
ಹೊಸದುರ್ಗ: ರಾಜ್ಯದಲ್ಲಿ ಸುದೀರ್ಘ ಅವಧಿಯ ಮುಖ್ಯಮಂತ್ರಿ ಎಂಬ ಹಿರಿಮೆಗೆ ಸಿದ್ದರಾಮಯ್ಯ ಅವರು ಭಾಜನರಾದ ಹಿನ್ನೆಲೆಯಲ್ಲಿ ಶಾಸಕ ಬಿ.ಜಿ. ಗೋವಿಂದಪ್ಪ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭಾನುವಾರ ಪಟ್ಟಣದ ಟಿ.ಬಿ. ವೃತ್ತದಲ್ಲಿ ನಾಟಿಕೋಳಿ ಸಾಂಬಾರು ಹಾಗೂ ರಾಗಿಮುದ್ದೆ ಊಟ ವಿತರಿಸಿ ಸಂಭ್ರಮಿಸಿದರು.
ಪಟ್ಟಣದ ಖಾಸಗಿ ಬಸ್ ನಿಲ್ದಾಣ, ಪೋಸ್ಟ್ ಆಫೀಸ್, ಬಿ.ಎಸ್.ಎನ್.ಎಲ್ ಕಚೇರಿ, ಟಿ.ಬಿ. ವೃತ್ತ, ತಾಲ್ಲೂಕು ಪಂಚಾಯಿತಿ ಎದುರು, ತಾಲ್ಲೂಕು ಕಚೇರಿ ಎದುರು ಸಂಭ್ರಮದ ಬ್ಯಾನರ್‌ಗಳು ರಾರಾಜಿಸಿದವು.
ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಅಂಬೇಡ್ಕರ್, ದೇವರಾಜ ಅರಸು ಹಾಗೂ ಸಿದ್ದರಾಮಯ್ಯ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು. 220 ಕೆ.ಜಿ ನಾಟಿಕೋಳಿ ಸಾಂಬಾರು ಮಾಡಲಾಗಿದ್ದು, ಸಾವಿರಾರು ಜನರು ಭೋಜನ ಸವಿದು, ಸಂಭ್ರಮಿಸಿದರು.
ಶಾಸಕ ಬಿ.ಜಿ. ಗೋವಿಂದಪ್ಪ ಮಾತನಾಡಿ, ಎಲ್ಲಾ ಮುಖಂಡರು ಸೇರಿ ಸಂಭ್ರಮಾಚರಣೆಯಲ್ಲಿ ತೊಡಗಿರುವುದು ಸಂತಸ ತಂದಿದೆ. ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಶ್ರಮಿಸಿ, ಲಕ್ಷಾಂತರ ಜನರಿಗೆ ನೆಮ್ಮದಿ ಬದುಕು ಕೊಡುವ ಮೂಲಕ ಉತ್ತಮ ಆಡಳಿತ ಹಾಗೂ ದೀರ್ಘಕಾಲ ಮುಖ್ಯಮಂತ್ರಿ ಆಗಿದ್ದ ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಆಗಿದ್ದರು. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ದೀರ್ಘಕಾಲ ಮುಖ್ಯಮಂತ್ರಿ ಎಂಬ ಗರಿಮೆ ಪಡೆದಿದ್ದಾರೆ. ಹಲವಾರು ಭಾಗ್ಯಗಳು, ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಜನರ ಮನಸ್ಸಿನಲ್ಲಿ ನೆಲೆಯೂರಿದ್ದಾರೆ. ಅವರ ಈ ಸಾಧನೆಯನ್ನು ರಾಜ್ಯಾದ್ಯಂತ ಸಂಭ್ರಮಿಸಲಾಗುತ್ತಿದೆ. ಸದ್ಯ ಸಿದ್ಧರಾಮಯ್ಯ ಅವರು 17 ಬಾರಿ ಬಜೆಟ್ ಮಂಡಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಅತೀ ಹೆಚ್ಚು ಬಜೆಟ್ ಮಂಡಿಸಿದ ಕೀರ್ತಿಯೂ ಅವರಿಗೆ ಸಲ್ಲುತ್ತದೆ. ಕಾಂಗ್ರೆಸ್ ಪಕ್ಷದ ನೆರಳಿನಲ್ಲಿ ಅವರು ಹಲವಾರು ಸ್ಥಾನಗಳನ್ನು ಅಲಂಕರಿಸಿ, ಜನಸೇವೆ ಮಾಡಿದ್ದಾರೆ. ಅವರ ಕಾರ್ಯ ಹೀಗೆಯೇ ಮುಂದುವರಿಯಲಿ ಎಂದು ಆಶಿಸಿದರು.'
ಈ ವೇಳೆ ಕೆಪಿಸಿಸಿ ಸದಸ್ಯ ಅಲ್ತಾಫ್ ಪಾಷಾ, ಎಂ.ಪಿ. ಶಂಕರ, ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ಶಿವಣ್ಣ, ತಾಲ್ಲೂಕು ಅಧ್ಯಕ್ಷ ಮಹಮ್ಮದ್ ಇಸ್ಮಾಯಿಲ್, ಕುರುಬ ಸಮಾಜದ ತಾಲ್ಲೂಕು ಅಧ್ಯಕ್ಷ ಮಂಜುನಾಥ್, ಕಾಂಗ್ರೆಸ್ ಮುಖಂಡರುಗಳಾದ ದಳವಾಯಿ ವೆಂಕಟೇಶ್, ದಿಪೀಕಾ ಸತೀಶ್, ಬಿ.ಜಿ ಅರುಣ್, ಗೋ.ತಿಪ್ಪೇಶ್, ಕಾರೇಹಳ್ಳಿ ಬಸವರಾಜ್, ರಾಜಣ್ಣ, ಪದ್ಮನಾಭ್, ಆಗ್ರೋ ಶಿವಣ್ಣ, ಗೇರ್ ಬಾಬು, ಲಕ್ಕಿಹಳ್ಳಿ ಮುದ್ದಪ್ಪ, ಕೆಂಚಪ್ಪ, ಹನುಮನಾಯ್ಕ, ಸುರೇಶ್, ಚಹಾಬಾಬು , ರೆಹಮಾನ್ ಖಾನ್, ಕೃಷ್ಣನಾಯ್ಕ, ಸಾಧಿಕ್, ಮಧುರೆ ನಟರಾಜ್ ಸೇರಿದಂತೆ ಕಾಂಗ್ರೆಸ್ ಮುಖಂಡರುಗಳು ಹಾಗೂ ಬಿ.ಜಿ. ಅಭಿಮಾನಿಗಳ ಬಳಗದವರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.