ಸಿರಿಗೆರೆ: ‘ಒಳಮೀಸಲಾತಿಯ ಅನುಕೂಲ ಪಡೆದುಕೊಳ್ಳಲು ಜಾತಿ ಗಣತಿಯ ಸಂದರ್ಭದಲ್ಲಿ ಸಮುದಾಯದವರು ಮಾದಿಗ ಎಂದೇ ಬರೆಸಬೇಕು’ ಎಂದು ಕೆಪಿಸಿಸಿ ಎಸ್‌ಸಿ ಸೆಲ್ ಜಿಲ್ಲಾ ಘಟಕದ ಉಪಾಧ್ಯಕ್ಷ ಸೀಗೇಹಳ್ಳಿ ರಾಜು ಮನವಿ ಮಾಡಿದ್ದಾರೆ.
‘ಒಳಮೀಸಲಾತಿಗೆ ಮಾಹಿತಿ ಸಂಗ್ರಹಿಸಲು ಅಧಿಕಾರಿಗಳು ಮನೆ ಬಾಗಿಲಿಗೆ ಬಂದಾಗ ಈ ಹಿಂದಿನ ಎಲ್ಲ ಲೋಪಗಳನ್ನೂ ಮರೆತು ಮಾದಿಗ ಎಂದೇ ಬರೆಯಿಸಬೇಕು’ ಎಂದು ಪ್ರಕಟಣೆಯಲ್ಲಿ ತಿಳಿಸಿದರು.
‘ಒಳಮೀಸಲಾತಿಯನ್ನು ಜನಸಂಖ್ಯೆಗೆ ಅನುಗುಣವಾಗಿ ಮಾಡಲು ನಿಖರ ಅಂಕಿ– ಅಂಶ ನೀಡುವಂತೆ ನ್ಯಾಯಮೂರ್ತಿ ನಾಗಮೋಹನದಾಸ್ ಅವರನ್ನು ರಾಜ್ಯ ಸರ್ಕಾರ ಕೋರಿದೆ. ಈ ನಿಟ್ಟಿನಲ್ಲಿ ಸರ್ಕಾರದ ಪರವಾಗಿ ನೌಕರರು ಎಲ್ಲ ಗ್ರಾಮ, ಪಟ್ಟಣ, ನಗರಗಳಿಗೆ ಭೇಟಿ ನೀಡುತ್ತಾರೆ. ಅಂತಹ ಸಂದರ್ಭದಲ್ಲಿ ‘ಮಾದಿಗ’ ಯುವಕರು, ನಿವೃತ್ತ ನೌಕರರು, ವಿದ್ಯಾವಂತರು ತಮ್ಮ ತಮ್ಮ ಕಾಲೊನಿಗಳ ನಿವಾಸಿಗಳಿಗೆ ‘ಮಾದಿಗ’ ಎಂದು ನಮೂದಿಸುವಂತೆ ಮಾರ್ಗದರ್ಶನ ಮಾಡಬೇಕು’ ಎಂದು ಹೇಳಿದರು.
‘ಅಧಿಕಾರಿಗಳು ಅರ್ಜಿಗಳನ್ನು ತುಂಬುವಾಗ ಪೆನ್ಸಿಲ್ ಬಳಸದೆ ಪೆನ್‌ನಿಂದ ಭರ್ತಿ ಮಾಡುವಂತೆಯೂ ತಾಕೀತು ಮಾಡಬೇಕು’ ಎಂದು ರಾಜು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.