ADVERTISEMENT

ಮದುವೆಗೆ ಮೌಢ್ಯ ಅಡ್ಡಿಯಾಗದು: ಶಿವಮೂರ್ತಿ ಮುರುಘಾ ಶರಣರು

ಸಾಮೂಹಿಕ ಕಲ್ಯಾಣ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2018, 16:02 IST
Last Updated 5 ಆಗಸ್ಟ್ 2018, 16:02 IST
ಚಿತ್ರದುರ್ಗದ ಮುರುಘಾಮಠದಲ್ಲಿ ಭಾನುವಾರ ನಡೆದ ಸಾಮೂಹಿಕ ಕಲ್ಯಾಣದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ 11 ನವ ಜೋಡಿಗಳಿಗೆ ಶಿವಮೂರ್ತಿ ಮುರುಘಾ ಶರಣರು ಆಶೀರ್ವದಿಸಿದರು
ಚಿತ್ರದುರ್ಗದ ಮುರುಘಾಮಠದಲ್ಲಿ ಭಾನುವಾರ ನಡೆದ ಸಾಮೂಹಿಕ ಕಲ್ಯಾಣದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ 11 ನವ ಜೋಡಿಗಳಿಗೆ ಶಿವಮೂರ್ತಿ ಮುರುಘಾ ಶರಣರು ಆಶೀರ್ವದಿಸಿದರು   

ಚಿತ್ರದುರ್ಗ:ಆಷಾಢ ಮಾಸದಲ್ಲಿ ಮದುವೆ ಸೇರಿ ಯಾವುದೇ ಶುಭ ಕಾರ್ಯಗಳಿಗೆ ಮೌಢ್ಯ ಎಂದಿಗೂ ಅಡ್ಡಿಯಾಗದು ಎಂದು ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು ಸಲಹೆ ನೀಡಿದರು.

ಬಸವಕೇಂದ್ರ ಮುರುಘಾಮಠ, ಎಸ್‌ಜೆಎಂ ಶಾಂತಿ ಮತ್ತು ಪ್ರಗತಿ ಫೌಂಡೇಶನ್‌ನಿಂದ ಭಾನುವಾರ ಹಮ್ಮಿಕೊಂಡಿದ್ದ 28 ನೇ ವರ್ಷದ ಎಂಟನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಎಲ್ಲ ಶಾಸ್ತ್ರ ಸಂಪ್ರದಾಯಗಳನ್ನು ಕಡ್ಡಾಯವಾಗಿ ಮಾಡಿದವರಿಗೆ ಕೆಲವೊಮ್ಮೆ ತೊಂದರೆಗಳಾಗಿವೆ. ಪಂಚಾಂಗದ ಮೂಲಕ ಮುಗ್ಧ ಜನರಿಗೆ ಮೋಸ ಮಾಡುವುದು ಸರಿಯಲ್ಲ. ಮೌಢ್ಯ ನಂಬದೆ, 15 ಸಾವಿರಕ್ಕೂ ಹೆಚ್ಚು ಮದುವೆಗಳು ಆಗಿವೆ. ಶಿವಯೋಗ ಇಲ್ಲವೇ ಧ್ಯಾನ ಮಾಡುವವರಿಗೆ ದರಿದ್ರತನ ಎಂದಿಗೂ ಬರುವುದಿಲ್ಲ ಎಂದರು.

ADVERTISEMENT

ಇಲ್ಲಿ ಮದುವೆ ಎಂದರೆ ಸಂಭ್ರಮದ ವಾತಾವರಣ. ಕಾಯಕ ತತ್ವ ಪಾಲಿಸುವವರಿಗೆ ಧನಾಗಮವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕಾಯಕದಲ್ಲಿ ಕೈಲಾಸ ಕಾಣುವ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.

ಬೆಳಗಾವಿ ಜಿಲ್ಲೆ ಜನವಾಡದ ಸತ್ತಿಗ್ರಾಮದ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ‘ಪತಿ–ಪತ್ನಿಯರ ಮನಸ್ಸು ಒಂದಾದರೆ ದೇವರ ಮುಂದೆ ನಂದಾದೀಪ ಬೆಳಗಿದಂತೆ ಎಂಬ ಮಾತಿದೆ. ಆದರೆ, ಇಂದು ಬಹಳಷ್ಟು ಜನರು ಭೌತಿಕ ಸುಖವನ್ನು ಕಾಣುತ್ತಾರೆ. ಆಂತರಿಕ ಸೌಂದರ್ಯದ ಬದುಕು ಮುಖ್ಯ ಎಂಬುದನ್ನು ಯಾರೂ ಮರೆಯಬಾರದು. ಪರಸ್ಪರ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಪ್ರೀತಿಸುವಂಥ ಹೃದಯಗಳು ಬೇಕು’ ಎಂದು ಅಭಿಪ್ರಾಯಪಟ್ಟರು.

ನಗರಸಭೆ ಅಧ್ಯಕ್ಷ ಎಚ್. ತಿಮ್ಮಣ್ಣ ಮಾತನಾಡಿ, ‘ಬೇರೆ ಕಡೆ ಸಾಮೂಹಿಕ ಕಲ್ಯಾಣ ಮಹೋತ್ಸವ ನಡೆದರೂ ಪ್ರತಿ ತಿಂಗಳು ತಪ್ಪದೇ ನಡೆಯುವುದು ಮುರುಘಾಮಠದಲ್ಲಿ ಮಾತ್ರ. ಇಂತಹ ಸತ್ಕಾರ್ಯದಿಂದ ಬಡ ಸಮುದಾಯಗಳ ಅನೇಕರಿಗೆ ದುಂದುವೆಚ್ಚ ಇಲ್ಲದೆ ಸರಳವಾಗಿ ವಿವಾಹ ಮಾಡಿಕೊಳ್ಳಲು ತುಂಬಾ ಸಹಕಾರಿಯಾಗಿದೆ’ ಎಂದರು.

ಕಲ್ಯಾಣ ಮಹೋತ್ಸವದಲ್ಲಿ 11 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.ದಾವಣಗೆರೆ ವಿರಕ್ತಮಠದ ಬಸವಪ್ರಭು ಸ್ವಾಮೀಜಿ, ಶಿರಸಿಯ ಮಲ್ಲಿಕಾರ್ಜುನ ಸ್ವಾಮೀಜಿ, ಚಳ್ಳಕೆರೆಯ ಬಸವಕಿರಣ ಸ್ವಾಮೀಜಿ, ಹೊಳಲ್ಕೆರೆಯ ಪ್ರಜ್ಞಾನಂದ ಸ್ವಾಮೀಜಿ, ಹಾವೇರಿಯ ಬಸವ ಶಾಂತಲಿಂಗ ಸ್ವಾಮೀಜಿ, ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ, ಕಾರ್ಯನಿರ್ವಹಣಾಧಿಕಾರಿ ಎಂ.ಜಿ. ದೊರೆಸ್ವಾಮಿ,ಕೆಇಬಿ ಷಣ್ಮುಖಪ್ಪ,ದಾವಣಗೆರೆಯ ಉದ್ಯಮಿ ಆನಂದ್, ಕಣಿವೆ ಮಾರಮ್ಮ ಅಭಿಮಾನಿಗಳ ಸಂಘದ ಅಧ್ಯಕ್ಷ ಎಂ. ತಿಪ್ಪೇಸ್ವಾಮಿ,ಪ್ರಕಾಶ್, ಬಸವರಾಜ ಪಾಟೀಲ, ಪೈಲ್ವಾನ್ ತಿಪ್ಪೇಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.