ADVERTISEMENT

Video | ಚಿತ್ರದುರ್ಗದಲ್ಲಿ  ಮಾನವ ರಹಿತ ಲಘು ವಿಮಾನ ಪತನ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2019, 5:24 IST
Last Updated 17 ಸೆಪ್ಟೆಂಬರ್ 2019, 5:24 IST
   

ಚಿತ್ರದುರ್ಗ: ರಕ್ಷಣಾ ಸಂಶೋಧನಾ ಹಾಗೂ ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಮಾನವ ರಹಿತ ಲಘು ವಿಮಾನ ತಾಲ್ಲೂಕಿನ ಜೋಡಿ ಚಿಕ್ಕೇನಹಳ್ಳಿ ಸಮೀಪ ಪತಗೊಂಡಿದೆ.

‘ತಪಾಸ್‌– 4 ಎಡಿಇ 19’ ಹೆಸರಿನ ವಿಮಾನವನ್ನು ಚಳ್ಳಕೆರೆ ತಾಲ್ಲೂಕಿನ ಕುದಾಪುರದ ಡಿಆರ್‌ಡಿಒ ಕೇಂದ್ರದಲ್ಲಿ ಮಂಗಳವಾರ ನಸುಕಿನಲ್ಲಿ ಬಾನಂಗಳಕ್ಕೆ ಹಾರಿಸಿತ್ತು. ಹಾಸನದ ವಾಯು ನೆಲೆಯವರೆಗೂ ಹೋಗಿ ಅದು ಚಳ್ಳಕೆರೆಗೆ ಮರಳಬೇಕಿತ್ತು. ಆದರೆ, ಬೆಳಿಗ್ಗೆ 6.30ರ ಸುಮಾರಿಗೆ ಇದು ರಡಾರ್‌ ಸಂಪರ್ಕ ಕಳೆದುಕೊಂಡಿತ್ತು. 15 ನಿಮಿಷದ ಬಳಿಕ ಅದು ನೆಲಕ್ಕೆ ಅಪ್ಪಳಿಸಿದೆ ಎಂದು ಡಿಆರ್‌ಡಿಒ ಮೂಲಗಳು ಮಾಹಿತಿ ನೀಡಿವೆ.

‘ತಪಾಸ್‌– 4 ಎಡಿಇ 19’ ಲಘು ವಿಮಾನವನ್ನು ಮಂಗಳವಾರ ಮೊದಲ ಬಾರಿಗೆ ಪ್ರಯೋಗಾರ್ಥ ಹಾರಾಟ ನಡೆಸಲಾಗಿತ್ತು. ರಡಾರಿನಿಂದ ಸಂಪರ್ಕ ಕಡೆದುಕೊಂಡ ತಕ್ಷಣ ಡಿಆರ್‌ಡಿಒ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಜೋಡಿ ಚುಕ್ಕೇನಹಳ್ಳಿಯ ರೈತ ಆನಂದಪ್ಪ ಎಂಬುವರ ಅಡಿಕೆ ತೋಟದಲ್ಲಿ ವಿಮಾನ ಉರುಳಿದಸಂಗತಿಯನ್ನು ಗ್ರಾಮಸ್ಥರು ಪೊಲೀಸರಿಗೆ ನೀಡಿದ್ದಾರೆ. ಘಟನೆಯಲ್ಲಿ ವಿಮಾನ ಸಂಪೂರ್ಣ ಛಿದ್ರಗೊಂಡಿದೆ.

ADVERTISEMENT

ಎಸ್‌ಪಿ ಡಾ.ಕೆ.ಅರುಣ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಡಿಆರ್‌ಡಿಯೊ ಸಿಬ್ಬಂದಿ ಕೂಡ ಸ್ಥಳಕ್ಕೆ ಧಾವಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.