ADVERTISEMENT

ಬಸವ ವಸತಿ: 973 ಮನೆ ಮಂಜೂರು

ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿ ಅರ್ಹರಿಗೆ ಹಂಚಿ: ಶಾಸಕ ಜಿ.ಎಚ್.ತಿಪ್ಪಾರೆಡ್ಡಿ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2020, 14:26 IST
Last Updated 21 ನವೆಂಬರ್ 2020, 14:26 IST
ಚಿತ್ರದುರ್ಗದಲ್ಲಿ ವಸತಿ ಯೋಜನೆ ಸಂಬಂಧ ಶನಿವಾರ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ತಹಶೀಲ್ದಾರ್ ಜೆ.ಸಿ. ವೆಂಕಟೇಶಯ್ಯ ಇದ್ದರು.
ಚಿತ್ರದುರ್ಗದಲ್ಲಿ ವಸತಿ ಯೋಜನೆ ಸಂಬಂಧ ಶನಿವಾರ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ತಹಶೀಲ್ದಾರ್ ಜೆ.ಸಿ. ವೆಂಕಟೇಶಯ್ಯ ಇದ್ದರು.   

ಚಿತ್ರದುರ್ಗ: ಬಸವ ವಸತಿ ಯೋಜನೆಯಡಿ ತಾಲ್ಲೂಕಿನ ಪ್ರತಿ ಗ್ರಾಮ ಪಂಚಾಯಿತಿಗೆ ತಲಾ 20 ಮನೆಗಳು ಮಂಜೂರಾಗಿವೆ. ಫಲಾನುಭವಿಗಳಿಗೆ ಹಂಚಲು ಒಟ್ಟು 973 ಮನೆ ನಿರ್ಮಿಸುವ ಗುರಿ ಹೊಂದಲಾಗಿದೆ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ವಸತಿ ಯೋಜನೆ ಸಂಬಂಧ ಶನಿವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ಅಲೆಮಾರಿ ಹಾಗೂ ಯಾದವ ಸಮುದಾಯದ ಫಲಾನುಭವಿಗಳಿಗೆ ಈ ಮನೆಗಳು ಮಂಜೂರಾಗಿವೆ. ತ್ವರಿತವಾಗಿ ನಿರ್ಮಿಸಿಕೊಡುವ ಜವಾಬ್ದಾರಿ ಅಧಿಕಾರಿಗಳದ್ದಾಗಿದೆ’ ಎಂದು ಸೂಚಿಸಿದರು.

‘ಅನುದಾನದ ಕೊರತೆ ಉಂಟಾದರೆ ಗಮನಕ್ಕೆ ತನ್ನಿ ಸರ್ಕಾರದಿಂದ ಮಂಜೂರು ಮಾಡಿಸುತ್ತೇನೆ. ತಾಂತ್ರಿಕ ಸಮಸ್ಯೆಗಳಿದ್ದರೆ, ಬಗೆಹರಿಸಿಕೊಳ್ಳಿ. ವಸತಿ ಯೋಜನೆ ಸೌಲಭ್ಯದಿಂದ ಅರ್ಹರು ವಂಚಿತರಾಗಬಾರದು. ಆಯಾ ಪಂಚಾಯಿತಿ ಪಿಡಿಒಗಳು ಚುರುಕಾಗಿ ಕೆಲಸ ಮಾಡಿ ಸರ್ಕಾರದ ಯೋಜನೆ ಬಡವರಿಗೆ ತಲುಪಿಸಿ’ ಎಂದು ತಾಕೀತು ಮಾಡಿದರು.

ADVERTISEMENT

‘ಅರ್ಜಿ ಸಲ್ಲಿಸಿದ ಬಹುತೇಕರಿಗೆ ಮನೆಗಳು ಮಂಜೂರಾಗಿವೆ. ಪಟ್ಟಿಯಲ್ಲಿ ಕೈಬಿಟ್ಟು ಹೋಗಿದ್ದರೆ ಆತಂಕ ಪಡುವುದು ಬೇಡ. ಅಂಥವರನ್ನು ಗುರುತಿಸಿ ಮನೆಗಳನ್ನು ಹಂಚಿಕೆ ಮಾಡಿ. ಗ್ರಾಮ ಪಂಚಾಯಿತಿ ಚುನಾವಣೆ ಘೋಷಣೆಯಾದರೆ, ನೀತಿ ಸಂಹಿತೆ ಅಡ್ಡಿಯಾಗುತ್ತದೆ. ಅಷ್ಟರೊಳಗೆ ಮನೆಗಳ ಹಂಚಿಕೆ ಕಾರ್ಯ ಪೂರ್ಣಗೊಳಿಸಿ’ ಎಂದು ತಾಕೀತು ಮಾಡಿದರು.

‘ಪ್ರಧಾನಮಂತ್ರಿ ಆವಾಸ್ ಯೋಜನಯಡಿ ಮಂಜೂರಾಗಿರುವ ಮನೆಗಳನ್ನು ಅರ್ಹರಿಗೆ ತಲುಪಿಸುವ ಕಾರ್ಯವಾಗಬೇಕು. 15ನೇ ಹಣಕಾಸು ಯೋಜನೆಯಡಿ ಗ್ರಾಮ ಪಂಚಾಯಿತಿಗೆ ಮಂಜೂರಾಗಿರುವ ಅನುದಾನ ಖರ್ಚು ಮಾಡುವ ಸಂಬಂಧ ಕೆಲಸ ಆರಂಭಿಸಿ’ ಎಂದು ಹೇಳಿದರು.

ಇದೇ ವೇಳೆ ನಡೆದ ಆರಾಧನಾ ಸಮಿತಿ ಸಭೆಯಲ್ಲಿ ‘ಗೊಡಬನಹಾಳ್, ಜೆ.ಎನ್.ಕೋಟೆ, ಇಂಗಳದಾಳ್, ಸಿದ್ಧಾಪುರ, ಗೋನೂರು, ಸೊಂಡೆಕೊಳ, ಭೀಮಸಮುದ್ರ, ಎಂ.ಕೆ.ಹಟ್ಟಿ, ಡಿ.ಎಸ್.ಹಳ್ಳಿ, ಮದಕರಿಪುರ ಸೇರಿ 15 ಗ್ರಾಮಗಳಲ್ಲಿನ ದೇಗುಲಗಳ ದುರಸ್ತಿಗೆ ನೀಡಲಾದ ಅನುದಾನ ಮೊದಲು ಖರ್ಚು ಮಾಡಿ’ ಎಂದು ಶಾಸಕರು ಸೂಚಿಸಿದರು.

ತಹಶೀಲ್ದಾರ್ ಜೆ.ಸಿ. ವೆಂಕಟೇಶಯ್ಯ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಲಿಂಗರಾಜು, ಕಾರ್ಯನಿರ್ವಹಣಾಧಿಕಾರಿ ಎಚ್.ಕೃಷ್ಣನಾಯ್ಕ್, ಜಿಲ್ಲಾ ಪಂಚಾಯಿತಿ ಎಂಜಿನಿಯರ್ ಭಾರತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.