ಸಿರಿಗೆರೆ: ತರಳಬಾಳು ಜಗದ್ಗುರು ಬೃಹನ್ಮಠದ 20ನೇ ಪೀಠಾಧಿಕಾರಿಗಳಾಗಿದ್ದ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳ 34ನೇ ಶ್ರದ್ಧಾಂಜಲಿ ಸಮಾರಂಭವನ್ನು ಈ ಸೆ. 22ರಿಂದ 3 ದಿನ ಆಚರಿಸಲಾಗುವುದು.
ಸದ್ಧರ್ಮ ನ್ಯಾಯಪೀಠದಲ್ಲಿ ಭಾನುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಶ್ರೀ ತರಳಬಾಳು ಪೀಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಈ ವಿಷಯವನ್ನು ಪ್ರಕಟಿಸಿದರು.
ಕಳೆದ ವರ್ಷಗಳಲ್ಲಿ ಶ್ರದ್ಧಾಂಜಲಿ ಸಮಾರಂಭವನ್ನು 5 ದಿನ ವಿಜೃಂಭಣೆಯಿಂದ ನಡೆಸಲಾಗುತ್ತಿತ್ತು. ಈ ಬಾರಿ ಆರಂಭಗೊಂಡು ಮುಂಗಾರು ಮಳೆ ಬಿಡುವು ಕೊಡುತ್ತಿಲ್ಲ. ಜೊತೆಗೆ ಸಿರಿಗೆರೆಯಲ್ಲಿ ಓದುತ್ತಿರುವ ಶಾಲಾ ಮಕ್ಕಳಿಗೆ ಮಧ್ಯ ವಾರ್ಷಿಕ ಪರೀಕ್ಷೆಗಳ ಕಾಲ ಆಗಿರುವುದರಿಂದ ಈ ಬಾರಿಯ ಸಮಾರಂಭವನ್ನು ಮೂರು ದಿನಗಳಿಗೆ ಮೊಟಕುಗೊಳಿಸಲಾಗಿದೆ.
ಶ್ರದ್ಧಾಂಜಲಿ ಅಂಗವಾಗಿ ಬೃಹನ್ಮಠದ ಆವರಣದಲ್ಲಿರುವ ಐಕ್ಯಮಂಟಪದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಶಿವಕುಮಾರ ಶ್ರೀಗಳ ಭಾವಚಿತ್ರದ ಮೆರವಣಿಗೆಯನ್ನು ಆಯೋಜಿಸಲಾಗುವುದು. ಸಮಾರಂಭಕ್ಕೆ ಬರುವ ಭಕ್ತರಿಗೆ ಮೂರು ದಿನವೂ ದಾಸೋಹ ಏರ್ಪಡಿಸಲಾಗುವುದು. ಚನ್ನಗಿರಿಯ ತುಮಕೋಸ್ ಸಂಸ್ಥೆಯವರು ಲಾಡುಗಳನ್ನು ದಾಸೋಹಕ್ಕೆ ನೀಡುವರು.
ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದ ಹಲವು ಭಕ್ತರು ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಅಗತ್ಯವಾದ ದವಸ- ಧಾನ್ಯ, ಅಕ್ಕಿ, ಬೆಲ್ಲ, ಬೇಳೆ, ಎಣ್ಣೆ ಹಾಗೂ ಕಾಣಿಕೆ ನೀಡುವುದಾಗಿ ವಾಗ್ದಾನ ಮಾಡಿದರು.
ಚಿಕ್ಕಬೆನ್ನೂರು ತೀರ್ಥಪ್ಪ, ಸಿ,ಆರ್. ನಾಗರಾಜ್ ಮಾತನಾಡಿದರು. ಅಣ್ಣನ ಬಳಗದ ಅಧ್ಯಕ್ಷ ಬಿ.ಎಸ್. ಮರುಳಸಿದ್ದಯ್ಯ ಸ್ವಾಗತಿಸಿದರು. ಕಾರ್ಯದರ್ಶಿ ವಿಜಯಾಚಾರ್ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.