ADVERTISEMENT

ಸೂರ್ಯಗ್ರಹಣ; ಸಾಮೂಹಿಕ ಸಹಪಂಕ್ತಿ ಭೋಜನ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2019, 16:54 IST
Last Updated 26 ಡಿಸೆಂಬರ್ 2019, 16:54 IST
ಚಿತ್ರದುರ್ಗದಲ್ಲಿ ಗುರುವಾರ ಸೂರ್ಯಗ್ರಹಣದ ಅಂಗವಾಗಿ ಮುರುಘಾಮಠದಲ್ಲಿ ನಡೆದ ಸಹಪಂಕ್ತಿ ಭೋಜನದಲ್ಲಿ ಶಿವಮೂರ್ತಿ ಮುರುಘಾ ಶರಣರೊಂದಿಗೆ ವಿವಿಧ ಮಠಾಧೀಶರು, ಕ್ರೈಸ್ತ ಹಾಗೂ ಮುಸ್ಲಿಂ ಧರ್ಮ ಗುರುಗಳು ಆಹಾರ ಸೇವಿಸಿದರು.
ಚಿತ್ರದುರ್ಗದಲ್ಲಿ ಗುರುವಾರ ಸೂರ್ಯಗ್ರಹಣದ ಅಂಗವಾಗಿ ಮುರುಘಾಮಠದಲ್ಲಿ ನಡೆದ ಸಹಪಂಕ್ತಿ ಭೋಜನದಲ್ಲಿ ಶಿವಮೂರ್ತಿ ಮುರುಘಾ ಶರಣರೊಂದಿಗೆ ವಿವಿಧ ಮಠಾಧೀಶರು, ಕ್ರೈಸ್ತ ಹಾಗೂ ಮುಸ್ಲಿಂ ಧರ್ಮ ಗುರುಗಳು ಆಹಾರ ಸೇವಿಸಿದರು.   

ಚಿತ್ರದುರ್ಗ: ಇಲ್ಲಿನ ಮುರುಘಾಮಠದಲ್ಲಿ ಗುರುವಾರ ಸರ್ವಧರ್ಮೀಯರೊಂದಿಗೆ ಸಾಮೂಹಿಕ ಸಹಪಂಕ್ತಿ ಭೋಜನದ ಜತೆಯಲ್ಲಿ ಕಂಕಣ ಸೂರ್ಯಗ್ರಹಣವನ್ನು ವಿಶೇಷವಾಗಿ ಆಚರಿಸಲಾಯಿತು.

ಗ್ರಹಣಗಳ ಸಂದರ್ಭದಲ್ಲಿ ಅನೇಕರು ಅನ್ನ, ಆಹಾರ ಸೇವಿಸುವುದಿಲ್ಲ. ಈ ಕಾರಣದಿಂದಾಗಿ ಮಠದಲ್ಲಿ ಗ್ರಹಣ ಆರಂಭವಾದ ನಂತರ ಬೆಳಿಗ್ಗೆ 8.50ರಿಂದ ಸಹಪಂಕ್ತಿ ಭೋಜನಕ್ಕೆ ಚಾಲನೆ ನೀಡಲಾಯಿತು. ಬೆಳಿಗ್ಗೆ 10.10ರವರೆಗೂ ಮುಂದುವರೆಯಿತು.

ಶಿವಮೂರ್ತಿ ಮುರುಘಾ ಶರಣರು, ವಿವಿಧ ಮಠಾಧೀಶರು, ಕ್ರೈಸ್ತ ಹಾಗೂ ಮುಸ್ಲಿಂ ಸಮುದಾಯದ ಧರ್ಮ ಗುರುಗಳು, ನೂರಾರು ಮಕ್ಕಳು, ಎಸ್‌ಜೆಎಂ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸೇರಿ ಅನೇಕ ಮಂದಿ ಶ್ರೀಮಠದಲ್ಲಿ ತಯಾರಿಸಿದ್ದ ತಿಂಡಿಯನ್ನು ಸವಿಯುವ ಮೂಲಕ ‘ಸೂರ್ಯೋತ್ಸವ’ ಹೆಸರಿನಲ್ಲಿ ಗ್ರಹಣವನ್ನು ಸಂಭ್ರಮಿಸಿದರು.

ನಂತರ ನೆರೆದಿದ್ದವರಿಗೆ ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಇದೇ ಸಂದರ್ಭದಲ್ಲಿ ಬಹುತೇಕರು ಗ್ರಹಣ ವೀಕ್ಷಿಸುವ ಮೂಲಕ ಸುಂದರ ಕ್ಷಣವನ್ನು ಆನಂದಿಸಿದರು.

‘ಗ್ರಹಣ ವೀಕ್ಷಿಸಲು ಜನ ಮನೆ ಬಿಟ್ಟು ಹೊರಗೆ ಬರಬೇಕು. ವೈಚಾರಿಕ ಮನೋಭಾವ ಬೆಳೆಸಿಕೊಳ್ಳಬೇಕು. ಗ್ರಹಣ ನಂತರ ಮನೆಗಳಲ್ಲಿನ ನೀರನ್ನು ಅನೇಕರು ಹೊರಗೆ ಚೆಲ್ಲುತ್ತಾರೆ. ಆದರೆ, ಸಮುದ್ರ, ನದಿ, ಕೆರೆ, ಹೊಂಡ, ಕಲ್ಯಾಣಿ, ಬಾವಿಗಳಲ್ಲಿನ ನೀರನ್ನು ಸಂಪೂರ್ಣವಾಗಿ ಚೆಲ್ಲಲ್ಲಿಕ್ಕೆ ಸಾಧ್ಯವೇ’ ಎಂದು ಪ್ರಶ್ನಿಸಿದ ಶರಣರು, ‘ನೀರು ಜೀವಜಲವಾಗಿದ್ದು, ಅದನ್ನು ಸಂರಕ್ಷಿಸಿ’ ಎಂದು ಮನವಿ ಮಾಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.