ADVERTISEMENT

ತಂಗಡಗಿ ವಿರುದ್ಧ ತೈಲೇಶ್ವರ ಶ್ರೀಗಳ ಆರೋಪ ನಿರಾಧಾರ: ಸಿದ್ದರಾಮೇಶ್ವರ ಸ್ವಾಮೀಜಿ

ಭೋವಿ ಗುರುಪೀಠದ ಪೀಠಾಧ್ಯಕ್ಷ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2025, 5:47 IST
Last Updated 8 ಜುಲೈ 2025, 5:47 IST
ಸಿದ್ದರಾಮೇಶ್ವರ ಸ್ವಾಮೀಜಿ
ಸಿದ್ದರಾಮೇಶ್ವರ ಸ್ವಾಮೀಜಿ   

ಚಿತ್ರದುರ್ಗ: ‘ಸಮಾಜಮುಖಿಯಾಗಿ ಕೆಲಸ ಮಾಡುತ್ತಿರುವ ಸಚಿವ ಶಿವರಾಜ ತಂಗಡಗಿ ಅವರ ವಿರುದ್ಧ ತೈಲೇಶ್ವರ ಗಾಣಿಗ ಮಠದ ಪೂರ್ಣಾನಂದಪುರಿ ಸ್ವಾಮೀಜಿ ಮಾಡಿರುವ ಕಮಿಷನ್‌ ಆರೋಪ ಸತ್ಯಕ್ಕೆ ದೂರವಾದುದು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಹಾಯ ಮಾಡುತ್ತಿರುವ ಸಚಿವರು ಎಂದಿಗೂ ಕಮಿಷನ್‌ ರಾಜಕಾರಣ ಮಾಡಿದವರಲ್ಲ’ ಎಂದು ಭೋವಿ ಗುರುಪೀಠದ ಪೀಠಾಧ್ಯಕ್ಷ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು.

‘ಸಚಿವ ಶಿವರಾಜ ತಗಂಡಗಿ ಅವರು ಪ್ರಮಾಣಿಕವಾಗಿ ರಾಜಕೀಯ ಮಾಡಿಕೊಂಡು ಬಂದಿದ್ದಾರೆ. ಯಾರಿಂದಲೂ ಹಣ ಪಡೆದು ಕೆಲಸ ಮಾಡುವವರಲ್ಲ. ತೈಲೇಶ್ವರ ಮಠದ ಶ್ರೀಗಳು ಆಧಾರ ರಹಿತವಾದ ಆರೋಪ ಮಾಡಿದ್ದರೆ. ಯಾವುದೇ ಆರೋಪ ಮಾಡಿದರೂ ಅದಕ್ಕೆ ಆಧಾರಗಳು ಇರಬೇಕು. ಸಚಿವರು ಕಮಿಷನ್ ಕೇಳಿದ್ದಕ್ಕೆ ಏನಾದರೂ ಸಾಕ್ಷಿ ಇದೆಯೇ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.

‘ಕಾಯಕ ಪ್ರವೃತ್ತಿಯನ್ನು ರೂಢಿಸಿಕೊಂಡು ಬಂದಿರುವ ತಂಗಡಗಿ ಅವರು ಸಚಿವರಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ತಮ್ಮಲ್ಲಿ ಇದ್ದುದನ್ನು ಬೇರೆಯವರೊಂದಿಗೆ ಹಂಚಿಕೊಂಡು ಊಟ ಮಾಡುವ ಪ್ರವೃತ್ತಿ ಅವರದು. ಸರ್ಕಾರದಲ್ಲಿ ಯಾವುದೇ ಅನುದಾನ ಬಿಡುಗಡೆ ಆಗಬೇಕಾದರೂ ಅದಕ್ಕೆ ತನ್ನದೇ ಆದ ನಿಯಮಗಳಿವೆ. ₹ 1 ಕೋಟಿಗಿಂತ ಕಡಿಮೆ ಮೊತ್ತದ ಹಣವನ್ನು ಸಚಿವರೇ ಬಿಡುಗಡೆ ಮಾಡುತ್ತಾರೆ. ಆದರೆ ₹ 1 ಕೋಟಿಗಿಂತ ಹೆಚ್ಚು ಮೊತ್ತದ ಕಡತ ಸಿ.ಎಂ. ಬಳಿ ಇರುತ್ತದೆ. ತೈಲೇಶ್ವರ ಶ್ರೀಗಳು ಮಾಡಿರುವ ಆರೋಪ ಸತ್ಯವಲ್ಲ’ ಎಂದು ಹೇಳಿದರು.

ADVERTISEMENT

‘ಶ್ರೀಗಳು ತಮ್ಮ ಪೂರ್ವಾಶ್ರಮದಲ್ಲಿ ರಾಜಕೀಯದಲ್ಲಿ ಸಾಕಷ್ಟು ಅನುಭವ ಹೊಂದಿದ್ದಾರೆ. ಸರ್ಕಾರದಿಂದ ಯಾವ ರೀತಿ ಹಣ ಬಿಡುಗಡೆಯಾಗುತ್ತದೆ ಎಂಬ ಮಾಹಿತಿ ಅವರಲ್ಲಿದೆ. ಹೊಸ ಸರ್ಕಾರ ಅಸ್ಥಿತ್ವಕ್ಕೆ ಬಂದಾಗ ಹಿಂದಿನ ಸರ್ಕಾರದ ಅನುದಾನ ಬಿಡುಗಡೆ ಆಗುವುದು ಬಹಳ ಕಷ್ಟ ಎಂಬುದನ್ನು ಅವರು ಅರಿಯಬೇಕು. ಶ್ರೀಗಳು ಸರ್ಕಾರದಿಂದ ಅನುದಾನ ತಂದು ಮಠ ಅಭಿವೃದ್ಧಿ ಮಾಡಲಿ. ಆದರೆ, ವಿನಾಕಾರಣ ಸ್ವಚ್ಛವಾದ ರಾಜಕಾರಣಿಯ ವ್ಯಕ್ತಿತ್ವಕ್ಕೆ ವಿರುದ್ಧವಾದ ರೀತಿ ಆರೋಪ ಮಾಡುವುದು ಸರಿಯಲ್ಲ’ ಎಂದು ತಿಳಿಸಿದರು.

ಮಠದ ಸಿಇಒ ಗೌನಳ್ಳಿ ಗೋವಿಂದಪ್ಪ, ಜಿಲ್ಲಾ ಭೋವಿ ಸಂಘದ ಕಾರ್ಯದರ್ಶಿ ಲಕ್ಷ್ಮಣ್, ಎಸ್‌ಜೆಎಸ್‌ ಸಂಸ್ಥೆಯ ಕಾರ್ಯದರ್ಶಿ ಡಿ.ಸಿ.ಮೋಹನ್, ನಿರ್ದೇಶಕರಾದ ಕಾಳಘಟ್ಟದ ಹನುಮಂತಪ್ಪ, ಚಳ್ಳಕೆರೆ ತಾಲ್ಲೂಕು ಭೋವಿ ಸಮಾಜದ ಅಧ್ಯಕ್ಷ ಆಂಜನೇಯ, ನಿರ್ದೇಶಕರಾದ ಈರಣ್ಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.