ಸಿರಿಗೆರೆ: ಇಲ್ಲಿನ ಎಂ. ಬಸವಯ್ಯ ವಸತಿ ಪದವಿ ಕಾಲೇಜಿನಲ್ಲಿ ವೇದಾಂತ ಫೌಂಡೇಷನ್ ಮತ್ತು ಹುಬ್ಬಳ್ಳಿಯ ಗುರುಕುಲ್ ಸ್ಕಿಲ್ಸ್ ಮತ್ತು ವೇದಾಂತ ಸೇಸಾ ಗೋವಾ ಆಯೋಜಿಸಲಾಗಿದ್ದ ‘ಉದ್ಯೋಗ ಮೇಳ 2025’ರಲ್ಲಿ 200 ಯುವಜನರು ಉದ್ಯೋಗ ಪಡೆದುಕೊಂಡಿದ್ದಾರೆ.
ಉದ್ಯೋಗ ಮೇಳದಲ್ಲಿ 550ಕ್ಕೂ ಹೆಚ್ಚು ಯುವಕರು ನೋಂದಾಯಿಸಿಕೊಂಡಿದ್ದರು. ಸಂದರ್ಶನ ಪ್ರಕ್ರಿಯೆಯ ನಂತರ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಟಾಟಾ ಎಲೆಕ್ಟ್ರಾನಿಕ್ಸ್, ಟಾಟಾ ಕ್ರೋಮಾ, ಕೊಟಕ್ ಮಹೀಂದ್ರ ಬ್ಯಾಂಕ್, ಎಲ್ ಆ್ಯಂಡ್ ಟಿ ಫೈನಾನ್ಸ್ ಮತ್ತು ಸ್ಥಳೀಯ ಕಂಪನಿಗಳಲ್ಲಿ ವಿವಿಧ ಹುದ್ದೆಗಳಿಗೆ ಆಯ್ಕೆಯಾದರು.
ತರಳಬಾಳು ಜಗದ್ಗುರು ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿ ವಾಮದೇವಪ್ಪ ಮಾತನಾಡಿ, ‘ಉದ್ಯೋಗಾಕಾಂಕ್ಷಿ ಯುವಪೀಳಿಗೆಗೆ ಇಂತಹ ಉದ್ಯೋಗ ಮೇಳಗಳು ಅತ್ಯುತ್ತಮ ಅವಕಾಶ ಕಲ್ಪಿಸುತ್ತವೆ. ಈ ಮಹತ್ವದ ಯೋಜನೆಯು ನಿರುದ್ಯೋಗ ಪಿಡುಗನ್ನು ಕಡಿಮೆ ಮಾಡಲು ಮತ್ತು ಸ್ಥಳೀಯ ಯುವಕರಲ್ಲಿ ಆತ್ಮವಿಶ್ವಾಸ ಮತ್ತು ಆಶಾಭಾವನೆಯನ್ನು ತುಂಬಲು ಸಹಾಯ ಮಾಡುತ್ತದೆ. ನಮ್ಮ ಸುತ್ತಲಿನ ಎಲ್ಲಾ ಕ್ಷೇತ್ರಗಳಲ್ಲಿಯೂ ಸ್ಪರ್ಧೆ ಬಿರುಸಾಗಿದೆ. ಯುವಕರು ಸಿಗುವ ಅವಕಾಶವನ್ನು ಬಳಸಿಕೊಂಡು ಎತ್ತರಕ್ಕೆ ಬೆಳೆಯುವ ಯತ್ನ ಮಾಡಬೇಕು. ಪರಿಶ್ರಮ ನಿಮಗೆ ಯಶಸ್ಸು ತರುತ್ತದೆ’ ಎಂದರು.
ವೇದಾಂತ - ಐಒಕೆಯ ಸಿಇಒ ಶ್ರೀಶೈಲ ಗೌಡ ಮಾತನಾಡಿ, ‘ಉದ್ಯೋಗ ಮೇಳದ ಮೂಲಕ ಗ್ರಾಮೀಣ ಭಾಗದ ಜನರು ಉದ್ಯೋಗ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಈ ಪ್ರದೇಶದ ಯುವಕರ ಜೀವನದಲ್ಲಿ ಸಕಾರಾತ್ಮಕ ಪರಿಣಾಮ ಬೀರಲು ಸಾಧ್ಯವಾಗಿರುವುದಕ್ಕೆ ನಾವು ಹೆಮ್ಮೆ ಪಡುತ್ತೇವೆ’ ಎಂದರು.
ಎಂಬಿಆರ್ ಪದವಿ ಕಾಲೇಜು ಪ್ರಾಂಶುಪಾಲ ಕೆ.ಶಿವಬಸವ ಕುಟುಗಿಮಠ, ಗುರುಕುಲ್ ಸ್ಕಿಲ್ಸ್ ಸಂಸ್ಥಾಪಕ ಮತ್ತು ಸಿಇಒ ಗುರುನಾಥಗೌಡ ಕುರಗುಂದ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.