್ನ 2.30ಕ್ಕೆ ‘ಶಿವಯೋಗಿಗಳು ಪವಾಡಗಳು ವರ್ತಮಾನವ ನೆಲೆಯಲ್ಲಿ ವಿಶ್ಲೇಷಣೆ’ ಕುರಿತು ವಿಚಾರ ಸಂಕಿರಣ ನಡೆಯಲಿದೆ. ಸಂಜೆ 5ಕ್ಕೆ ಎಸ್‌ಜೆಎಂ ದಂತ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗಾಗಿ ಪದವಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿದೆ.

ಸಿರಿಧಾನ್ಯಗಳ ಅಡುಗೆ ಸ್ಪರ್ಧೆ ವೇಳೆ ಬಸವಕುಮಾರ ಸ್ವಾಮೀಜಿ ಅಡುಗೆಯ ರುಚಿ ನೋಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.