ADVERTISEMENT

ಜರ್ಮನ್‌ ಮಾದರಿ ತಂತ್ರಜ್ಞಾನ ಬಳಕೆಗೆ ಸಲಹೆ

ಸಿರಿಗೆರೆ ಹೊಸಕೆರೆಗೆ ತರಳಬಾಳುಶ್ರೀ ಭೇಟಿ; ಎಂಜಿನಿಯರ್ ಹಾಗೂ ಗ್ರಾಮಸ್ಥರ ಜೊತೆ ಚರ್ಚೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2022, 7:07 IST
Last Updated 8 ಅಕ್ಟೋಬರ್ 2022, 7:07 IST
ಸಿರಿಗೆರೆ ಹೊಸಕೆರೆ ಬಿರುಕು ಮತ್ತು ಕೋಡಿ ಒಡೆದಿರುವುದನ್ನು ಸಿರಿಗೆರೆಶ್ರೀ ವೀಕ್ಷಿಸಿ, ಎಂಜಿನಿರ್‌ಗಳು ಮತ್ತು ಗ್ರಾಮಸ್ಥರೊಂದಿಗೆ ಚರ್ಚಿಸಿದರು.
ಸಿರಿಗೆರೆ ಹೊಸಕೆರೆ ಬಿರುಕು ಮತ್ತು ಕೋಡಿ ಒಡೆದಿರುವುದನ್ನು ಸಿರಿಗೆರೆಶ್ರೀ ವೀಕ್ಷಿಸಿ, ಎಂಜಿನಿರ್‌ಗಳು ಮತ್ತು ಗ್ರಾಮಸ್ಥರೊಂದಿಗೆ ಚರ್ಚಿಸಿದರು.   

ಸಿರಿಗೆರೆ: ಸಿರಿಗೆರೆಯ ಹೊಸಕೆರೆಗೆ ಶುಕ್ರವಾರ ತರಳಬಾಳು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಭೇಟಿ ನೀಡಿ ಕಾಮಗಾರಿಯನ್ನು ವೀಕ್ಷಿಸಿ ಕಾರ್ಯಪಾಲಕ ಎಂಜಿನಿಯರ್ ರಾಧಾಕೃಷ್ಣ ಅವರಿಂದ ಕೆರೆ ಏರಿಯ ಮಾಹಿತಿ ಪಡೆದುಕೊಂಡರು.

ಏರಿಯ ಪೂರ್ವ ಭಾಗದಿಂದ ಪಶ್ವಿಮ ಭಾಗದಲ್ಲಿರುವ ಕೆರೆಯ ಕೋಡಿವರೆಗೂ ಸ್ವಾಮೀಜಿ ಅವರ ಜೊತೆ ಎಂಜಿನಿಯರ್ ಹಾಗೂ ಗ್ರಾಮಸ್ಥರು ಹೆಜ್ಜೆ ಹಾಕಿ ಕೆರೆಯ ಭದ್ರತೆಯ ಬಗ್ಗೆ ಚರ್ಚಿಸಿದರು.

ಒಡೆದಿರುವ ಕೋಡಿಯನ್ನು ಜರ್ಮನ್ ಮಾದರಿಯ ತಂತ್ರಜ್ಞಾನ ಬಳಸಿ ದುರಸ್ತಿ ಮಾಡುವಂತೆ ಶ್ರೀಗಳು ಅಧಿಕಾರಿಗಳಿಗೆ ತಿಳಿಸಿದರು. ಕೆರೆಯ ಪಕ್ಕದ ಕೊಳವೆ ಬಾವಿಗಳಿಂದ ನೀರು ಉಕ್ಕುತ್ತಿರುವ ದೃಶ್ಯ ಕಂಡು ಹರ್ಷ ವ್ಯಕ್ತಪಡಿಸಿದರು.

ADVERTISEMENT

‘ನೀರಿನ ಒತ್ತಡದಿಂದ ಏರಿಯ ಭದ್ರತೆ ಇಲ್ಲದಿರುವ ಕಾರಣ ಕೆರೆಯ ಏರಿಯು ದಿನವೂ ಸರಿಯುತ್ತಿದೆ. ಅದರಿಂದ ಬಿರುಕುಗಳು ಕಾಣಿಸಿಕೊಂಡಿವೆ. ನೀರಿನಲ್ಲಿ ತಾತ್ಕಾಲಿಕ ಮಣ್ಣಿನ ಚೀಲಗಳನ್ನು ಹಾಕಿ ತಡೆಗೋಡಿ ನಿರ್ಮಾಣ ಮಾಡಿಕೊಂಡು, ಅದಕ್ಕೆ ಮಣ್ಣಿನ ಭದ್ರಗೋಡೆ ಮಾಡುತ್ತಿದ್ದೇವೆ. ನಂತರ ಬಿರುಕು ಬಿಟ್ಟಿರುವ ಭಾಗದ 30 ಮೀಟರ್ ಏರಿಯನ್ನು ದುರಸ್ತಿ ಮಾಡಿ ಸರಿಪಡಿಸಲಾಗುವುದು’ ಎಂದು ಕಾರ್ಯಪಾಲಕ ಎಂಜಿನಿಯರ್ ರಾಧಾಕೃಷ್ಣ ಹೇಳಿದರು.

‘ಏರಿಯ ಸುಭದ್ರತೆ ಕಡಿಮೆ ಇರುವುದಿಂದ ಬರ್ಮ್ ಪ್ರಾವಿಜನ್ ಮಾಡುವುದಕ್ಕೆ ಅವಕಾಶವಿದೆ. ನೀರಿನ ಒತ್ತಡ ಕಡಿಮೆ ಮಾಡಿಕೊಂಡರೆ ಕಾಮಗಾರಿಗೆ ಅನುಕೂಲವಾಗುತ್ತದೆ. ಏರಿಯ ಉದ್ದ 660 ಮೀ, ಕೋಡಿಯ ಉದ್ದ 60 ಮೀ ಇದೆ. 86 ಎಕರೆ ಪ್ರದೇಶದಲ್ಲಿ ಕೆರೆಯು ಆಕ್ರಮಿಸಿಕೊಂಡಿದೆ. 40ರಿಂದ 50 ಜನರ ತಂಡ ಬಿರುಕು ಬಿಟ್ಟ ಏರಿಯನ್ನು ಭದ್ರಗೊಳಿಸಲು ನಾಲ್ಕು ದಿನಗಳಿಂದ ಕೆಲಸ ಮಾಡುತ್ತಿದೆ’ ಎಂದು ಸಹಾಯಕ ಎಂಜಿನಿಯರ್ ಎಂ.ಎನ್.ನವೀನ್ ಮಾಹಿತಿ ನೀಡಿದರು.

ಬಿ.ಲಿಂಗಯ್ಯ ವಸತಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ 250 ವಿದ್ಯಾರ್ಥಿಗಳು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಎಂಜಿನಿಯರ್ ಎಂ.ಎನ್.ನವೀನ್ ಅವರಿಂದ ಮಾಹಿತಿ ಪಡೆದು ಪ್ರಶ್ನೆಗಳನ್ನು ಕೇಳಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಮಾಜಿ ಅಧ್ಯಕ್ಷರು, ಸದಸ್ಯರು, ಸಿಬ್ಬಂದಿಗಳು, ಕಂದಾಯ ಇಲಾಖೆ ಅಧಿಕಾರಿ, ಪಿಡಿಒ ಮತ್ತು ಗ್ರಾಮಸ್ಥರು ಇದ್ದರು.

ಸಣ್ಣ ನೀರಾವರಿ ಇಲಾಖೆಯ ಮುಖ್ಯ ಎಂಜಿನಿಯರ್ ರಾಘವನ್, ಸೂಪರಿಂಟೆಂಡೆಂಟ್‌ ಎಂಜಿನಿಯರ್ ಸಂಜೀವ್ ರಾಜು, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವೆಂಕಟರಮಣ ಗುರುವಾರ ಭೇಟಿ ನೀಡಿ ಮಾಹಿತಿ ಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.